ಮಾವು ಬಿತ್ತಿ ಬೇವು ಬೆಳೆಯುವ ಅಲ್ಫೋನ್ಸೊ ರೈತರು

Update: 2016-06-28 18:24 GMT

ರತ್ನಗಿರಿಯ ಅಲ್ಫೋನ್ಸೊ ಮಾವಿನಹಣ್ಣಿನ ಮಾಹಿತಿ ಮತ್ತು ಬೋಧನೆಗೆ ವಿವೇಕ್ ಭಿಡೆಗಿಂತ ಒಳ್ಳೆಯ ವ್ಯಕ್ತಿಗಳಿಲ್ಲ. ಉತ್ಕೃಷ್ಟ ಗುಣಮಟ್ಟದ ಅಲ್ಫೋನ್ಸೊ ಮಾವಿನಹಣ್ಣಿಗೆ ಹೆಸರಾದ ಭಿಡೆ ಫ್ರೂಟ್ ಕಿಂಗ್ ಬ್ರಾಂಡ್ ಹೆಸರಿನಲ್ಲಿ ಇವುಗಳನ್ನು ಮಾರಾಟ ಮಾಡುತ್ತಾರೆ. ಮಾವಿನಹಣ್ಣಿನ ಸೀಸನ್‌ನಲ್ಲಿ ಅವರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಗ್ರಾಹಕರಿಂದ ಕರೆಗಳ ಸುರಿಮಳೆ.

ಭಿಡೆ ಜನಪ್ರಿಯರಾಗಲು ಇದಿಷ್ಟೇ ಕಾರಣವಲ್ಲ. ತಂದೆ ಹಾಗೂ ಅಜ್ಜನಂತೆ ಮಹಾರಾಷ್ಟ್ರದ ಖ್ಯಾತ ಯಾತ್ರಾಸ್ಥಳ ಮತ್ತು ಬೀಚ್ ರೆಸಾರ್ಟ್ ಎನಿಸಿದ ಗಣಪತಿಪುಲೆಯಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಾರೆ. ಇವರು ಪರಿಸರ ಹೋರಾಟಗಾರ ಹಾಗೂ ಹುಟ್ಟೂರಿನ ದೇವಸ್ಥಾನ ಟ್ರಸ್ಟ್‌ನ ಮುಖ್ಯಸ್ಥ ಕೂಡಾ. ಭಿಡೆ ವಿಜ್ಞಾನದ ಮನುಷ್ಯ, ಜನರ ಮನುಷ್ಯ ಹಾಗೂ ಮಾವಿನ ಮನುಷ್ಯ.
ಇವೆಲ್ಲದರ ಜತೆಗೆ ಅನಿಶ್ಚಿತ ಹವಾಮಾನಕ್ಕೆ ಅಗಾಧ ಬೆಲೆ ತೆತ್ತವರಲ್ಲಿ ಭಿಡೆ ಮೊದಲಿಗರು. ತೇವಾಂಶ ಅಧಿಕವಾಗಿದ್ದರೆ, ಹಣ್ಣು ಮರದಲ್ಲಿರುವಾಗಲೇ ಶಿಲೀಂಧ್ರ ಬಾಧೆ ಉಂಟಾಗುತ್ತದೆ. ಬಿಸಿ ಹೆಚ್ಚಿದರೆ, ಹಲವು ಬಗೆಯ ಕೀಟಗಳು ದಾಳಿ ಮಾಡುತ್ತವೆ. ಬೆಳೆಗಾರರಿಗೆ ಅಧಿಕ ಕೀಟನಾಶಕ ಬಳಸುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಇದು ಸಹಜವಾಗಿಯೇ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ
ಪರಿಸರಕ್ಕೆ ವಿಷಕಾರಿಯಾಗುವ ಕೀಟನಾಶಕಗಳನ್ನು ಭಿಡೆ ಬಳಕೆ ಮಾಡುವುದಿಲ್ಲ. ರೈತರ ವಿಚಾರಕ್ಕೆ ಬಂದರೆ ಋತುಮಾನದ ಬದಲಾವಣೆಗಳು ಮಕರಸಂಕ್ರಾಂತಿ (ಜನವರಿ) ಹಾಗೂ ಶಿವರಾತ್ರಿ (ಫೆಬ್ರವರಿ- ಮಾರ್ಚ್)ಯಂಥ ಹಬ್ಬದ ಜತೆ ನಿಕಟ ನಂಟು ಹೊಂದಿರುತ್ತದೆ. ಈ ಬದಲಾವಣೆಗಳು ಹೂಬಿಡುವ, ಪರಾಗಸ್ಪರ್ಶ ಹಾಗೂ ಕಾಯಿಕಟ್ಟುವ ಹಾಗೂ ಹಣ್ಣಾಗಿ ಪರಿವರ್ತನೆಯಾಗುವ ನಿರ್ಧಾರಕ ಅಂಶಗಳು. ಈ ಬದಲಾವಣೆಗಳು ಊಹಿಸುವಂತಿರಬೇಕು ಎನ್ನುವುದು ರೈತರ ಆಶಯ. ಆದರೆ ಹವಾಮಾನ ಬದಲಾವಣೆ ಈ ಎಲ್ಲ ಅಂಶಗಳನ್ನೂ ಅನಿಶ್ಚಿತವಾಗಿ ಮಾಡುತ್ತವೆ

