ಅಮೆರಿಕ ವಿವಿಯನ್ನು ತೊರೆಯುವಂತೆ 25 ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

Update: 2016-06-07 12:29 GMT

ವಾಶಿಂಗ್ಟನ್, ಜೂ. 7: ವೆಸ್ಟರ್ನ್ ಕೆಂಟಕಿ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ವಿಜ್ಞಾನ ಕಲಿಯುತ್ತಿರುವ ಮೊದಲ ಸೆಮಿಸ್ಟರ್‌ನ ಕನಿಷ್ಠ 25 ಭಾರತೀಯ ವಿದ್ಯಾರ್ಥಿಗಳಿಗೆ ಒಂದೋ ಭಾರತಕ್ಕೆ ವಾಪಸಾಗುವಂತೆ ಅಥವಾ ಬೇರೆ ಕಾಲೇಜುಗಳಿಗೆ ಹೋಗುವಂತೆ ಸೂಚಿಸಲಾಗಿದೆ. ಅವರು ವಿಶ್ವವಿದ್ಯಾನಿಲಯದ ಪ್ರವೇಶ ಮಾನದಂಡಗಳನ್ನು ಪೂರೈಸಲು ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದು ವರದಿಗಳು ಹೇಳಿವೆ.

ಈ ವರ್ಷದ ಜನವರಿಯಲ್ಲಿ ಸುಮಾರು 60 ಭಾರತೀಯ ವಿಜ್ಞಾನಿಗಳು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಂಡಿದ್ದರು ಹಾಗೂ ಅವರನ್ನು ನೋಂದಾಯಿಸಲು ವಿಶ್ವವಿದ್ಯಾನಿಲಯವು ಅಂತಾರಾಷ್ಟ್ರೀಯ ನೇಮಕಾತಿದಾರರನ್ನು ಬಳಸಿತ್ತು ಎನ್ನಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಸೋಮವಾರ ವರದಿ ಮಾಡಿದೆ.

ಸುಮಾರು 40 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಪರಿಹಾರ ನೆರವು ನೀಡಿದರೂ, ಪ್ರವೇಶದ ಮಾನದಂಡಗಳನ್ನು ಪೂರೈಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ವೆಸ್ಟರ್ನ್ ಕೆಂಟಕಿ ಕಂಪ್ಯೂಟರ್ ಸಯನ್ಸ್ ಪ್ರೋಗ್ರಾಂನ ಅಧ್ಯಕ್ಷ ಜೇಮ್ಸ್ ಗ್ಯಾರಿ ‘ನ್ಯೂಯಾರ್ಕ್ ಟೈಮ್ಸ್’ಗೆ ತಿಳಿಸಿದರು.

ಅಂದರೆ, 35 ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ ಮುಂದುವರಿಸಲು ಅವಕಾಶ ನೀಡಬಹುದಾಗಿದೆ, ಆದರೆ, ಉಳಿದ 25 ವಿದ್ಯಾರ್ಥಿಗಳು ಹೋಗಲೇಬೇಕಾಗಿದೆ ಎಂದು ಪತ್ರಿಕೆ ಹೇಳಿದೆ.

ಕೋರ್ಸ್ ಮುಂದುವರಿಸಲು ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದೆಂದರೆ ಇನ್ನಷ್ಟು ಹಣವನ್ನು ವ್ಯರ್ಥಗೊಳಿಸಿದಂತೆ, ಯಾಕೆಂದರೆ, ಪಠ್ಯಕ್ರಮದ ಅಗತ್ಯ ಭಾಗ ಹಾಗೂ ಅಮೆರಿಕದ ಶಾಲೆಗಳು ಸ್ನಾತಕ ವಿದ್ಯಾರ್ಥಿಗಳಿಗೆ ಕಲಿಸುವ ಪರಿಣತಿಯಾಗಿರುವ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯಲು ಈ ವಿದ್ಯಾರ್ಥಿಗಳು ಅಸಮರ್ಥರಾಗಿದ್ದಾರೆ ಎಂದು ಗ್ಯಾರಿ ತಿಳಿಸಿದರು.

‘‘ಪ್ರೋಗ್ರಾಂಗಳನ್ನು ಬರೆಯುವ ಸಾಮರ್ಥ್ಯವಿಲ್ಲದೆ ಅವರು ಇಲ್ಲಿಂದ ತೇರ್ಗಡೆಯಾಗಿ ಹೋದರೆ ಅದು ನನ್ನ ವಿಭಾಗಕ್ಕೆ ಮುಜುಗರದ ಸಂಗತಿಯಾಗಿರುತ್ತದೆ’’ ಎಂದರು.

ಭಾರತದಲ್ಲಿ ನೇಮಕಾತಿ ಆಂದೋಲನ ನಡೆಸಿದ ಬಳಿಕ ಈ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿತ್ತು. ವಿಶ್ವವಿದ್ಯಾನಿಲಯಕ್ಕೆ ‘ಸ್ಪಾಟ್ ಅಡ್ಮಿಶನ್’ ನೀಡುವ ಹಾಗೂ ಟ್ಯೂಶನ್ ಶುಲ್ಕದಲ್ಲಿ ರಿಯಾಯಿತಿ ನೀಡುವ ಆಮಿಶವೊಡ್ಡಿ ನೇಮಕಾತಿದಾರರು ಜಾಹೀರಾತುಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News