ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ನಡುವೆ 1400 ಕಿ.ಮೀ. ವಿಸ್ತೀರ್ಣದ ಹೆದ್ದಾರಿ ಶೀಘ್ರವೇ ಯೋಜನೆಗೆ ಚಾಲನೆ

Update: 2016-05-23 18:47 GMT

ಬ್ಯಾಂಕಾಕ್,ಮೇ 23: ಭಾರತ ಹಾಗೂ ಆಗ್ನೇಯ ಏಶ್ಯವನ್ನು ಸಂಪರ್ಕಿಸುವ 1,400 ಕಿ.ಮೀ. ವಿಸ್ತೀರ್ಣದ ಬೃಹತ್ ಹೆದ್ದಾರಿಯೊಂದನ್ನು ಭಾರತ, ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್ ಜಂಟಿಯಾಗಿ ನಿರ್ಮಿಸಲು ನಿರ್ಧರಿಸಿವೆ. ಈ ರಸ್ತೆ ನಿರ್ಮಾಣ ಯೋಜನೆಯು ಮೂರೂ ರಾಷ್ಟ್ರಗಳ ನಡುವೆ ವಾಣಿಜ್ಯ ಹಾಗೂ ಸಾಂಸ್ಕೃತಿಕ ಬಾಂಧವ್ಯ ವೃದ್ಧಿಗೆ ಉತ್ತೇಜನ ದೊರೆಯಲಿದೆ.
ಎರಡನೆ ವಿಶ್ವಮಹಾಯುದ್ಧದ ವೇಳೆ ಮ್ಯಾನ್ಮಾರ್‌ನಲ್ಲಿ ನಿರ್ಮಿಸಲಾಗಿದ್ದ 73 ಸೇತುವೆಗಳನ್ನು ಭಾರತದ ಆರ್ಥಿಕ ನೆರವಿನೊಂದಿಗೆ ನವೀಕರಿಸಲಾಗುವುದೆಂದು ಥಾಯ್ಲೆಂಡ್‌ನಲ್ಲಿನ ಭಾರತದ ರಾಯಭಾರಿ ಭಗವಂತ್ ಸಿಂಗ್ ಬಿಷ್ಣೊಯಿ ತಿಳಿಸಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗಲಿದೆಯೆಂದು ಅವರು ಹೇಳಿದ್ದಾರೆ.
ಸೇತುವೆಗಳ ನವೀಕರಣ ಕಾರ್ಯವು 18 ತಿಂಗಳುಗಳೊಳಗೆ ಪೂರ್ಣಗೊಳ್ಳಲಿದ್ದು,ಆನಂತರ ಈ ಹೆದ್ದಾರಿಯನ್ನು ಎಲ್ಲಾ ಮೂರು ದೇಶಗಳಿಗೆ ಸಂಚಾರಕ್ಕೆ ತೆರೆದಿಡಲಾಗುವುದೆಂದು ಬಿಷ್ಣೊಯಿ ಹೇಳಿದ್ದಾರೆ. ಪ್ರಸ್ತಾವಿತ ಹೆದ್ದಾರಿಯು ಭಾರತದ ಮಣಿಪುರದ ಮೊರೆಹ್ ನಗರದಿಂದ ಆರಂಭಗೊಂಡು, ಮ್ಯಾನ್ಮಾರ್‌ನ ತಾಮು ನಗರದಲ್ಲಿ ಕೊನೆಗೊಳ್ಳಲಿದೆ. ಥಾಯ್ಲೆಂಡ್ ತಾಕ್ ನಗರವನ್ನು ತಲುಪಲಿರುವ 1400 ಕಿ.ಮೀ. ವಿಸ್ತೀರ್ಣದ ಈ ರಸ್ತೆಯನ್ನು ಬಳಸುವ ಬಗ್ಗೆ ಮೂರು ರಾಷ್ಟ್ರಗಳ ನಡುವೆ ಒಪ್ಪಂದವೊಂದು ಏರ್ಪಡಲಿದೆ.
ಭಾರತ ಹಾಗೂ ಥಾಯ್ಲೆಂಡ್ ದೇಶಗಳು ಪರಸ್ಪರ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಭಾಷಾ ಬಾಂಧವ್ಯಗಳನ್ನು ಹೊಂದಿವೆ. ಈ ರಸ್ತೆಯೊಂದಿಗೆ ಉಭಯದೇಶಗಳು ಭೌತಿಕವಾಗಿ ಸಂಪರ್ಕಿಸಲಿವೆಯೆಂದು ಅವರು ಹೇಳಿದರು.
 ಈ ರಸ್ತೆಯು ಸಾಮಗ್ರಿಗಳ ಸಾಗಣೆಗೆ ನೆರವಾಗಲಿದೆ ಹಾಗೂ ಉತ್ತರಭಾರತದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಇನ್ನಷ್ಟು ನೆರವಾಗಲಿದೆ ಎಂದು ಬಿಷ್ಣೊಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News