ಪಠಾಣ್‌ಕೋಟ್‌ನಲ್ಲಿ ಇನ್ನೂ ಇದ್ದಾರೆ ಉಗ್ರರು!

Update: 2016-06-22 03:06 GMT

ಪಠಾಣ್‌ಕೋಟ್, ಜೂ.22: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಮತ್ತೊಂದು ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಕೇಂದ್ರ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ನೀಡಿದೆ. ಪ್ರದೀಪ್ ಭಟ್ಟಾಚಾರ್ಯ ನೇತೃತ್ವದ ಈ ಸಮಿತಿ ಇತ್ತೀಚೆಗೆ ಜಮ್ಮುವಿಗೆ ಭೇಟಿ ನೀಡಿ, ಗಡಿಯಲ್ಲಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿ, ಈ ಎಚ್ಚರಿಕೆ ನೀಡಿದೆ. ಈ ಸುಳಿವಿನ ಹಿನ್ನೆಲೆಯಲ್ಲಿ ಸರಕಾರ, ಈ ಬಗ್ಗೆ ವಿವರ ಪಡೆಯುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಿದೆ.

ಪಠಾಣ್‌ಕೋಟ್‌ನಿಂದ ವಾಪಸ್ಸಾದ ಬಳಿಕ, ನಾವು ಸರಕಾರಕ್ಕೆ ವರದಿ ನೀಡಿದ್ದೇವೆ. ಪಠಾಣ್‌ಕೋಟ್ ವಾಯುನೆಲೆ ಮೇಲೆ ಮತ್ತೊಂದು ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಗ್ರಾಮಗಳಲ್ಲಿ ಇನ್ನೂ ಕೆಲ ಉಗ್ರರು ಅವಿತಿದ್ದಾರೆ ಎಂಬ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ ಎಂದು ಭಟ್ಟಾಚಾರ್ಯ ವಿವರಿಸಿದ್ದಾರೆ.

ಜನವರಿ 2ರಂದು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿ ಘಟನೆ ಬಗ್ಗೆ ಭಾರತ ಹಾಗೂ ಪಾಕಿಸ್ತಾನದ ಜಂಟಿ ತನಿಖೆ ನಡೆಯುವುದಕ್ಕೆ ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಬೆಂಬಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಐದು ಮಂದಿ ಪಾಕಿಸ್ತಾನಿ ತನಿಖಾ ತಂಡ ಮಾರ್ಚ್ 27 ರಿಂದ 31ರವರೆಗೆ ಭಾರತಕ್ಕೆ ಭೇಟಿ ನೀಡಿ, ದಾಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿತ್ತು. ಪಾಕಿಸ್ತಾನ ತಮ್ಮ ಗುಪ್ತಚರ ವಿಭಾಗದವರನ್ನು ಕರೆತಂದದ್ದು ಯಾವ ಕಾರಣಕ್ಕಾಗಿ ಎಂದು ಭಟ್ಟಾಚಾರ್ಯ ಪ್ರಶ್ನಿಸಿದರು.

ಅರೆಮಿಲಿಟರಿ ಪಡೆಯ ಕೆಲಸದ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವ ಸಲುವಾಗಿ ಸಮಿತಿ ರಚಿಸುವಂತೆಯೂ ಶಿಫಾರಸ್ಸು ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News