‘ಸಂಸ್ಕೃತಿ’ ಮಾದರಿಯ ಶಾಲೆಗಳು ದೇಶದ ಇತರೆಡೆಗಳಲ್ಲೂ ಆರಂಭ

Update: 2016-06-07 12:55 GMT

ಹೊಸದಿಲ್ಲಿ,ಜೂ.7: ಸರಕಾರಿ ನೌಕರರ ಮಕ್ಕಳಿಗಾಗಿ ದಿಲ್ಲಿಯಲ್ಲಿರುವ ‘ಸಂಸ್ಕೃತಿ’ ಮಾದರಿಯ ಶಾಲೆಗಳನ್ನು ದೇಶದ ಇತರ ಭಾಗಗಳಲ್ಲಿಯೂ ತೆರೆಯಲು ಸರಕಾರವು ನಿರ್ಧರಿಸಿದೆ.

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮಹಾನಗರಗಳು ಅಥವಾ ಇತರ ಯಾವುದೇ ಸ್ಥಳಗಳಿಗೆ ವರ್ಗಾವಣೆಗೊಳ್ಳುವ ಅಧಿಕಾರಿಗಳು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಗಮನಿಸಿ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ.

ಇತ್ತೀಚಿಗೆ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸರಕಾರವು ಕೆಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಸರಣಿ ಶಾಲೆಗಳು ಆಯಾ ಪಡೆಗಳ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ.
ದೇಶದ ಹಲವಾರು ನಗರಗಳಲ್ಲಿ ಸರಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗಾಗಿ ಕೇಂದೀಯ ವಿದ್ಯಾಲಯಗಳು ಇವೆಯಾದರೂ ವರ್ಗಾವಣೆಗೊಳ್ಳುವ ಕೇಂದ್ರ ಸರಕಾರಿ ನೌಕರರ ಸಮಸ್ಯೆಗಳನ್ನು ಅವು ಪರಿಹರಿಸುವುದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸಿದ್ಧಗೊಳಿಸಿರುವ ಕರಡು ನೀತಿಯು ಹೇಳಿದೆ.

ಯಾವುದೇ ರಾಜ್ಯರಾಜಧಾನಿಯಲ್ಲಿ ಸಂಸ್ಕೃತಿ ಶಾಲೆಯನ್ನು ಆರಂಭಿಸುವ ಬಗ್ಗೆ ಸಂಬಂಧಿಸಿದ ರಾಜ್ಯ ಸರಕಾರವು ಪ್ರಸ್ತಾವನೆಯನ್ನು ಮುಂದಿಡಬಹುದಾಗಿದೆ. ಪ್ರತಿಯೊಂದು ರಾಜ್ಯ ರಾಜಧಾನಿಯಲ್ಲಿ ಇಂತಹ ಶಾಲೆಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸುವ ಉದ್ದೇಶವನ್ನು ಕರಡು ನೀತಿಯು ಹೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News