ಶಿಲೀಂಧ್ರ ಸೋಂಕು
ನವಿ ಮುಂಬೈಯ ವಾಶಿ ಹಣ್ಣಿನ ಮಾರುಕಟ್ಟೆಗೆ 2016ರ ಬೇಸಿಗೆಯಲ್ಲಿ ಬಂದ ಬಹುತೇಕ ಮಾವಿನಹಣ್ಣುಗಳಲ್ಲಿ ಕಪ್ಪುಬಣ್ಣದ ಕಲೆಗಳಿದ್ದವು. ಇದು ಭಾರತದ ಅತ್ಯಂತ ಪ್ರಸಿದ್ಧ ತಳಿಯ ನೋಟವನ್ನೇ ಹಾಳುಗೆಡವಿತ್ತು. ಇದಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಕೂಗು. ಈ ಕಪ್ಪುಕಲೆಗೆ ಮುಖ್ಯ ಕಾರಣವೆಂದರೆ ಅಕಾಲಿಕ ಮಳೆ. ಫೆಬ್ರವರಿಯಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಶಿಲೀಂಧ್ರ ರೋಗ ಎಲ್ಲ ಹಣ್ಣಿನ ತೋಟಗಳನ್ನು ಆವರಿಸಿತ್ತು.
ವಿಜ್ಞಾನಿಗಳು ಇದನ್ನು ಆಂಥ್ರಕ್ನೋಸ್ ಎಂದು ಕರೆದರೆ, ಸ್ಥಳೀಯ ರೈತರು ಮತ್ತು ವ್ಯಾಪಾರಿಗಳು ಆಂಥ್ರಾಕ್ಸ್ ಎಂದು ಕರೆಯುತ್ತಾರೆ. ವಿದ್ಯಾಧರ ಜೋಶಿಗೆ ಈ ಎರಡೂ ಪದಗಳ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಆಲ್ಫೋನ್ಸೊ ಮಾವಿನಹಣ್ಣಿಗೆ ರತ್ನಗಿರಿಯಷ್ಟೇ ಪ್ರಸಿದ್ಧವಾದ ಸಿಂಧುದುರ್ಗ ಜಿಲ್ಲೆಯ ದೇವಗಡಕ್ಕೆ ವಾಪಸ್ಸಾಗುವ ಮುನ್ನ ಜೋಶಿ ಮುಂಬೈ ಕಾಲೇಜಿನಲ್ಲಿ ಆಹಾರ ಸಂಸ್ಕರಣೆ ವಿಷಯದಲ್ಲಿ ಪದವಿ ಪಡೆದಿದ್ದರು. ‘‘ನಾನು ನನ್ನ ಮಳೆಮಾಪನ ಯಂತ್ರವನ್ನು ಇತರರು, ದೀಪ ಹಾಗೂ ಅಗರಬತ್ತಿಯಿಂದ ಪೂಜಿಸಿದಷ್ಟೇ ಶ್ರದ್ಧೆಯಿಂದ ವೀಕ್ಷಿಸುತ್ತೇನೆ. 2016ರ ಫೆಬ್ರವರಿ 28ರಂದು, 5.8 ಮಿಲೀಮೀಟರ್ ಮಳೆ ಬಂತು. ಮರುದಿನ ಮೂರು ಗಂಟೆ ಕಾಲ ನಿರಂತರವಾಗಿ ಮಳೆಬಂತು’’ ಎಂದು ವಿವರಿಸಿದರು. ತಕ್ಷಣ ತಮ್ಮ ಮರಗಳಿಗೆ ಶಿಲೀಂಧ್ರನಾಶಕ ಡಿಫೆನಿಕೊನರೆಲ್- 0.5 ಎಂಎಲ್ ಸಿಂಪಡಿಸಿದರು. ಏಕೆಂದರೆ ಶಿಲೀಂಧ್ರರೋಗ ಅಧಿಕ ತೇವಾಂಶದಲ್ಲಿ ಕ್ಷಿಪ್ರವಾಗಿ ಹರಡುತ್ತದೆ.
