ಹೃದಯ, ಶ್ವಾಸಕೋಶದ ಬಳಿಕ ಈಗ ಶಿಶ್ನದ ಸರದಿ !

Update: 2016-05-17 03:15 GMT

ಬೋಸ್ಟನ್, ಮೇ 17: ಇಲ್ಲಿನ ಆಸ್ಪತ್ರೆಯೊಂದರ ವೈದ್ಯರು ವೈದ್ಯಕೀಯ ವಿಸ್ಮಯ ಸಾಧಿಸಿದ್ದು, ಅಮೆರಿಕದಲ್ಲೇ ಮೊಟ್ಟಮೊದಲ ಬಾರಿಗೆ ವ್ಯಕ್ತಿಯೊಬ್ಬರ ಶಿಶ್ನಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೊಂದು ವೈದ್ಯಕೀಯ ಲೋಕದ ಮೈಲುಗಲ್ಲು ಎಂದು ವೈದ್ಯರು ಬಣ್ಣಿಸಿದ್ದಾರೆ.

ಥಾಮಸ್ ಮನ್ನಿಂಗ್ ಎಂಬ 64 ವರ್ಷದ ವ್ಯಕ್ತಿ ಮೂರು ವರ್ಷಗಳ ಹಿಂದೆ ತನ್ನ ಶಿಶ್ನವನ್ನು ಕ್ಯಾನ್ಸರ್ ಕಾರಣದಿಂದ ಕಳೆದುಕೊಂಡಿದ್ದರು. ದಾನಿಯೊಬ್ಬರು ನೀಡಿದ ಶಿಶ್ನವನ್ನು ಇವರಿಗೆ ಕಸಿ ಮಾಡಲಾಯಿತು. ವಿಶ್ವದಲ್ಲೇ ಇಂಥ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಇದು ಮೂರನೇ ನಿದರ್ಶನ. ಈ ರೋಗಿ ಮುಂದಿನ ಕೆಲ ತಿಂಗಳಲ್ಲಿ ಶಿಶ್ನದ ಮೂಲಕ ಮೂತ್ರ ವಿಸರ್ಜನೆ ಮಾಡಲು ಹಾಗೂ ಲೈಂಗಿಕ ಕ್ರಿಯೆಗೂ ಸಜ್ಜಾಗಲಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಈ ಶಸ್ತ್ರಚಿಕಿತ್ಸೆಗೆ ಸುಮಾರು 15 ಗಂಟೆ ತಗಲಿತು. ಮೆಸೆಚುಸೆಟ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಈ ಅಪೂರ್ವ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಶಾಸ್ತ್ರಜ್ಞರು, ಮಾನಸಿಕ ತಜ್ಞರು, ಪ್ಲಾಸ್ಟಿಕ್ ಸರ್ಜರಿ ತಜ್ಞರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ತಜ್ಞ ವೈದ್ಯರು ಭಾಗವಹಿಸಿದ್ದರು.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ತನ್ನ ಅನುಭವವನ್ನು ಇತರರ ಜತೆ ಹಂಚಿಕೊಂಡು, ಇಂಥ ರೋಗಿಗಳ ಮುಜುಗರ ದೂರ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಮ್ಯಾನಿಂಗ್ ಹೇಳಿದ್ದಾರೆ. ಶಿಶ್ನಕ್ಕೆ ಗಾಯಗಳಾದರೂ ಮತ್ತೆ ಮಾಮೂಲಿನಂತಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂಬ ಭರವಸೆಯನ್ನು ಇಂಥ ಸಮಸ್ಯೆ ಇರುವವರಲ್ಲಿ ಮೂಡಿಸುವುದು ತಮ್ಮ ಗುರಿ ಎಂದು ಹೇಳಿದ್ದಾರೆ.

ಕಾರು ಅಪಘಾತವೊಂದರಲ್ಲಿ ಶಿಶ್ನ ಕಳೆದುಕೊಂಡ ವ್ಯಕ್ತಿಯೊಬ್ಬರು ಇದೇ ಆಸ್ಪತ್ರೆಯಲ್ಲಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ಮೊಟ್ಟಮೊದಲ ಶಿಶ್ನಕಸಿಯನ್ನು ದಕ್ಷಿಣ ಆಫ್ರಿಕಾದಲ್ಲಿ 2015ರಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News