ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಸಂತ್ರಸ್ತ ಹಿಂದೂ ಮಹಿಳೆಯರ ಬಗ್ಗೆ ಪ್ರಧಾನಿ ಮೌನವೇಕೆ? : ಪ್ರಿಯಾಂಕ್‌ ಖರ್ಗೆ

Update: 2024-05-07 07:02 GMT

ಕಲಬುರಗಿ: ಪ್ರಜ್ವಲ್ ರೇವಣ್ಣರ ಲೈಂಗಿಕ ಹಗರಣದ ಬಗ್ಗೆ ತಿಳಿದೂ ಬಿಜೆಪಿ ಏಕೆ ಅವರಿಗೆ ಟಿಕೆಟ್ ನೀಡಿತು ? ಹಾಗೂ ಆತನ ಕುರಿತು ಪ್ರಧಾನಿ ಮೋದಿಯೇಕೆ ಈಗಲೂ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತಮ್ಮ ಭಾವ ರಾಧಾಕೃಷ್ಣ ದೊಡ್ಡಮನಿ ಪರವಾಗಿ ನಡೆಸುತ್ತಿರುವ ಪ್ರಚಾರದ ನಡುವೆ ಸಂದರ್ಶನ ನೀಡಿರುವ ಅವರು, ‘ಪ್ರಜ್ವಲ್ ರೇವಣ್ಣ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿಲ್ಲವೇ? ಈ ಪ್ರಕರಣದಲ್ಲಿ ಅವರ ಮಂಗಳ ಸೂತ್ರಗಳನ್ನು ಪಣಕ್ಕೊಡ್ಡಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ವಾರದ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಪ್ರಧಾನಿ ಮೋದಿ, ಪ್ರಜ್ವಲ್ ರೇವಣ್ಣರಿಗೆ ನೀಡುವ ಪ್ರತೀ ಮತವೂ ನನ್ನನ್ನು ಬಲಿಷ್ಠಗೊಳಿಸುತ್ತದೆ ಎಂದು ಹೇಳಿದ್ದರು. ಇದು ದೇಶದಿಂದ ಪ್ರಜ್ವಲ್ ರೇವಣ್ಣ ಪರಾರಿಯಾಗಲು ಮೋದಿ ಹಾಗೂ ಅಮಿತ್ ಶಾ ನೆರವು ನೀಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಂದರ್ಶನದ ಆಯ್ದ ಭಾಗ:

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನಿರೀಕ್ಷೆಗಳೇನು?

ಉ.: ತುಂಬಾ ಸಕಾರಾತ್ಮಕವಾಗಿದೆ. ಕಾರ್ಯಕರ್ತರು ಉತ್ಸಾಹದಿಂದಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ನಮ್ಮ ಭರವಸೆಯನ್ನು ನಾವು ಜಾರಿಗೊಳಿಸಿದ್ದೇವೆ. ಇದು ರಾಜ್ಯದಾದ್ಯಂತ ಕುಟುಂಬಗಳಿಗೆ ಆರ್ಥಿಕ ಸ್ಥಿರತೆಯನ್ನು ನೀಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಭ್ರಷ್ಟಾಚಾರ ವಿಷಯವಾಗಿ ಉಳಿದಿಲ್ಲ. ಬಂಡವಾಳ ಹೂಡಿಕೆಗೆ ವಾತಾವರಣ ಪೂರಕವಾಗಿದೆ. ಕಾಂಗ್ರೆಸ್ ಪಕ್ಷವು ಮೊದಲ ಹಂತದ ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ನನಗನ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕವು ನಮಗೆ ಹೆಚ್ಚು ಸ್ಥಾನಗಳನ್ನು ನೀಡಲಿವೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಜನರು ಚುನಾಯಿಸಲು ಮೂರು ಬಲವಾದ ಕಾರಣಗಳಿವೆ.

