ರಮಝಾನ್ ಉಪವಾಸಕ್ಕೆ ನಿಷೇಧ ಹೇರಿದ ಚೀನಾ ಸರಕಾರ

Update: 2016-06-06 12:44 GMT

ಬೀಜಿಂಗ್, ಜೂ. 6: ಮುಸ್ಲಿಂ ಪ್ರಾಬಲ್ಯದ ಕ್ಸಿನ್‌ಜಿಯಾಂಗ್ ರಾಜ್ಯದಲ್ಲಿ ಸರಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ಮಕ್ಕಳ ರಮಝಾನ್ ಉಪವಾಸಕ್ಕೆ ಚೀನಾ ನಿಷೇಧ ಹೇರಿದೆ.
ರಮಝಾನ್ ಉಪವಾಸ ಸೋಮವಾರ ಆರಂಭಗೊಳ್ಳುತ್ತಿದ್ದಂತೆಯೇ ಚೀನಾದ ಸರಕಾರಿ ವೆಬ್‌ಸೈಟ್‌ಗಳು ಈ ಪ್ರಕಟನೆ ಹೊರಡಿಸಿವೆ.
ಒಂದು ಕೋಟಿಗೂ ಅಧಿಕ ಮುಸ್ಲಿಂ ಉಯಿಘುರ್ ಸಮುದಾಯದವರೇ ವಾಸಿಸುವ ರಾಜ್ಯದಲ್ಲಿ ಸರಕಾರಿ ಉದ್ಯೋಗಿಗಳು ಮತ್ತು ಅಪ್ರಾಪ್ತರು ರಮಝಾನ್ ಉಪವಾಸ ಮಾಡುವುದರ ಮೇಲೆ ಚೀನಾದ ಕಮ್ಯುನಿಸ್ಟ್ ಸರಕಾರ ಹಲವು ವರ್ಷಗಳಿಂದ ನಿಷೇಧ ವಿಧಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ.
ರೆಸ್ಟೋರೆಂಟ್‌ಗಳೂ ತೆರೆದಿರಬೇಕೆಂದು ಚೀನಾ ಆದೇಶ ನೀಡಿದೆ.
ಈ ವಲಯದಲ್ಲಿ ಉಯಿಘುರ್‌ಗಳು ಮತ್ತು ಸರಕಾರಿ ಭದ್ರತಾ ಪಡೆಗಳ ನಡುವೆ ಪದೇ ಪದೇ ಸಂಘರ್ಷಗಳು ನಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ. ಸಂಪನ್ಮೂಲ ಸಂಪದ್ಭರಿತ ವಲಯದ ಸ್ವಾತಂತ್ರಕ್ಕಾಗಿ ಭಯೋತ್ಪಾದಕರು ಸಂಘರ್ಷ ನಡೆಸುತ್ತಿದ್ದಾರೆ ಎಂದು ಚೀನಾ ಆರೋಪಿಸುತ್ತಿದೆ.
ಈ ಪ್ರದೇಶದಲ್ಲಿ ಉಯಿಘುರ್‌ಗಳು ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ವಿಧಿಸಲಾಗಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿರ್ಬಂಧಗಳೇ ಸಂಘರ್ಷಕ್ಕೆ ಕಾರಣ ಎಂಬುದಾಗಿ ಮಾನವಹಕ್ಕು ಸಂಘಟನೆಗಳು ಹೇಳುತ್ತಿವೆ.
‘‘ಕಮ್ಯುನಿಸ್ಟ್ ಪಕ್ಷದ ಸದಸ್ಯರು, ಕಾರ್ಯಕರ್ತರು, ಸರಕಾರಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಅಪ್ರಾಪ್ತರು ರಮಝಾನ್ ತಿಂಗಳಲ್ಲಿ ಉಪವಾಸ ಮಾಡಬಾರದು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು’’ ಎಂದು ಮಧ್ಯ ಕ್ಸಿನ್‌ಜಿಯಾಂಗ್‌ನ ಕೊರ್ಲ ನಗರದ ಸರಕಾರಿ ವೆಬ್‌ಸೈಟ್‌ನಲ್ಲಿ ಗುರುವಾರ ಹಾಕಲಾಗಿರುವ ಪ್ರಕಟನೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News