ನೀರಾವರಿ: ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಕ್ರಮ ಅಗತ್ಯ

Update: 2016-05-23 18:31 GMT

ರಾ ಜ್ಯದಾದ್ಯಂತ ಜಲಮಟ್ಟ ಶೋಚನೀಯ ಮಟ್ಟಕ್ಕೆ ತಲುಪಿದೆ. ರಾಜ್ಯದ ಕೆರೆಗಳ ಹೂಳುತೆಗೆಯುವ ಹಾಗೂ ಕೆರೆಗಳನ್ನು ಪುನಶ್ಚೇತನಗೊಳಿಸುವ ಯೋಜನೆಯಲ್ಲಿ 2014-15ರಲ್ಲಿ 72 ಕೋಟಿ ರೂ. ಗಳ ಹಂಚಿಕೆಯಾಗಿದ್ದರೂ ಕೇವಲ 45.25 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ. 2015-16ರಲ್ಲಿ ಫೆಬ್ರವರಿಯ ಅಂತ್ಯದ ವರೆಗೆ ವೆಚ್ಚವೇ ಕಾಣುತ್ತಿಲ್ಲ. ನಬಾರ್ಡ್ ಯೋಜನೆಯಲ್ಲಿ 2014-15ರಲ್ಲಿ ಹಂಚಿಕೆಯೂ ಇಲ್ಲ ವೆಚ್ಚವೂ ಇಲ್ಲ. ಆದರೆ 2015-16ರಲ್ಲಿ ಫೆಬ್ರವರಿ ಅಂತ್ಯದವರೆಗೆ 11 ತಿಂಗಳಲ್ಲಿ 13.74 ಕೋಟಿ ರೂ. ಹಂಚಿಕೆಯಾಗಿದ್ದರೂ ವೆಚ್ಚ ಕೇವಲ 4.31 ಕೋಟಿ ರೂ. ಎಂದು ಸರಕಾರ ಹೇಳಿದೆ. ಶಿಕಾರಿಪುರ ಶಾಸಕರ ಪ್ರಶ್ನೆಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 21,306 ಕೆರೆಗಳಿವೆಯೆಂದು 23-3-2016ರಂದು ಸರಕಾರ ತಿಳಿಸಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಕೆರೆಗಳಿಗೆ ಇಷ್ಟೊಂದು ಕಡಿಮೆ ವೆಚ್ಚ ಮಾಡಿರುವುದು ಸರಕಾರಕ್ಕೆ ಸರಿ ಕಾಣುತ್ತಿದೆಯೇ? ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್‌ಗಳಲ್ಲಿ ಇಂಜಿನಿಯರರ ದಂಡೇ ಇದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆಯೇನಿಲ್ಲ. ಈ ವಿಷಯ ಅವರ ಗಮನಕ್ಕೆ ಬಂದಿರಲಿಲ್ಲವೇ? ಈ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯಿಸುವುದು ಅವರ ಕರ್ತವ್ಯವಾಗಬೇಕಿತ್ತು.
ರಾಜ್ಯದಲ್ಲಿ ಕೆರೆಗಳ ಸಂಖ್ಯೆ ಈಗ ಒಟ್ಟು 36,589ಕ್ಕೆ ಇಳಿದಿದೆ. ಇವುಗಳಲ್ಲಿ ಪಂಚಾಯತ್‌ರಾಜ್ ಇಲಾಖೆಯಲ್ಲಿ 33,374 ಕೆರೆಗಳು, ಸಣ್ಣ ನೀರಾವರಿ ಇಲಾಖೆಯಲ್ಲಿ 1,354 ಕೆರೆಗಳು ಹಾಗೂ ಭಾರೀ ಮತ್ತು ಮಧ್ಯಮ ನೀರಾವರಿ ಇಲಾಖೆಯಲ್ಲಿ 1,831 ಕೆರೆಗಳು ಇದ್ದು ಇವೆಲ್ಲ ಕೆರೆಗಳ ಕಾಮಗಾರಿಗಳ ವಿವರಗಳನ್ನು ಪಂಚಾಯತ್‌ನ ಗ್ರಾಮಸಭೆಗಳಲ್ಲಿ ತಿಳಿಸಬೇಕಾದದ್ದು ಸಂಬಂಧಿಸಿದವರ ಕರ್ತವ್ಯವಾಗಬೇಕು. ತಾವೆಸಗುವ ಅಕ್ರಮ ಹಾಗೂ ಕರ್ತವ್ಯಲೋಪ ಹೊರಗಿನವರಿಗೆ ತಿಳಿಯಬಾರದೆಂಬ ದುರುದ್ದೇಶದಿಂದಲೇ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯ ವಿವರ ಸಭೆಯಲ್ಲಿ ತಿಳಿಸುತ್ತಿಲ್ಲ.
