ವೀರೇಂದ್ರ ತಾವ್ಡೆಯಿಂದಲೇ ಪನ್ಸಾರೆ ಹತ್ಯೆಗೂ ಸಂಚು!

Update: 2016-06-21 04:27 GMT

ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಸನಾತನ ಸಂಸ್ಥೆ ಸದಸ್ಯ ವೀರೇಂದ್ರ ತಾವ್ಡೆ, ಕೊಲ್ಲಾಪುರದಲ್ಲಿ ನಡೆದ ಸಿಪಿಐ ಮುಖಂಡ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲೂ ಶಾಮೀಲಾಗಿದ್ದಾನೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಪನ್ಸಾರೆ ಹಾಗೂ ದಾಭೋಲ್ಕರ್ ಹತ್ಯೆ ಪ್ರಕರಣಗಳ ಪ್ರಮುಖ ಕೊಂಡಿಯಾಗಿ ಈತ ಕೆಲಸ ಮಾಡಿದ್ದ. ಎರಡೂ ಹತ್ಯೆಗಳ ಸಂಚು ರೂಪಿಸಿದ್ದು ತಾವ್ಡೆ. ಕಳೆದ ವರ್ಷದ ಫೆಬ್ರವರಿ 20ರಂದು ಪನ್ಸಾರೆ ಹತ್ಯೆ ನಡೆಯುವ ಕೆಲ ಸಮಯ ಮೊದಲು ತಾವ್ಡೆ ನಿರಂತರವಾಗಿ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದ. 2014ರ ಡಿಸೆಂಬರ್ ನಲ್ಲಿ ಪನ್ಸಾರೆ ಹತ್ಯೆ ಸಂಚಿನ ಬಗ್ಗೆ ಚರ್ಚಿಸಲು ತಾವ್ಡೆ ಕೊಲ್ಲಾಪುರಕ್ಕೆ ಬಂದಿದ್ದ. ಆಗ ತೀವ್ರ ಹಲ್ಲುನೋವಿಗೆ ತುತ್ತಾಗಿ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ವಿವರಿಸಿದ್ದಾರೆ.

2015ರ ಜನವರಿಯಲ್ಲಿ ಮತ್ತೆ ಕೊಲ್ಲಾಪುರಕ್ಕೆ ಭೇಟಿ ನೀಡಿ ಸ್ನೇಹಿತರ ಜತೆ ಚರ್ಚಿಸಿದ್ದ. ಈ ಹತ್ಯೆ ಸಂಚನ್ನು ಕಾರ್ಯಗತಗೊಳಿಸುವವರ ಜತೆ ರಹಸ್ಯ ಮಾತುಕತೆ ನಡೆಸಿದ್ದ ಎನ್ನುವ ಶಂಕೆ ಇದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಈ ಬಾರಿಯೂ ದಂತಚಿಕಿತ್ಸೆ ಪಡೆದ ಆಸ್ಪತ್ರೆಗೆ ಭೇಟಿ ನೀಡಿದ್ದ. ಈ ದಾಖಲೆಗಳು ಲಭ್ಯವಾಗಿವೆ ಎಂದು ಹೇಳಿದ್ದಾರೆ.

ಪನ್ಸಾರೆ ಹತ್ಯೆ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡಕ್ಕೆ ತಾವ್ಡೆಯನ್ನು ಹಸ್ತಾಂತರಿಸಲು ಸೋಮವಾರ ಪುಣೆ ನ್ಯಾಯಾಲಯ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News