‘‘ಮೂರು ದಿನಗಳಲ್ಲಿ ನಾನು ಎಷ್ಟು ಮರಗಳಿಗೆ ಶಿಲೀಂಧ್ರನಾಶಕ ಸಿಂಪಡಿಸಲು ಸಾಧ್ಯವಾಯಿತೊ ಅಷ್ಟು ಮರಗಳಿಗೆ ರೋಗ ಹರಡಿಲ್ಲ. ಆದರೆ ಎಲ್ಲ ಮರಗಳಿಗೆ ಸಿಂಪಡಿಸಲು 13 ದಿನ ಬೇಕಾಯಿತು’’ ಎನ್ನುತ್ತಾರೆ. ಕುಟುಂಬದಿಂದ ಬಂದ ಮಾವಿನತೋಟದ ಜತೆಗೆ ಜೋಶಿ ಗುತ್ತಿಗೆಯಲ್ಲಿ ಇತರ ಹಣ್ಣಿನ ತೋಟಗಳನ್ನೂ ತೆಗೆದುಕೊಂಡಿದ್ದಾರೆ. ಬಹುತೇಕ ಭೂಮಾಲಕರು ತಮ್ಮ ತೋಟಗಳಿಗೆ ಹೋಗುವುದಿಲ್ಲ. ಆದರೆ ಜೋಶಿ ಇತರರಿಗಿಂತ ಭಿನ್ನ. ಅವರಿಗೆ ತೋಟಗಾರಿಕೆ ಬಗ್ಗೆ ಅತೀವ ಒಲವು. ಕೃಷಿ ವಿಜ್ಞಾನಿಗಳನ್ನಂತೂ ಅವರು ಸಮಸ್ಯೆಗೆ ಸ್ಪಂದಿಸುವವರೆಗೂ ಬೆನ್ನು ಬಿಡುವುದಿಲ್ಲ.
ಯಾವ ಮರಗಳಿಗೆ ನಾನು ತಕ್ಷಣ ಸಿಂಪಡಿಸಲು ಸಾಧ್ಯವಾಗಿಲ್ಲವೋ ಆ ಮರಗಳಿಗೆ ಶಿಲೀಂಧ್ರರೋಗ ವ್ಯಾಪಕವಾಯಿತು. ಮಾರುಕಟ್ಟೆಯಲ್ಲಿ ಅಧಿಕ ಬೆಲೆ ದೊರಕುವ ದೊಡ್ಡ ಹಣ್ಣುಗಳಿಗೆ ಶಿಲೀಂಧ್ರ ದಾಳಿ ಮಾಡಿತು. ಬಹಳಷ್ಟು ಶ್ರಮ, ಸಮಯ ಹಾಗೂ ಹೂಡಿಕೆ ನಷ್ಟವಾಯಿತು. ಇದೇ ಪರಿಸ್ಥಿತಿ 2008ರಲ್ಲೂ ಕಂಡುಬಂದಿತ್ತು. ಅವರ ದೂರವಾಣಿ ಒಂದೇ ಸಮನೆ ಮೊಳಗುತ್ತಿತ್ತು. ಹತಾಶ ರೈತರು ಸಲಹೆಗಾಗಿ ಅವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದರು. ಜೋಶಿ ರೈತರ ಗುಂಪಿನ ಮುಖಂಡ. ಅವರ ಪರವಾಗಿ ಸರಕಾರಿ ವಿಜ್ಞಾನಿಗಳ ಜತೆ ಸಂವಾದ ಆಯೋಜಿಸುತ್ತಾರೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಮಯ ಸೂಕ್ತ ತರಬೇತಿ ಹಾಗೂ ಮಾಹಿತಿ ರೈತರಿಗಿಲ್ಲ.