ಇಂತಹ ಅವ್ಯಹಾರ ಮತ್ತು ಲೋಪದೋಷಗಳನ್ನು ಕಂಡುಹಿಡಿದು ಸಂಬಂಧಿಸಿದವರಿಗೆ ಮಾರ್ಗದರ್ಶನ ಮಾಡಲು ಪ್ರತಿಯೊಂದು ಗ್ರಾಮಸಭೆಯಲ್ಲಿ ಒಂಬತ್ತು ಮಂದಿ ಸದಸ್ಯರ ವಿಜಿಲೆನ್ಸ್ ಸಮಿತಿ ನೇಮಕಮಾಡಬೇಕೆಂದು ಕೇಂದ್ರ ಸರಕಾರದ ಆದೇಶವಿದ್ದರೂ ಈ ಆದೇಶವನ್ನು ರಾಜ್ಯ ಸರಕಾರ ಮುಚ್ಟಿಟ್ಟು ಸಮಿತಿ ನೇಮಕ ಮಾಡದಿರುವುದು ಅಕ್ಷಮ್ಯ ಅಪರಾಧವಾಗಿದೆ.
ರಾಜ್ಯದಲ್ಲಿ 2014-15ರಲ್ಲಿ 17 ಕೋಟಿ ರೂ.ಗಳಲ್ಲಿ ಕೇವಲ 7.12 ಕೋಟಿ ರೂ.ಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ. ಅದರಲ್ಲಿ ಕಲಬುರಗಿ ಜಿಲ್ಲೆಗೆ ಹಂಚಿಕೆಯಾದ 3 ಕೋಟಿ ರೂ.ಗಳಲ್ಲಿ 58.98 ಲಕ್ಷ ರೂ.ಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ. ಕೊಪ್ಪಳ ಜಿಲ್ಲೆಗೆ ಹಂಚಿಕೆಯಾದ 1.25 ಕೋಟಿ ರೂ.ಗಳಲ್ಲಿ ಕೇವಲ 60.66 ಲಕ್ಷ ರೂ.ಗಳನ್ನು ವೆಚ್ಚಮಾಡಲಾಗಿದೆ. ಬೀದರ ಜಿಲ್ಲೆಗೆ 1.51 ಕೋಟಿ ರೂ. ಹಂಚಿಕೆಯಾಗಿದ್ದರೂ ಕೇವಲ 74.90 ಲಕ್ಷ ವೆಚ್ಚವಾಗಿದೆ. ಧಾರವಾಡ ಜಿಲ್ಲೆಗೆ ಕೇವಲ 12.26 ಲಕ್ಷ ರೂ. ಹಂಚಿಕೆಯಾಗಿದ್ದರೂ ಅದರಲ್ಲಿ ಕೇವಲ 5.66 ಲಕ್ಷ ರೂ. ಖರ್ಚಾಗಿದೆ. ಶಿವಮೊಗ್ಗ ಜಿಲ್ಲೆಗೆ ಹಂಚಿಕೆಯಾದ 14.50 ಲಕ್ಷ ರೂ.ಗಳಲ್ಲಿ ವೆಚ್ಚಮಾಡಿದ್ದು ಕೇವಲ 7.24 ಲಕ್ಷ ರೂ. ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗೆ ಒಂದಿಷ್ಟೂ ಹಂಚಿಕೆಯಾದಂತೆ ಕಾಣುತ್ತಿಲ್ಲ. ಇದು ಹಂಚಿಕೆಯಲ್ಲಾದ ತಾರತಮ್ಯವಲ್ಲವೇ?
  2015-16ರ ಹನ್ನೊಂದು ತಿಂಗಳ ಅವಧಿಯಲ್ಲಿ ಹಂಚಿಕೆಯಾದ 1.35 ಕೋಟಿ ಹಣದಲ್ಲಿ ಎಲ್ಲ ಹಣವೂ ಖರ್ಚಾಗಿದೆಯೆಂದು ತೋರಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಹಂಚಿಕೆಯಾದ ಮೊತ್ತ 13.24 ಕೋಟಿ ರೂ.ನಲ್ಲಿ ಕೇವಲ 7.93 ಕೋಟಿ ರೂ. ಖರ್ಚಾಗಿದೆ. ಹಾವೇರಿ ಜಿಲ್ಲೆಗೆ ಹಂಚಿಕೆಯಾದ 5 ಕೋಟಿ ರೂ.ನಲ್ಲಿ 2.96 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ರಾಮನಗರಕ್ಕೆ ಹಂಚಿಕೆಯಾದ 10 ಲಕ್ಷ ರೂ.ನಲ್ಲಿ 7.23 ಲಕ್ಷ ರೂ. ಮಾತ್ರ ವೆಚ್ಚವಾಗಿದೆ. ಅಲ್ಲದೆ ಚಿಕ್ಕಮಗಳೂರು, ಕೊಡಗು, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಗೆ ಒಂದಿಷ್ಟೂ ಹಂಚಿಕೆಯಾಗಿಲ್ಲ. ಈ ಎಲ್ಲ ಯದ್ವಾತದ್ವಾ ಹಂಚಿಕೆ ನೋಡಿದರೆ ಅಧಿಕಾರಿಗಳ ಅಕ್ರಮ, ಕರ್ತವ್ಯ ಲೋಪ ಗೋಚರವಾಗುತ್ತದೆ.

Writer - ಬಿ. ಜಿ. ಬಣಕಾರ

contributor

Editor - ಬಿ. ಜಿ. ಬಣಕಾರ

contributor

Similar News