ಇಸ್ತಾಂಬುಲ್ ವಿಮಾನ ನಿಲ್ದಾಣದ ಮೇಲೆ ಬಾಂಬ್, ಗುಂಡಿನ ದಾಳಿ

Update: 2016-06-29 04:22 GMT

ಇಸ್ತಾಂಬುಲ್,ಜೂ.29: ಇಲ್ಲಿನ ಅತರುಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಬಾಂಬ್ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೂವರು ದಾಳಿಕೋರರು ಪ್ರವೇಶದ್ವಾರದ ಬಳಿ ಮನಸೋ ಇಚ್ಛೆ ಗುಂಡು ಹಾರಿಸಿದ್ದಲ್ಲದೇ, ಪೊಲೀಸರು ತಮ್ಮತ್ತ ಗುಂಡು ಹಾರಿಸಿದಾಗ ತಾವೇ ಸ್ಫೋಟಿಸಿಕೊಂಡರು ಎಂದು ಅಧಿಕೃತ ಮೂಲಗಳು ಹೇಳಿವೆ. ಈ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೈವಾಡ ಇದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪ್ರಧಾನಿ ಬಿನಲಿ ಯಿಲ್ದಿರಿಮ್ ಹೇಳಿದ್ದಾರೆ. ಇತ್ತೀಚೆಗೆ ಟರ್ಕಿಯ ಮೇಲೆ ನಡೆದ ದಾಳಿಗೂ ಐಎಸ್ ಅಥವಾ ಕುರ್ದಿಶ್ ಪ್ರತ್ಯೇಕತಾವಾದಿಗಳಿಗೂ ಸಂಬಂಧವಿದೆ ಎಂದು ಹೇಳಲಾಗಿದೆ.

ಮಂಗಳವಾರ ನಡೆದ ದಾಳಿ ಸಂಘಟಿತ ದಾಳಿ ಆಗಿರಬೇಕು ಎಂದು ಶಂಕಿಸಲಾಗಿದೆ. ಅತರುಕ್ ವಿಮಾನ ನಿಲ್ದಾಣ ಉಗ್ರರ ದಾಳಿಗೆ ತುತ್ತಾಗುವ ಅಪಾಯದ ಬಗ್ಗೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಎಕ್ಸ್‌ರೇ ಸ್ಕ್ಯಾನರ್ ಇದ್ದರೂ, ಕಾರುಗಳ ಪ್ರವೇಶಕ್ಕೆ ಹೆಚ್ಚಿನ ಭ್ರದ್ರತಾ ಕ್ರಮಗಳನ್ನು ಕೈಗೊಳ್ಳುವ ವ್ಯವಸ್ಥೆ ಇಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಉಗ್ರರ ವಿರುದ್ಧದ ಸಮರಕ್ಕೆ ಇದು ಮಹತ್ವದ ತಿರುವು ಎಂದು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯುಬ್ ಫ್ರಾಡೊಗನ್ ಹೇಳಿದ್ದಾರೆ. ಇಂದು ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಸಿಡಿದ ಬಾಂಬ್‌ಗಳು ನಾಳೆ ಇತರ ಯಾವುದೇ ವಿಮಾನ ನಿಲ್ದಾಣಗಳಲ್ಲೂ ಸಿಡಿಯುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕ ಈ ಘಟನೆಯನ್ನು ಹೇಯ ಕೃತ್ಯ ಎಂದು ಬಣ್ಣಿಸಿದೆ. ಅಮೆರಿಕ ಹಾಗೂ ಜರ್ಮನಿ ಟರ್ಕಿಗೆ ಸಂಪೂರ್ಣ ಬೆಂಬಲ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News