ದೊಡ್ಡ ರೈತರಿಗೆ ಅವರದ್ದೇ ಆದ ಬೇರೆ ಸಮಸ್ಯೆ. 12 ಸಾವಿರಕ್ಕೂ ಹೆಚ್ಚು ಮಾವಿನಮರ ಹೊಂದಿರುವ ದೇಸಾಯಿ ಬಂಧು ಅಂಬೇವಾಲೆ, ಬಹುಶಃ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಬಹುಶಃ ಅತಿದೊಡ್ಡ ಮಾವು ಬೆಳೆಗಾರ. ಇವರಿಗೆ ಮಾವಿನಹಣ್ಣು ಕೀಳಲು 450 ಮಂದಿ ಸಹಾಯಕರಿದ್ದಾರೆ. 100ಕ್ಕೂ ಹೆಚ್ಚು ಮಂದಿ ವರ್ಷವಿಡೀ ಇವರ ತೋಟದಲ್ಲಿ ಕೆಲಸ ಮಡುತ್ತಾರೆ. ‘‘ಇಷ್ಟಾಗಿಯೂ, ನಮ್ಮ ಎಲ್ಲ ಮರಗಳಿಗೆ ಸಿಂಪಡಿಸಲು ಎಂಟು ದಿನ ಬೇಕಾಗುತ್ತದೆ’’ ಎಂದು ಕಂಪೆನಿಯನ್ನು ನಿರ್ವಹಿಸುತ್ತಿರುವ ಸೋದರ ಸಂಬಂಧಿಗಳಲ್ಲೊಬ್ಬರಾದ ಆನಂದ ದೇಸಾಯಿ ಹೇಳುತ್ತಾರೆ. ಆಲ್ಫೋನ್ಸೊ ಉದ್ಯಮ ನಡೆಸುತ್ತಿರುವ ಈ ಕುಟುಂಬದ ನಾಲ್ಕನೇ ತಲೆಮಾರು ಇದು. ಹವಾಮಾನ ಬದಲಾವಣೆಯ ಪರಿಣಾಮ ಹಾಗೂ ಉಷ್ಣಾಂಶದಲ್ಲಿನ ಬದಲಾವಣೆ ಮರಗಳಿಗೆ ಥಟ್ಟನೆ ತಟ್ಟುತ್ತದೆ ಎಂದು ಅವರು ಹೇಳುತ್ತಾರೆ.
