ಹೈದರಾಬಾದ್: ಭಯೋತ್ಪಾದನೆ ಆರೋಪಿಗಳಿಗೆ ಉವೈಸಿಯಿಂದ ಕಾನೂನು ನೆರವು

Update: 2016-07-02 03:26 GMT

ಹೈದರಾಬಾದ್, ಜು.2: ಇಸ್ಲಾಮಿಕ್ ಸ್ಟೇಟ್ ಉಗ್ರರು ಎಂಬ ಶಂಕೆಯಿಂದ ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ ಐವರಿಗೆ ಕಾನೂನು ನೆರವು ನೀಡಲು ಪಕ್ಷ ನಿರ್ಧರಿಸಿದ್ದು, ಆರೋಪಿಗಳ ಪರ ವಾದ ಮಂಡಿಸಲು ವಕೀಲರನ್ನು ನೇಮಕ ಮಾಡಲಾಗುವುದು ಎಂದು ಮಜ್ಲಿಸ್ ಇ ಇತ್ತೆದಾಹುಲ್ ಮುಸ್ಲಿಮೀನ್ (ಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಪ್ರಕಟಿಸಿದ್ದಾರೆ.

ನಾಂಪಲ್ಲಿ ನ್ಯಾಯಾಲಯದ ಹಿರಿಯ ವಕೀಲರ ಜೊತೆ ಈ ಸಂಬಂಧ ಚರ್ಚಿಸಲಾಗಿದ್ದು, ಬಂಧಿತರ ಕುಟುಂಬದವರು ಈಗಾಗಲೇ ತಮ್ಮ ಬಳಿ ಬಂದು ಮನವಿ ಮಾಡಿದ್ದಾರೆ. ಅವರಿಗೆ ಕಾನೂನು ನೆರವು ನೀಡುವ ಭರವಸೆ ನೀಡಿದ್ದಾಗಿ ಇಲ್ಲಿನ ಮೆಕ್ಕಾ ಮಸೀದಿಯಲ್ಲಿ ನಡೆದ ಸಮಾವೇಶದಲ್ಲಿ ಅವರು ಸ್ಪಷ್ಟಪಡಿಸಿದರು.
ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಲುವಿಗೆ ಪಕ್ಷದ ಬೆಂಬಲವಿಲ್ಲ. ಇದನ್ನು ವಿರೋಧಿಸುವಲ್ಲಿ ನಮ್ಮ ಪಕ್ಷ ಮುಂಚೂಣಿಯಲ್ಲಿರುತ್ತದೆ. ಆದರೆ ಕೇಂದ್ರ ಸರಕಾರ ಭಯೋತ್ಪಾದಕರ ಪ್ರಕರಣಗಳಲ್ಲಿ ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿದ್ದು, ಮೆಕ್ಕಾ ಮಸೀದಿ ಸ್ಫೋಟ ಹಾಗೂ ಅಜ್ಮೀರ್ ಸ್ಫೋಟ ಘಟನೆಯಲ್ಲಿ ಮೃದು ನೀತಿ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿದರು.

ಐಎಸ್ ಉಗ್ರರು ಕೊಲೆಗಡುಕರು, ಅತ್ಯಾಚಾರಿಗಳು ಹಾಗೂ ಭಯೋತ್ಪಾದಕರಿಗಿಂತಲೂ ಕೆಟ್ಟವರು. ಇಸ್ಲಾಂ ಧರ್ಮ ಹಾಗೂ ಭಯೋತ್ಪಾದನೆಗೆ ಯಾವುದೇ ಸಂಬಂಧವಿಲ್ಲ. ಐಎಸ್ ಸಿದ್ಧಾಂತ ಇಲ್ಲಿಗೇ ಕೊನೆಗೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮುಸ್ಲಿಮರು ದೇಶಕ್ಕೆ ನಿಷ್ಠರಾಗಿರಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News