ಮೀಸಲಾತಿ: ಗುಜರಾತ್ ಸರಕಾರದ ಅನುಮಾನಾಸ್ಪದ ನಡೆ!

Update: 2016-05-02 18:39 GMT

ಕೊನೆಗೂ ಗುಜರಾತಿನ ಭಾಜಪ ಸರಕಾರ ಪಟೇಲ್ ಸಮುದಾಯದ ಮೀಸಲಾತಿ ಬೇಡಿಕೆಯ ಹೋರಾಟಕ್ಕೆ ಮಣಿದಂತೆ ಕಂಡರೂ, ಆಳದಲ್ಲಿ ತನ್ನದೇ ಗುಪ್ತಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವಲ್ಲಿ ಒಂದುಹೆಜ್ಜೆ ಇಟ್ಟಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಗಳಿಗೆ( ವಾರ್ಷಿಕ ಆರು ಲಕ್ಷ ಆದಾಯದ ಮಿತಿಯಿರುವ ಕುಟುಂಬಗಳಿಗೆ!) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ.ಹತ್ತರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಗುಜರಾತಿನ ಮುಖ್ಯಮಂತ್ರಿಆನಂದಿಬೆನ್ ಪಟೇಲ್, ಭಾಜಪದ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಮತ್ತು ಭಾಜಪದ ರಾಜ್ಯಾಧ್ಯಕ್ಷರಾದ ವಿಜಯ್ ರೂಪಾನಿ ಹಾಗೂ ಕೆಲ ಪ್ರಭಾವಿ ಸಚಿವರುಗಳು ನಡೆಸಿದ ಸಭಯೊಂದರಲ್ಲಿ ಈ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಂಡು ಮೇ ತಿಂಗಳಲ್ಲಿ ಪ್ರಾರಂಭದಲ್ಲಿ ಈ ಬಗ್ಗೆ ಸರಕಾರಿ ಸುತ್ತೋಲೆ ಹೊರಡಿಸುವ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉಚ್ಚ್ಛನ್ಯಾಯಾಲಯದ ಆದೆೇಶದಂತೆ ಸರಕಾರದ ಒಟ್ಟು ಮೀಸಲಾತಿಯ ಪ್ರಮಾಣ ಶೇ.50ನ್ನು ಮೀರಬಾರದೆಂದಿದ್ದು, ಗುಜರಾತ್ ಸರಕಾರದ ಈ ಕ್ರಮ ಸ್ಪಷ್ಟವಾಗಿ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ.ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಸರಕಾರ ಸಿದ್ಧವಿದೆಯೆಂದು ವಿಜಯ್ ರೂಪಾನಿ ತಿಳಿಸಿದ್ದಾರೆ. ಆದರೀ ಕಾನೂನು ಹೋರಾಟ ಸಫಲವಾಗದಿದ್ದರೆ ಏನು ಮಾಡಲಾಗುವುದೆಂಬ ಬಗ್ಗೆ ಅವರೇನು ಮಾಹಿತಿ ತಿಳಿಸಿಲ್ಲ. ಆದರೆ ಇದನ್ನು ಅವರು ಬಾಯಿಬಿಟ್ಟು ಹೇಳಬೇಕಾಗಿಲ್ಲ.

ನ್ಯಾಯಾಲಯ ಇದಕ್ಕೆ ಅವಕಾಶ ನೀಡದೇ ಇದ್ದಲ್ಲಿ ಈಗಾಗಲೇ ದಲಿತರಿಗೆ ಮತ್ತು ಹಿಂದುಳಿ ದವರಿಗೆ ನೀಡಲಾಗುತ್ತಿರುವ ಶೇ.50ರಷ್ಟು ಮೀಸಲಾತಿಯ ಒಳಗೆ ಇದನ್ನು ಸೇರಿಸುವುದು ಅವರ ಗುಪ್ತ ಕಾರ್ಯಸೂಚಿಯಾಗಿದೆಯೆಂದು ಅರ್ಥಮಾಡಿಕೊಳ್ಳಬಹುದು.

ಸದ್ಯಕ್ಕೆ ಗುಜರಾತಿನಲ್ಲಿ ಪರಿಶಿಷ್ಟ ಜಾತಿಗೆ ಶೇ.7ರಷ್ಟು, ಪರಿಶಿಷ್ಟ ಪಂಗಡಕ್ಕೆ ಶೇ.15ರಷ್ಟು ಮತ್ತು ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದ್ದು ಮುಂದೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ನೀಡಲಾಗುವ ಶೇ.10ರಷ್ಟು ಮೀಸಲಾತಿಯು ಈಗಾಗಲೇ ನೀಡುತ್ತಿರುವ ಒಟ್ಟು ಶೇ.49ರಷ್ಟು ಮೀಸಲಾತಿಯ ಒಳಗೆಯೇ ಸೇರುವಂತೆ ಮಾಡುವ ಕಾನೂನನ್ನು ಬಿಜೆಪಿಯ ಸರಕಾರ ತಂದರೆ ಅಚ್ಚರಿಯೇನಿಲ್ಲ.