ವಿಶಿಷ್ಟ ಘಮದಿಂದ ಹೆಸರಾಗಿರುವ ಈ ಹಣ್ಣು, ಶುಗರ್ ಆಸಿಡ್‌ಯುಕ್ತವಾಗಿದೆ ಹಾಗೂ ಅತ್ಯಂತ ಸ್ವಾಧಿಷ್ಟ. ನಾರುರಹಿತ ಪಲ್ಪ್ ತಯಾರಿಸಲು ಇದು ಒಳ್ಳೆಯ ಹಣ್ಣು. ಅಲ್ಫೋನ್ಸೊ ಮರಗಳು ಬದಲಾವಣೆಗೆ ತೀರಾ ಸೂಕ್ಷ್ಮವಾಗಿ ಸ್ಪಂದಿಸುತ್ತವೆ. ಹೂಬಿಡುವ ಹಂತದಲ್ಲಿ ಉಷ್ಣತೆ ಹೆಚ್ಚಿದರೆ ತೀರಾ ಸಮಸ್ಯೆ ಉಂಟಾಗುತ್ತದೆ ಎಂದು ಅನುಭವಿ ರೈತರು ಹೇಳುತ್ತಾರೆ. ಗಂಡುಹೂವುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವುದರಿಂದ ಪರಾಗಸ್ಪರ್ಶ ಸರಿಯಾಗಿ ಆಗುವುದಿಲ್ಲ ಹಾಗೂ ಕಾಳುಗಟ್ಟುವುದಿಲ್ಲ. ಮಾವಿನಮರಗಳ ಕೃತಕ ಪರಾಗಸ್ಪರ್ಶ ಮಾಡಬೇಕಾಗುತ್ತದೆ. ಗಂಡು ಹಾಗೂ ಹೆಣ್ಣು ಹೂವುಗಳು ವಿಭಿನ್ನ ವೇಳೆಯಲ್ಲಿ ಅರಳುತ್ತವೆ. ಇದರಿಂದ ಸಹಜ ಪರಾಗಸ್ಪರ್ಶ ಆಗುವುದಿಲ್ಲ.
ಆದರೆ ಈ ಎಲ್ಲ ಬದಲಾವಣೆಗಳು ನೇರವಾಗಿ ಹವಾಮಾನ ಬದಲಾವಣೆಯಿಂದ ಸಂಭವಿಸುತ್ತವೆ ಎನ್ನುವುದನ್ನು ನಿರೂಪಿಸಲಾಗದು. ಇದರ ಕಾರಣ ಹಾಗೂ ಪರಿಣಾಮ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ; ಋತುವಿನಿಂದ ಋತುವಿಗೆ ಬದಲಾಗುತ್ತದೆ. ಇಷ್ಟಾಗಿಯೂ ಇದು ಹವಾಮಾನ ಬದಲಾವಣೆಯ ಪರಿಣಾಮ ಎನ್ನುವುದನ್ನು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಉಷ್ಣತೆ ಹಾಗೂ ಮಳೆಯಲ್ಲಿ ವ್ಯತ್ಯಯವಾದಾಗ, ಸಾಮಾನ್ಯ ಹವಾಮಾನ ಪರಿಸ್ಥಿತಿಗೆ ಧಕ್ಕೆ ಉಂಟಾಗುತ್ತದೆ. ಈ ಎಲ್ಲ ಪರಿಣಾಮವಾಗಿ ಅನಿಶ್ಚಿತತೆ ಸೃಷ್ಟಿಯಾಗುತ್ತದೆ.

ಅಪಾಯ
ಅಖಿಲ ಭಾರತ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ನಿರ್ದೇಶಕ ಶೇಖ್ ಇನ್‌ಸ್ರಾಮ್ ಅಲಿ ಅವರು ಇದಕ್ಕೆ ಹವಾಮಾನ ಬದಲಾವಣೆಯೇ ಕಾರಣ ಎಂದು ಥಟ್ಟನೆ ಹೇಳುತ್ತಾರೆ. ಅವರ ಮಾವಿನತೋಟ ಮಲಿಹಾಬಾದ್‌ನಲ್ಲಿದೆ. ‘‘ಪ್ರತಿ ಋತುವಿನಲ್ಲಿ ದಿಢೀರ್ ಹವಾಮಾನ ಬದಲಾವಣೆಯಿಂದ ಬೆಳೆಗಾರರ ಫಸಲಿಗೆ ಹಾನಿ ಉಂಟಾಗುತ್ತದೆ. ಇದರಿಂದ ಅಲ್ಫೋನ್ಸೊ ಬೆಳೆಯುವುದೇ ಲಾಭದಾಯಕವಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ’’ ಎಂದು ಅವರು ಹೇಳುತ್ತಾರೆ.