1. ಅತ್ಯುತ್ತಮವಾಗಿ ಜಾರಿಗೊಳಿಸಲಾಗಿರುವ ಐದು ಗ್ಯಾರಂಟಿಗಳು

2. ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ಸಂಪೂರ್ಣವಾಗಿ ಶರಣಾಗಿರುವುದು

3. ಕರ್ನಾಟಕದ ತೆರಿಗೆ ಹಾಗೂ ಬರ ಪರಿಹಾರದ ಸೂಕ್ತ ಪಾಲನ್ನು ನೀಡದ ಬಗ್ಗೆ ಕನ್ನಡಿಗರು ಕೇಂದ್ರ ಸರಕಾರದ ಬಗ್ಗೆ ಸಿಟ್ಟಾಗಿದ್ದಾರೆ. ಬಿಜೆಪಿಯು ಕನ್ನಡಿಗರಿಂದ ತೆರಿಗೆ ಹಾಗೂ ಮತಗಳನ್ನು ಪಡೆದರೂ ಪ್ರತಿಯಾಗಿ ಏನನ್ನೂ ನೀಡುತ್ತಿಲ್ಲ. ರಾಜ್ಯ ಸರಕಾರವು ಸುಪ್ರೀಂ ಕೋರ್ಟ್ ಮೊರೆ ಹೋದ ನಂತರವಷ್ಟೇ ನಮ್ಮ ನೈಜ ಬೇಡಿಕೆಯ ಭಾಗಶಃ (ಶೇ.20ರಷ್ಟು) ಬರ ಪರಿಹಾರದ ಮೊತ್ತವನ್ನು ಕೇಂದ್ರದ ಬಿಜೆಪಿ ಸರಕಾರ ಅನಿವಾರ್ಯವಾಗಿ ಬಿಡುಗಡೆ ಮಾಡಿದೆ. ಇದು ಅಪಮಾನಕರ.

ಹುಬ್ಬಳ್ಳಿಯಲ್ಲಿನ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಕಾಂಗ್ರೆಸ್ ಸರಕಾರ ನಿಭಾಯಿಸಿದ ರೀತಿ ಬಿಜೆಪಿಗೆ ನೆರವು ನೀಡಿದೆ ಎಂದು ನೀವು ಭಾವಿಸುತ್ತೀರಾ?

ಉ.: ನಾನು ಹಾಗೆ ಭಾವಿಸುವುದಿಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷವು ಆ ಹತ್ಯೆಯನ್ನು ಖಂಡಿಸಿವೆ. ನೇಹಾ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ, ಕೊಲೆಗಾರನಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಕೊಡಿಸುವುದಾಗಿ ಆಕೆಯ ಪೋಷಕರಿಗೆ ಭರವಸೆ ನೀಡಿದ್ದಾರೆ. ಆದರೆ, ನೆನಪಿಡಿ, ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಹತ್ಯೆಗಳು ನಡೆದಿದ್ದರೂ, ಬಿಜೆಪಿ ಈ ಪ್ರಕರಣವನ್ನು ಮಾತ್ರ ಆಯ್ದುಕೊಂಡು ಚುನಾವಣಾ ವಿಷಯವಾಗಿಸಿತು. ನಾವು ಕಾನೂನಿನ ಪ್ರಕಾರ ಏನೆಲ್ಲ ಮಾಡಬೇಕಿತ್ತೊ ಅವೆಲ್ಲವನ್ನೂ ಕ್ಷಿಪ್ರವಾಗಿ ಮಾಡಿದೆವು. ಬಿಜೆಪಿಯವರೇನಾದರೂ ಅಧಿಕಾರದಲ್ಲಿದ್ದಿದ್ದರೆ ಇದಕ್ಕಿಂತ ಭಿನ್ನವಾಗಿ ಏನನ್ನು ಮಾಡುತ್ತಿದ್ದರು?

ಬಿಜೆಪಿಯು ಇಂತಹ ವಿಷಯಗಳಿಗೆ ಹಸಿದಿರುತ್ತದೆ. ಅವರು ರಣಹದ್ದುಗಳು. ಇದು ಭಾರತದಾದ್ಯಂತ ಅವರ ಪ್ರಮಾಣೀಕೃತ ಕಾರ್ಯನಿರ್ವಹಣಾ ವಿಧಾನ. ಅವರು ಇಂತಹ ಘಟನೆಗಳು ನಡೆಯಲಿ ಎಂದು ಕಾದಿರುತ್ತಾರೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳ ವಿಚಾರದಲ್ಲಿ ರಾಜ್ಯ ಸರಕಾರವು ವಿಳಂಬ ನೀತಿ ಅನುಸರಿಸುತ್ತಿದೆಯೇ?

ಉ.: ಮಹಿಳಾ ಆಯೋಗವು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ನಾವು ವಿಶೇಷ ತನಿಖಾ ತಂಡವನ್ನು ರಚಿಸಿದೆವು. ಇದರ ಬೆನ್ನಿಗೇ ಅವರು ದೇಶ ತೊರೆದರು. ವಿಮಾನ ನಿಲ್ದಾಣ ಭದ್ರತೆಯು ರಾಜ್ಯ ಸರಕಾರದ ಅಡಿ ಬರುವುದಿಲ್ಲ. ಆತ ಪರಾರಿಯಾಗಲು ಬಿಜೆಪಿ ನೆರವು ನೀಡಿದೆ ಎಂಬ ಬಗ್ಗೆ ನನಗೆ ಶೇ. 100ರಷ್ಟು ಖಾತರಿಯಿದೆ. ಯಾಕೆಂದರೆ, ಅದು ಅವರ ಪಾಲಿಗೆ ಮುಜುಗರದ ಸಂಗತಿಯಾಗಿತ್ತು.

