92ರ ಹರೆಯದ ಅಪರಾಧಿಗೆ ಶರಣಾಗುವಂತೆ ಸುಪ್ರೀಂ ಆದೇಶ

Update: 2016-06-17 18:33 GMT

ಹೊಸದಿಲ್ಲಿ, ಜೂ.17: ಕಳೆದ 1980ರ ಮರ್ಯಾದಾ ಹತ್ಯೆ ಪ್ರಕರಣವೊಂದರಲ್ಲಿ ಶಿಕ್ಷೆ ವಿಧಿಸಲ್ಪಟ್ಟಿದ್ದ 92ರ ಹರೆಯದ ಹಾಸಿಗೆಗೆ ಅಂಟಿಕೊಂಡಿರುವ ವ್ಯಕ್ತಿಯೊಬ್ಬ ಕೊನೆಗೂ ಕಾರಾಗೃಹಕ್ಕೆ ಹೋಗಬೇಕಾಗಿ ಬಂದಿದೆ. ಆಜೀವ ಸೆರೆವಾಸದ ಶಿಕ್ಷೆ ಅನುಭವಿಸಲು ಪೊಲೀಸರ ಮುಂದೆ ಶರಣಾಗುವುದರಿಂದ ಆತನಿಗೆ ಯಾವುದೇ ವಿನಾಯಿತಿ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ತನಗೆ ಪೊಲೀಸರ ಮುಂದೆ ಶರಣಾಗುವಂತೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೊ ಪೀಠ ನೀಡಿರುವ ಆದೇಶಕ್ಕೆ ಆರೋಗ್ಯದ ನೆಲೆಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಅಪರಾಧಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯಲ್ ಹಾಗೂ ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ರಜಾಕಾಲದ ಪೀಠವೊಂದು ತಳ್ಳಿ ಹಾಕಿದೆ.

ಉತ್ತರಪ್ರದೇಶದ ನಿವಾಸಿ ಪುಟ್ಟಿ ಎಂಬಾತನಿಗೆ ವಿಧಿಸಲಾಗಿದ್ದ ಆಜೀವ ಶಿಕ್ಷೆಯನ್ನು ಹೈಕೋರ್ಟ್ ಫೆ.24ರಂದು ಎತ್ತಿ ಹಿಡಿದಿತ್ತು.

  ಪುಟ್ಟಿ, ಸಹ ಆರೋಪಿಗಳಾದ ಫೆಕ್ಕಾ ಹಾಗೂ ಸನೇಹಿ ಎಂಬವರ ಸೋದರ ಸಂಬಂಧಿಯಾಗಿದ್ದಾನೆ. ಅವರಿಬ್ಬರೂ ಮೇಲ್ಮನವಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿದ್ದಾಗಲೇ ಮೃತರಾಗಿದ್ದರು. ಅವರು 1980ರ ಆ.22ರಂದು ನನ್ಹಕ್ಕು ಎಂಬಾತನ ಹತ್ಯೆ ನಡೆಸಿದ್ದರು.

ನನ್ಹಕ್ಕುನ ಸೋದರ ಸೋಹನ್ ಎಂಬಾತ ಫೆಕ್ಕಾನ ವಿವಾಹಿತ ಮಗಳೊಂದಿಗೆ ಓಡಿ ಹೋದುದು ಸನೇಹಿ ಹಾಗೂ ಪುಟ್ಟಿಗೆ ನನ್ಹಕ್ಕು ಹಾಗೂ ಇತರರ ವಿರುದ್ಧ ದ್ವೇಷಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News