ಜಪಾನ್ ಕಾಡಿನಲ್ಲಿ ನಾಪತ್ತೆಯಾದ ಬಾಲಕನ ಸುಳಿವಿಲ್ಲ

Update: 2016-05-31 12:02 GMT

ಟೋಕಿಯೊ, ಮೇ 31: ಜಪಾನ್‌ನ ಕರಡಿಗಳು ವಾಸಿಸುತ್ತಿರುವ ಕಾಡಿನಲ್ಲಿ ಹೆತ್ತವರು ಬಿಟ್ಟುಹೋದ ಏಳು ವರ್ಷದ ಬಾಲಕನಿಗಾಗಿ ನಡೆಯುತ್ತಿರುವ ಶೋಧ ಕಠಿಣಗೊಳ್ಳುತ್ತಾ ಸಾಗುತ್ತಿದೆ ಹಾಗೂ ಅಲ್ಲಿ ಯಾವುದೇ ಸುಳಿವು ಸಿಗುತ್ತಿಲ್ಲ ಎಂದು ರಕ್ಷಣಾ ತಂಡದ ಸದಸ್ಯರೊಬ್ಬರು ಮಂಗಳವಾರ ಹೇಳಿದ್ದಾರೆ.

ಜಪಾನ್‌ನ ಉತ್ತರದ ಪ್ರಮುಖ ದ್ವೀಪ ಹೊಕಾಯಿಡೊದ ಅರಣ್ಯದಲ್ಲಿ ನಾಲ್ಕು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ 100ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ಪುರಸಭೆ ಅಧಿಕಾರಿಗಳು ಕಾಡಿನಲ್ಲಿ ಬಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಕರಡಿಯ ತಾಜಾ ಲದ್ದಿ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರು ಬೇಟೆಗಾರರೂ ತಂಡವನ್ನು ಕೂಡಿಕೊಂಡಿದ್ದಾರೆ. ಜೊತೆಗೆ ಬಾಲಕನ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾಗಿದೆ.

ಬಾಲಕ ಯಮಟೊ ಟನೂಕನ ದುರ್ವರ್ತನೆಗೆ ಶಿಕ್ಷೆಯಾಗಿ ಹೆತ್ತವರು ಶನಿವಾರ ಆತನನ್ನು ಬೆಟ್ಟದ ರಸ್ತೆಯಲ್ಲಿ ಕಾರಿನಿಂದ ಇಳಿಸಿ ಹೋಗಿದ್ದರು. ಕೆಲವು ನಿಮಿಷಗಳ ಬಳಿಕ ಹೆತ್ತವರು ವಾಪಸ್ ಬಂದಾಗ ಬಾಲಕ ನಾಪತ್ತೆಯಾಗಿದ್ದನು.

‘‘ಕಾಡಿನಲ್ಲಿ ಒಬ್ಬಂಟಿಯಾದಾಗ ಬಾಲಕನು ಯಾವ ರೀತಿಯಲ್ಲಿ ವರ್ತಿಸಿರಬಹುದು ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ’’ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘‘ಒಬ್ಬಂಟಿಯಾದ ಬಳಿಕ ಬಾಲಕ ನಡೆದಾಡಿರಬೇಕು. ಆದರೆ, ಆತ ಯಾವ ದಾರಿಯಲ್ಲಿ ಹಾಗೂ ಎಷ್ಟು ದೂರ ಹೋಗಿರಬಹುದು ಎಂಬುದನ್ನು ನಿರ್ಧರಿಸುವಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ’’ ಎಂದರು.

ಆಹಾರ ಮತ್ತು ನೀರು ಇಲ್ಲದೆ ಮಗು ಕಾಡಿನಲ್ಲಿ ಏಕಾಂಗಿಯಾಗಿದೆ. ಸೋಮವಾರ ರಾತ್ರಿ ಕಾಡಿನಲ್ಲಿ ಭಾರೀ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News