ಸೆಲ್ಫಿ ಗೀಳು: ಕೋಸಿ ನದಿಯಲ್ಲಿ ಕೊಚ್ಚಿಹೋದ 12 ವಿದ್ಯಾರ್ಥಿಗಳು, ಇಬ್ಬರು ನೀರು ಪಾಲು

Update: 2016-07-14 03:10 GMT

ರಾಂಪುರ,ಜು.14: ತಮ್ಮ ಜೀವವನ್ನು ಒತ್ತೆ ಇಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಗೀಳಿನಿಂದಾಗಿ 12 ವಿದ್ಯಾರ್ಥಿಗಳು ಕೋಸಿ ನದಿಯಲ್ಲಿ ಕೊಚ್ಚಿಕೊಂಡು ಹೋದ ಘಟನೆ ಸಂಭವಿಸಿದೆ. ಈ ಪೈಕಿ ಹತ್ತನೇ ತರಗತಿಯ ಇಬ್ಬರು ಜಲಸಮಾಧಿಯಾಗಿದ್ದಾರೆ. ವಿದ್ಯಾರ್ಥಿಗಳ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಈಜುಗಾರರು ಹತ್ತು ಮಂದಿಯನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನದಿಯ ಆಳಕ್ಕೆ ಹೋದ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಪಕ್ಕದ ಲಾಲ್ಪುರ ಅಣೆಕಟ್ಟಿನಿಂದ ನೀರು ಬಿಟ್ಟ ಪರಿಣಾಮ ಒಂದೇ ಸಮನೆ ನೀರಿನ ಹರಿವು ಹೆಚ್ಚಿದ್ದರಿಂದ ವಿದ್ಯಾರ್ಥಿಗಳು ಕೊಚ್ಚಿಕೊಂಡು ಹೋದರು. ಸೈಫ್ ಅಲಿ ಖಾನ್ ಹಾಗೂ ಫೈಝಲ್ ಎಂಬ ಇಬ್ಬರ ಶವ ನಾಲ್ಕು ಗಂಟೆಯ ಬಳಿಕ ಸಿಕ್ಕಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಈ ಯುವಕರ ತಂಡ ಪಿಕ್ ನಿಕ್ ಗೆ ಬರುವಾಗ ಮೊಬೈಲ್ ಫೋನ್ ತಂದಿತ್ತು. ಹೊಳೆಯ ಆಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಇರಾದೆಯಿಂದ ತೀರಾ ಆಳಕ್ಕೆ ಹೋದರು. ಹಠಾತ್ತನೇ ಪ್ರವಾಹ ಬಂದು ಕೊಚ್ಚಿಕೊಂಡು ಹೋದರು. ಹತ್ತು ಮಂದಿಯನ್ನು ರಕ್ಷಿಸಿದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತರ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರಿಂದ ಅವರಿಗೆ ದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಅಝೀಂ ನಗರ ಠಾಣಾಧಿಕಾರಿ ಕುಶಲವೀರ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News