ಅಪಾಯ ಮತ್ತು ಅನಿಶ್ಚಿತತೆ ಕಾರಣದಿಂದ ಹಲವಾರು ಮಂದಿ ಮಾವು ವಹಿವಾಟಿನಿಂದ ಹೊರಬರಲು ಮುಂದಾಗಿದ್ದಾರೆ. ಲಾಭ ಬಿಡಿ; ಹೂಡಿಕೆಯನ್ನು ಮರಳಿ ಪಡೆಯುವುದೂ ಕಷ್ಟಕರವಾಗಿದೆ. ಅದು ಕೂಡಾ ಉತ್ಪಾದನಾ ವೆಚ್ಚ ಅಧಿಕವಾಗುತ್ತಿರುವ ಪರಿಸ್ಥಿತಿಯಲ್ಲಿ ಸಮಸ್ಯೆಗಳ ಸರಣಿ ಎದುರಾಗಿದೆ. ಜೀವನಾಧಾರಕ್ಕೆ ಬೇರೆ ಯಾವ ಆಯ್ಕೆಯೂ ಇಲ್ಲದಿರುವುದರಿಂದ ರೈತರು ಇಂದಿಗೂ ಮಾವಿನಲ್ಲಿ ತಮ್ಮ ಶ್ರಮ ಹಾಗೂ ಹಣ ಹೂಡುತ್ತಿದ್ದಾರೆ ಎನ್ನುವುದು ಅಲಿ ಅವರ ಅಭಿಪ್ರಾಯ. ರೈತರಿಂದ ಪದೇ ಪದೇ ಹವಾಮಾನ ಬದಲಾವಣೆ ದೂರು ಕೇಳಿಬರುತ್ತಿದೆ. ಈ ಋತುಮಾನದ ವ್ಯತ್ಯಯವನ್ನು ಬದಿಗಿಟ್ಟರೂ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬದಲಾವಣೆಯನ್ನು ವಿಶ್ಲೇಷಿಸುವುದು ಸಾಧ್ಯವಿಲ್ಲ ಎನ್ನುವುದು ಅವರ ಅಭಿಮತ.
ಅಕಾಲಿಕ ಬಿಸಿಯ ಜತೆಗೆ ಹಿಮಪಾತ ಹಾಗೂ ಗಾಳಿ ಕೂಡಾ ಮಾವಿಗೆ ಮಾರಕ ಎನ್ನುತ್ತಾರೆ ಮತ್ತೊಬ್ಬ ಬೆಳೆಗಾರ ಕಲೀಮುದ್ದೀನ್ ಸಿದ್ದಿಕಿ. ಉತ್ತರ ಪ್ರದೇಶದ ಆಮ್ರೋಹ ಪಟ್ಟಣದಲ್ಲಿ ತಮ್ಮ ಪಿತ್ರಾರ್ಜಿತ ಮಾವಿನ ತೋಟವನ್ನು ನಿರ್ವಹಿಸುತ್ತಿದ್ದಾರೆ. ಈ ಪಟ್ಟಣದ ಹೆಸರು ಬಂದಿರುವುದೇ ಮಾವಿನಹಣ್ಣಿನ ಉರ್ದು ಹೆಸರು ಆಮ್‌ನಿಂದ. ‘‘ಮಾವಿಗೆ ಚಳಿಗಾಲದ ಹಿಮ ಲಾಭದಾಯಕ ಎಂದು ನಾವು ನಂಬಿದ್ದೇವೆ. ಇದು ಹೊದಿಕೆಯ ರೂಪದಲ್ಲಿ ಕೆಲಸ ಮಾಡುತ್ತದೆ. ಚಳಿಗಾಲದ ಚಳಿಯಿಂದ ಸುರಕ್ಷೆ ನೀಡುತ್ತದೆ. ಚಳಿಗಾಲದಲ್ಲಿ ಹಿಮಪಾತವಾದಷ್ಟೂ ಹೂಬಿಡುವ ಪ್ರಮಾಣ ಹೆಚ್ಚುತ್ತದೆ’’ ಎನ್ನುವುದು ಅವರ ಅನುಭವದ ಮಾತು.
thewire.in

Writer - ಸೋಪನ್ ಜೋಶಿ

contributor

Editor - ಸೋಪನ್ ಜೋಶಿ

contributor

Similar News