 ಭಾಜಪದ ಈ ನಿರ್ಧಾರದ ಹಿಂದಿರುವುದು ಸಂಪೂರ್ಣವಾಗಿ ರಾಜಕೀಯ ಕಾರಣಗಳೇ ಹೊರತು ಯಾವುದೇ ವರ್ಗದ ಕಲ್ಯಾಣದ ಗುರಿಯೇನಲ್ಲ. ಕಳೆದ ವರ್ಷ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಪ್ರಾರಂಭವಾದ ಮೀಸಲಾತಿಯ ಬೇಡಿಕೆಯ ಚಳವಳಿ ಬಹಳ ತೀವ್ರವಾಗಿ ನಡೆದಿದ್ದು ಭಾಜಪದ ಪ್ರಭಾವ ಹೆಚ್ಚಾಗಿರುವ ಭಾಗಗಳಾದ ಅಹ್ಮದಾಬಾದ್, ಮೆಹ್ಸಾನ, ಸೂರತ್ ಮುಂತಾದ ಕಡೆಗಳಲ್ಲಿಯೇ. ಈ ಪ್ರದೇಶಗಳಲ್ಲಿ ಪಟೇಲರ ಮುಷ್ಕರ ತೀವ್ರವಾದ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಕರ್ಪ್ಯೂ ಹಾಕುವಷ್ಟರ ಮಟ್ಟಿಗೆ ಗಂಭೀರತೆಯನ್ನು ಸೃಷ್ಟಿಸಿತ್ತು. ಪಟೇಲ್ ಸಮುದಾಯವು ಯಾವತ್ತಿಗೂ ಭಾಜಪದ ಮುಖ್ಯ ಬೆಂಬಲಿಗ ಶಕ್ತಿಯಾಗಿದ್ದು ಈ ಸಮುದಾಯ ತನ್ನಿಂದ ದೂರ ಸರಿಯಬಾರದೆಂಬ ಕಾರಣಕ್ಕೆ ಭಾಜಪ ಈ ನಿರ್ಣಯವನ್ನು ಕೈಗೊಂಡಂತೆ ಕಾಣುತ್ತಿದೆ. ಆದರೆ ಭಾಜಪ ಸರಕಾರವು ತಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂಬ ಪಟೇಲರ ಬೇಡಿಕೆಯನ್ನು ಒಪ್ಪಿಕೊಳ್ಳದೆ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳೆಂಬುದನ್ನು ಒತ್ತಿ ಹೇಳುತ್ತಾ ಗುಜರಾತಿನ ಎಲ್ಲ ಮೇಲ್ಜಾತಿಗಳಿಗೂ ಈ ಮೀಸಲಾತಿಯ ಲಾಭ ದೊರೆಯುವಂತೆ ಮಾಡಿದೆ.

ಸರಕಾರದ ಈ ನಿರ್ಧಾರದ ಹಿಂದೆ ಭಾಜಪದ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾರವರ ಪ್ರಭಾವ ಬಹಳ ಇದ್ದು ಅವರು ಭಾಜಪಕ್ಕೆ ರಾಜಕೀಯ ಲಾಭವಾಗುವ ರೀತಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಸೂಕ್ಷ್ಮವಾಗಿ ಅವಲೋಕಿಸಿದರೆ ಈ ವಿಷಯದಲ್ಲಿ ಭಾಜಪದ ರಾಜಕೀಯ ಲೆಕ್ಕಾಚಾರಗಳು ಅರ್ಥವಾಗುತ್ತವೆ:

ಮೊದಲನೆಯದಾಗಿ ಪಟೇಲ್ ಸಮುದಾಯ ಈ ಮೀಸಲಾತಿಯ ವಿಚಾರದಲ್ಲಿ ತನ್ನಿಂದ ದೂರವಾಗಿ ಕಾಂಗ್ರೆಸ್ಸಿಗೆ ಹತ್ತಿರವಾಗುವುದನ್ನು ತಡೆಯುವುದಾಗಿದೆ.

ಎರಡನೆಯದಾಗಿ, ಎಲ್ಲ ಮೇಲ್ಜಾತಿಗಳಿಗೂ ಶೇ.10ರಷ್ಟು ಮೀಸಲಾತಿ ದೊರೆಯುವುದರಿಂದ ಹಿಂದೂ ಸಮುದಾಯದ ಮೇಲ್ಜಾತಿಗಳ ಜೊತೆ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳನ್ನು ಸ್ವಲ್ಪ ಮಟ್ಟಿಗೆ ಓಲೈಸಿದಂತಾಗಿದೆ.