ವಾರದ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಪ್ರಧಾನಿ ಮೋದಿ, ಪ್ರಜ್ವಲ್ ರೇವಣ್ಣಗೆ ನೀಡುವ ಪ್ರತೀ ಮತವೂ ನನ್ನನ್ನು ಬಲಿಷ್ಠಗೊಳಿಸಲಿದೆ ಎಂದು ಹೇಳಿದ್ದರು. ಇದು ಪ್ರಜ್ವಲ್ ರೇವಣ್ಣ ಪರಾರಿಯಾಗಲು ಮೋದಿ ಹಾಗೂ ಅಮಿತ್ ಶಾ ನೆರವು ನೀಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಿದ್ದರು. ಆದರೆ, ಸರಕಾರ ಸಕಾಲದಲ್ಲಿ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪಗಳಿವೆಯಲ್ಲ?

ಉ.: ಇದು ನಿರಾಧಾರ ಆರೋಪ. ಪ್ರಜ್ವಲ್ ರೇವಣ್ಣರ ಅತ್ಯಾಚಾರ ಪ್ರಕರಣದ ಬಗ್ಗೆ ಬಿಜೆಪಿ ನಾಯಕರಿಗೆ ಹಲವಾರು ತಿಂಗಳ ಹಿಂದೆಯೇ ತಿಳಿದಿತ್ತು. ಹಾಸನದ ಬಿಜೆಪಿ ನಾಯಕ ದೇವರಾಜೇ ಗೌಡರು ಡಿಸೆಂಬರ್ ತಿಂಗಳಿನಲ್ಲಿಯೇ ಬಿ.ವೈ.ವಿಜಯೇಂದ್ರ ಹಾಗೂ ಅಮಿತ್ ಶಾರಿಗೆ ಪತ್ರ ಬರೆದಿದ್ದರು. ಆತನಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಡಿ ಎಂದು ಅವರು ಕೇಂದ್ರ ನಾಯಕರಿಗೂ ಮನವಿ ಮಾಡಿದ್ದರು. ಆದರೆ, ಅವರದಕ್ಕೆ ಕುರುಡಾದರು. ನಾವು ಅಮಿತ್ ಶಾರಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇವೆ. ಆತನ ಪೂರ್ವ ಇತಿಹಾಸ ತಿಳಿದ ನಂತರವೂ ಆತನಿಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದೇಕೆ?

ಪ್ರಜ್ವಲ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ವರದಿಗೆ ಕಾಯಲು ಬಿಜೆಪಿ ಸಿದ್ಧವಿದೆ. ಆದರೆ, ನೇಹಾ ಪ್ರಕರಣದಲ್ಲಿ ಮಾತ್ರ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸುವುದನ್ನು ಬಯಸುತ್ತಿದ್ದಾರೆ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತಿದೆ. ಅವರಿಗೆ ರಾಜಕೀಯವಾಗಿ ಸೂಕ್ತ ಆಗುವುದರಿಂದ ರಾಷ್ಟ್ರೀಯ ತನಿಖಾ ದಳ ಅಥವಾ ಕೇಂದ್ರೀಯ ತನಿಖಾ ದಳದ ತನಿಖೆಯನ್ನು ಬಯಸುತ್ತಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಮಂಗಳ ಸೂತ್ರಗಳ ಕುರಿತು ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿಲ್ಲವೆ? ಅವರ ಮಂಗಳ ಸೂತ್ರಗಳನ್ನು ಇಲ್ಲಿ ಪಣಕ್ಕೊಡ್ಡಿಲ್ಲವೆ? ಸಾಮೂಹಿಕ ಅತ್ಯಾಚಾರಿಯ ವಿರುದ್ಧ ಪ್ರಧಾನಿಯೇಕೆ ಒಂದೂ ಮಾತಾಡುತ್ತಿಲ್ಲ?

ಪ್ರಜ್ವಲ್‌ ರಿಂದ ಅತ್ಯಾಚಾರಕ್ಕೀಡಾಗಿರುವ ಮಹಿಳೆಯರಿಗೆ ನೀವು ಹೇಗೆ ನ್ಯಾಯವನ್ನು ಖಾತರಿ ಪಡಿಸುತ್ತೀರಿ?

