ಕೇಶ ಚಿಕಿತ್ಸೆಗೆ ಹೋಗಿ ಜೀವ ಕಳೆದುಕೊಂಡ ವೈದ್ಯ ವಿದ್ಯಾರ್ಥಿ!

Update: 2016-06-07 04:15 GMT

ಚೆನ್ನೈ, ಜೂ.7: ಇಲ್ಲಿನ ನುಂಗಂಬಾಕಂ ಸೆಲೂನ್ ಒಂದರಲ್ಲಿ ಕೂದಲು ಕಸಿ ಚಿಕಿತ್ಸೆ ಪಡೆಯುತ್ತಿದ್ದ ಮದ್ರಾಸ್ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವೈದ್ಯವಿದ್ಯಾರ್ಥಿ ಜೀವ ಕಳೆದುಕೊಂಡಿರುವ ಘಟನೆ 15 ದಿನಗಳ ಬಳಿಕ ಬೆಳಕಿಗೆ ಬಂದಿದೆ.

ಪೋಷಕರು ದೂರು ನೀಡದ ಹಿನ್ನೆಲೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆದಿಲ್ಲ. ಅನಸ್ತೇಶಿಯಾದ ಅಲರ್ಜಿಯಿಂದ ಉಂಟಾಗಿರುವ ಆರೋಗ್ಯ ಸಮಸ್ಯೆಗಳು ಸಾವಿಗೆ ಕಾರಣವಿರಬೇಕು ಎಂದು ವೈದ್ಯರು ಶಂಕಿಸಿದ್ದಾರೆ. ಈ ಸಂಬಂಧ ರಾಜ್ಯ ವೈದ್ಯಕೀಯ ಮಂಡಳಿ ಇಬ್ಬರು ವೈದ್ಯರಿಗೆ ನೋಟಿಸ್ ಜಾರಿ ಮಾಡಿದೆ.

ಈ ವೈದ್ಯರಿಗೆ ಅಗತ್ಯ ಅರ್ಹತೆ ಇಲ್ಲದಿದ್ದರೂ, ಹೇಗೆ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯನ್ನು ನಿರ್ವಹಿಸಿದ್ದಾಗಿ ವಿವರ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಅದು ಕೂಡಾ ವೈದ್ಯಕೀಯೇತರ ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ನಿರ್ವಹಿಸಲಾಗಿದೆ. ವೈದ್ಯಕೀಯ ಸೇವೆಗಳ ವಿಭಾಗ ಸೆಲೂನನ್ನು ಮುಚ್ಚಿಸಿದೆ.

ನುಂಗಂಬಾಕಂನ ಅಡ್ವಾನ್ಸ್‌ಡ್ ರೋಬೋಟಿಕ್ ಹೇರ್ ಟ್ರಾನ್ಸ್‌ಪ್ಲಾಂಟ್ ಸೆಂಟರ್‌ನಲ್ಲಿ ಕೂದಲು ಕಸಿ ಮಾಡಿಸಿಕೊಳ್ಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಮೇ 17ರಂದು ಮೃತಪಟ್ಟ ಸಂಬಂಧದ ದೂರನ್ನು ಆರೋಗ್ಯ ಇಲಾಖೆ, ರಾಜ್ಯದ ವೈದ್ಯಕೀಯ ಮಂಡಳಿಗೆ ಕಳುಹಿಸಿಕೊಟ್ಟಿತ್ತು. ಆದರೆ ಈ ಸೆಲೂನ್ ಕೇವಲ ಕೂದಲು ಕತ್ತರಿಸಲು ಮತ್ತು ವಿನ್ಯಾಸಗೊಳಿಸಲು ಮಾತ್ರ ಲೈಸನ್ಸ್ ಪಡೆದಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಅನಸ್ತೇಶಿಯಾ ತಜ್ಞ ಡಾ.ಹರಿಪ್ರಸಾದ್ ಕಸ್ತೂರಿ ಹಾಗೂ ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದ ಡಾ.ಎ.ವಿನೀತ್ ಸೂರ್ಯಕುಮಾರ್ ಎಂಬವರು ಕೂದಲು ಕಸಿ ನೆರವೇರಿಸಿದ್ದರು ಎಂದು ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಕೆ.ಸೆಂಥಿಲ್ ಹೇಳಿದ್ದಾರೆ. ಇಬ್ಬರೂ ಪರಿಣತ ಕೂದಲು ಕಸಿ ತಜ್ಞರೂ ಅಲ್ಲ ಅಥವಾ ಶಸ್ತ್ರಚಿಕಿತ್ಸಕರೂ ಆಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News