14 ಕೋಟಿ ರೂ.ವೌಲ್ಯದ ರಾಜಕಾಲುವೆ ಒತ್ತುವರಿ ತೆರವು

Update: 2016-05-05 18:22 GMT

ಬೆಂಗಳೂರು, ಮೇ 5: ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 14 ಕೋಟಿ ರೂ. ಮೌಲ್ಯದ ರಾಜಕಾಲುವೆ ಒತ್ತುವರಿಯನ್ನು ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಇಲ್ಲಿನ ಥಣೀಸಂದ್ರ ವಾರ್ಡ್‌ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು 11 ಮನೆ, ಎರಡು ಫ್ಯಾಕ್ಟರಿ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಗುರುವಾರ ಮೇಯರ್ ಮತ್ತು ಜಂಟಿ ಆಯುಕ್ತ ರ್ಫರಾಜ್ ಖಾನ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸರ್ವೆ ನಂ.46, 47, 48, 49, 63, 64, 70, 71, 72, 73, 74 ರಾಜಕಾಲುವೆ ಒತ್ತುವರಿಯಾಗಿರುವುದು ಕಂಡುಬಂದಿದ್ದು, ತಕ್ಷಣದಿಂದಲೇ ಒತ್ತುವರಿ ತೆರವುಗೊಳಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮೇಯರ್ ಮಂಜುನಾಥ್‌ರೆಡ್ಡಿ ಸೂಚನೆ ನೀಡಿದರು.

ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಕಾಲುವೆಗಳು ಉಕ್ಕಿ ಹರಿದು ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ, ಮಳೆಗಾಲಕ್ಕೂ ಮುನ್ನ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಮೇಯರ್ ಆಗಿ ಅಧಿಕಾರ ಸ್ವೀಕರಿಸಿದಾಗ ಒತ್ತುವರಿ ಆಸ್ತಿಯನ್ನು ತೆರವುಗೊಳಿಸುವುದಾಗಿ ಮಾತು ನೀಡಿದ್ದೆ ಎಂದು ತಿಳಿಸಿದ ಅವರು, ಥಣೀಸಂದ್ರದಲ್ಲಿ ಒತ್ತುವರಿಯಾಗಿರುವುದು ಸರ್ವೆಯಿಂದ ಖಚಿತವಾಗಿದೆ. ಈ ನಿಟ್ಟಿನಿಂದ ತೆರವುಗೊಳಿಸಲಾಗಿದೆ ಎಂದರು.

ಮಳೆಗಾಲದಲ್ಲಿ ಕಾಲುವೆಗಳು ಉಕ್ಕಿ ಹರಿದು, ಈಗಾಗಲೇ ಹಲವು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಸಂಭವಿಸಬಾರದು ಎಂಬ ಮುಂದಾಲೋಚನೆಯಿಂದ ಒತ್ತುವರಿ ರಾಜಕಾಲುವೆಯನ್ನು ತೆರವುಗೊಳಿಸಲಾಗುತ್ತಿದ್ದು, ನಗರದಲ್ಲಿ ಎಲ್ಲೇ ರಾಜಕಾಲುವೆ ಒತ್ತುವರಿಯಾಗಿದ್ದರೂ ತೆರವುಗೊಳಿಸುವುದಾಗಿ ಮೇಯರ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರು ಸಿದ್ದೇಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News