ಮೂರನೆಯದಾಗಿ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಮುನ್ನ ತಮ್ಮ ಪಕ್ಷ ಮೇಲ್ಜಾತಿಗಳ ಪರವಿದೆಯೆಂಬ ಸೂಚನೆಯನ್ನು ಆ ಜಾತಿಗಳಿಗೆ ತಿಳಿಸುವುದಾಗಿದೆ.

ನಾಲ್ಕನೆಯದಾಗಿದೆ. ಈ ವಿಚಾರದಲ್ಲಿ ಕಾಂಗೆಸ್ಸಿನ ಪ್ರತಿಭಟನಾ ಶಕ್ತಿಯನ್ನು ಉಡುಗಿಸಿದಂತಾಗಿದೆ. ಯಾಕೆಂದರೆ ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶೇ.20ರಷ್ಟು ಮೀಸಲಾತಿ ನಿಗದಿ ಪಡಿಸುವ ಖಾಸಗಿ ಬಿಲ್ ಒಂದನ್ನು ಮಂಡಿಸಿತ್ತು. ಆದರೆ ಈ ಬಿಲ್ ಸಭೆಯಲ್ಲಿ ಚರ್ಚೆಗೇ ಬರಲಿಲ್ಲ. ಹಾಗಾಗಿ ಈ ವಿಷಯದಲ್ಲಿ ಕಾಂಗ್ರೆಸ್ ಭಾಜಪ ಹೊರಡಿಸುವ ಆದೇಶವನ್ನು ವಿರೋಧಿಸುವ ಅವಕಾಶವನ್ನು ಕಳೆದುಕೊಂಡಿದೆ.

 ಕೊನೆಯದಾಗಿ, ಗುಜರಾತಿನಲ್ಲಿ ರಾಜಕೀಯವಾಗಿ ಪ್ರಬಲವಾಗಿದ್ದ ಪಟೇಲ್ ಸಮುದಾಯದ ಐಕ್ಯತೆಯನ್ನು ಒಡೆದು ಅದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವಲ್ಲಿ ಭಾಜಪ ಭಾಗಶ: ಯಶಸ್ವಿಯಾಗಿದೆ.

  ಒಟ್ಟಿನಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ಕಲ್ಪಿಸುವ ಮೂಲಕ ಭಾಜಪ ತಾನು ಯಾವತ್ತಿಗೂ ಮೇಲ್ಜಾತಿಗಳ ಮತ್ತು ಉದ್ಯಮಿಗಳ ಪರವಾದ ಸರಕಾರವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ನಾಳೆ ಇತರೇ ರಾಜ್ಯಗಳ ಮೇಲ್ಜಾತಿಗಳು ಸಹ ಇಂತಹುದೇ ಬೇಡಿಕೆಯನ್ನಿಟ್ಟು ಹೋರಾಟ ನಡೆಸಲು ಮುಂದಾಗುವುದು ಖಚಿತ. ಇವತ್ತು ಗುಜರಾತಿನಲ್ಲಿ ಆದದ್ದು ನಾಳೆ ಕರ್ನಾಟಕದಲ್ಲಿ ಆಗುವುದಿಲ್ಲವೆಂಬುದಕ್ಕೇನು ಗ್ಯಾರಂಟಿ? ಈಗಾಗಲೇ ನಮ್ಮಲ್ಲಿ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಬಗ್ಗೆ ಮೇಲ್ಜಾತಿಯವರಲ್ಲಿ ಅಪ್ರಕಟಿತ ಅಸಹನೆಯೊಂದು ಹೊಗೆಯಾಡುತ್ತಿದೆ. ಇಂತಹದ್ದರಲ್ಲಿ ನಾಳೆ ಕರ್ನಾಟಕದ ಮೇಲ್ಜಾತಿಗಳು ಗುಜರಾತ್ ಮಾದರಿಯ ಅನುಷ್ಠಾನಕ್ಕೆ ಪಟ್ಟು ಹಿಡಿದು ಕೂತರೆ ಇಲ್ಲಿಯ ಸರಕಾರಗಳು ಅದನ್ನೇ ನೆಪವಾಗಿಟ್ಟುಕೊಂಡು ಮೀಸಲಾತಿಯ ನಿಜವಾದ ಆಶಯವನ್ನು ಹಾಳುಗೆಡವಲು ಮುಂದಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ 2018ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಹವಣಿಕೆಯಲ್ಲಿರುವ ಕರ್ನಾಟಕದ ಭಾಜಪದ ಇಂತಹ ಗುಪ್ತ ಕಾರ್ಯಸೂಚಿಯ ಬಗ್ಗೆ ದಲಿತರು ಮತ್ತು ಹಿಂದುಳಿದವರು ಎಚ್ಚರಿಕೆಯಿಂದ ಇರುವುದು ಅವಶ್ಯವಾಗಿದೆ.

Writer - ಕು.ಸ.ಮಧುಸೂದನ ರಂಗೇನಹಳ್ಳಿ

contributor

Editor - ಕು.ಸ.ಮಧುಸೂದನ ರಂಗೇನಹಳ್ಳಿ

contributor

Similar News