ಉ.: ನಾವು ಮಹಿಳಾ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದ್ದೇವೆ. ಸಂತ್ರಸ್ತೆಯರು ಮುಂದೆ ಬಂದು, ದೂರು ದಾಖಲಿಸಲು, ನಾವು ಅವರಲ್ಲಿ ವಿಶ್ವಾಸ ತುಂಬಲು ಪ್ರಯತ್ನಿಸುತ್ತಿದ್ದೇವೆ. ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಅವರೊಂದಿಗೆ ಸಮಾಲೋಚನೆ ನಡೆಸುತ್ತೇವೆ ಮತ್ತು ಅತ್ಯಾಚಾರಿಯನ್ನು ನ್ಯಾಯದ ಕಟಕಟೆಗೆ ತರುವ ಕುರಿತು ಅವರಿಗೆ ಖಾತರಿ ನೀಡುತ್ತೇವೆ.

ಕಾಂಗ್ರೆಸ್ ಅಧ್ಯಕ್ಷ ಹಾಗೂ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು 2019ರ ಚುನಾವಣೆಯಲ್ಲಿ ಕಲಬುರಗಿಯಿಂದ ಪರಾಭವಗೊಂಡಿದ್ದರು. ನೀವೀಗ ನಿಮ್ಮ ಭಾವ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಪ್ರಚಾರ ಕಾರ್ಯವನ್ನು ನಿರ್ವಹಿಸುತ್ತಿದ್ದೀರಿ. ಈ ಬಾರಿ ಕಾಂಗ್ರೆಸ್ ಪಕ್ಷದ ಅವಕಾಶಗಳು ಹೇಗಿವೆ?

ಉ.: ಜಯ, ಪರಾಜಯದ ಬಗ್ಗೆ ಜನರು ನಿರ್ಧರಿಸಲಿದ್ದಾರೆ. ಆದರೆ, ಕಲಬುರಗಿಯ ಮತದಾರರು 2019ರ ತಮ್ಮ ಆಯ್ಕೆಯ ಬಗ್ಗೆ ಬೇಸರಗೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈ ಕ್ಷೇತ್ರದಲ್ಲಿ ಪರಾಭವಗೊಂಡ ನಂತರ ಅಭಿವೃದ್ಧಿಯು ನಾಪತ್ತೆಯಾಗಿದೆ. ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದ್ದ ಎಲ್ಲ ಯೋಜನೆಗಳೂ ಕಳೆದು ಹೋಗಿವೆ.

ರೈಲ್ವೆ ವಿಭಾಗವು ಸರಕು ಮತ್ತು ಸರಂಜಾಮುಗಳ ಸಾಗಣೆಯ ತಾಣವಾಗುತ್ತಿತ್ತು. ಉದ್ಯಮಗಳು ಬೆಳವಣಿಗೆ ಸಾಧಿಸಲು ಪ್ರಾರಂಭಿಸುತ್ತಿದ್ದವು. ಆದರೆ, ಅವೆಲ್ಲವೂ ಹಾಗೇ ಉಳಿದುಬಿಟ್ಟಿವೆ. ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದ ಜವಳಿ ಪಾರ್ಕ್ ಯೋಜನೆಯನ್ನು ನೆನೆಗುದಿಯಲ್ಲಿ ಇಡಲಾಗಿದೆ. ಹೊರ ವರ್ತುಲ ರಸ್ತೆ ನೆನೆಗುದಿಗೆ ಬಿದ್ದಿದೆ. ಐಐಐಟಿ ಹಾಗೂ ಐಐಟಿಗಳು ಬೇರೆಡೆಗೆ ಸ್ಥಳಾಂತರಗೊಂಡವು. ಕಲಬುರಗಿಯ ಇಎಸ್‌ಐಸಿ ಮಾದರಿ ಆಸ್ಪತ್ರೆಯಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಏಮ್ಸ್ ಘಟಕವು ಮೂಲೆ ಸೇರಿದೆ. ನಾವು ಅದ್ಭುತ ಪ್ರಗತಿಯ ಅವಕಾಶವನ್ನು ಕಳೆದುಕೊಂಡೆವು ಎಂದು ಜನರು ಭಾವಿಸುತ್ತಿದ್ದಾರೆ. ಹೀಗಾಗಿ, ಈ ಅಭಿವೃದ್ಧಿ ಕೆಲಸಗಳೊಂದಿಗೆ ಮುಂದುವರಿಯಲು ಜನರು ಈ ಬಾರಿ ಕಾಂಗ್ರೆಸ್ ಗೆಲುವನ್ನು ಖಾತರಿ ಪಡಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಟಿ.ಎ. ಅಮೀರುದ್ದೀನ್

contributor

Similar News