ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ ಬಾಬಾ ಅನುಯಾಯಿಗಳು!

Update: 2016-06-03 03:57 GMT

ಲಕ್ನೋ, ಜೂ.3: ಅಲಹಾಬಾದ್ ಹೈಕೋರ್ಟ್ ತೀರ್ಪಿನ ಅನ್ವಯ ಜವಾಹರ್‌ಬಾಗ್ ಎಂಬ ಸಾರ್ವಜನಿಕ ಉದ್ಯಾನವನ ತೆರವುಗೊಳಿಸುವ ಕಾರ್ಯಾಚರಣೆ ಸಂದರ್ಭ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ಬಲಿಯಾದ ಘಟನೆ ಮಥುರಾದಲ್ಲಿ ನಡೆದಿದೆ.
ಸ್ವಾಧೀನ ಭಾರತ್ ವಿಧೇಯಕ ಸತ್ಯಾಗ್ರಹಿ ಸಂಘಟನೆ ವಶದಲ್ಲಿದ್ದ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತು. ಇದನ್ನು ವಿರೋಧಿಸಿ "ಸುಭಾಸ್‌ಚಂದ್ರ ಬೋಸ್ ಅವರ ನೈಜ ಬೆಂಬಲಿಗರು" ಎಂದು ಹೇಳಿಕೊಂಡ ಸುಮಾರು ಎರಡು ಸಾವಿರ ಮಂದಿ ಪ್ರತಿಭಟನೆ ನಡೆಸುತ್ತಿದ್ದರು, ತೆರವು ಕಾರ್ಯಾಚರಣೆಗೆ ಪೊಲೀಸರು ಆಗಮಿಸುತ್ತಿದ್ದಂತೆ, ಪ್ರತಿಭಟನಾಕಾರರು ಗುಂಡಿನ ದಾಳಿ ನಡೆಸಿದಾಗ ಇಬ್ಬರು ಪೊಲೀಸರು ಬಲಿಯಾದರು ಮತ್ತು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರಪತಿ ಹಾಗೂ ಪ್ರಧಾನಿ ಹುದ್ದೆಗೆ ಚುನಾವಣೆ ರದ್ದು ಮಾಡಬೇಕು; ರೂಪಾಯಿ ಬದಲು ಆಜಾದ್ ಹಿಂದೂ ಪೌಜ್ ಕರೆನ್ಸಿ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ 60 ಲೀಟರ್ ಡೀಸೆಲ್ ಹಾಗೂ 40 ಲೀಟರ್ ಪೆಟ್ರೋಲನ್ನು ಒಂದು ರೂಪಾಯಿ ದರದಲ್ಲಿ ಮಾರಾಟ ಮಾಡಬೇಕು ಎಂಬ ವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿತ್ತು. ಇವರೆಲ್ಲರೂ ಬಾಬಾ ಜೈ ಗುರುದೇವ್ ಅವರ ಅನುಯಾಯಿಗಳಾಗಿದ್ದು, ಸ್ವಾಧೀನ ಭಾರತ ವಿಧೇಯಕ ಸತ್ಯಾಗ್ರಹಿ ಹೆಸರಿನ ಸಂಘಟನೆ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದರು.
ಜವಾಹರ್‌ಬಾಗ್‌ನಲ್ಲಿ ಎರಡೂವರೆ ವರ್ಷಗಳಿಂದ ಇವರು ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರ ಸಂಜೆ 5ರ ಸುಮಾರಿಗೆ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದರಿಂದ ಉದ್ರಿಕ್ತರಾದ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ದಾಳಿಯಲ್ಲಿ ಫರಾಹ್ ಠಾಣಾಧಿಕಾರಿ ಸಂತೋಷ್ ಯಾದವ್ ಹಾಗೂ ನಗರ ಎಸ್ಪಿ ಮುಕುಲ್ ದ್ವಿವೇದಿ ಬಲಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News