ಬಿಕ್ಕಟ್ಟಿನ ಅಂಚಿನಲ್ಲಿ ಪ್ರಜಾಪ್ರಭುತ್ವ

Update: 2016-07-17 18:18 GMT

ಗಲಭೆ ಪೀಡಿತ ಪ್ರದೇಶದಲ್ಲಿ ನಿಯೋಜಿತವಾದ ಸೇನೆಗೆ ವಿಶೇಷ ಅಧಿಕಾರ ನೀಡುವಂತಹ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ ಹಾಗೂ ಪ್ರಭುತ್ವದ ವೈಫಲ್ಯಕ್ಕೆ ಸೂಚಕ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವಾಗಲೇ ಕಾಶ್ಮೀರ ಮತ್ತೆ ಹೊತ್ತಿ ಉರಿಯುತ್ತಿದೆ. ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಎಂಬಾತನನ್ನು ನಮ್ಮ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದ ಬಳಿಕ ಭುಗಿಲೆದ್ದಿರುವ ಹಿಂಸಾಚಾರಕ್ಕೆ 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿರುದ್ಧ ಕಾಶ್ಮೀರ ಮಾತ್ರವಲ್ಲ, ಮಣಿಪುರ ಜನತೆಯೂ ದಶಕಗಳಿಂದ ಹೋರಾಡುತ್ತಿದ್ದಾರೆ. 1978ರಿಂದ 2010ರ ಕಾಲಾವಧಿಯಲ್ಲಿ ಮಣಿಪುರ ರಾಜ್ಯದಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರು ನಡೆಸಿದ ಹತ್ಯಾಕಾಂಡಕ್ಕೆ 1,528ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಪ್ರಜಾಪ್ರಭುತ್ವ ವಿರೋಧಿ ಶಾಸನವನ್ನು ವಾಪಸು ಪಡೆಯುವಂತೆ ಇರೋಮ್ ಶರ್ಮಿಳಾ ಎಂಬ ಮಹಿಳೆ ಎರಡು ದಶಕಗಳಿಂದ ನಿರಶನ ಸತ್ಯಾಗ್ರಹ ನಡೆಸಿದ್ದಾರೆ. ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳದೆ ಅಲ್ಲಿ ಸೇನಾ ಪಡೆಗಳು ಪ್ರಜೆಗಳ ಮೇಲೆ ನಡೆಸಿದ ದೌರ್ಜನ್ಯವನ್ನು ಮಹಾ ಪರಾಕ್ರಮ ಎಂಬಂತೆ ದೇಶದ ಒಳಗೆ ಬೆಚ್ಚಗೆ ಕುಳಿತಿರುವ ನಕಲಿ ದೇಶ ಭಕ್ತರು ಹಾಡಿ ಹೊಗಳುತ್ತಿದ್ದಾರೆ. ಬೀದಿಯಲ್ಲಿ ಹರಿಯುತ್ತಿರುವ ರಕ್ತವನ್ನು ಕಂಡು ಸಂಭ್ರಮಿಸುತ್ತಿರುವ ಇವರ ರಾಷ್ಟ್ರಭಕ್ತಿನ್ನು ಕಂಡು ಮೋದಿಜಿ ಮಾತಾಡದೆ ವೌನ ತಾಳಿದ್ದಾರೆ. ಜನಾಂಗ ದ್ವೇಷಿ ಕೋಮುವಾದಿಗಳು ಬಹಳ ಜನರ ತಲೆ ಕೆಡಿಸಿರುವಂತೆ ಕಾಶ್ಮೀರಿಗಳು ದೇಶದ್ರೋಹಿಗಳಲ್ಲ. ಪಾಕಿಸ್ತಾನದ ಜೊತೆಗೆ ಸೇರಬೇಕೆಂಬ ಬಯಕೆಯೂ ಅವರಿಗಿಲ್ಲ. ವಾಸ್ತವವಾಗಿ ದೇಶ ವಿಭಜನೆಯಾದಾಗ ಅಲ್ಲಿನ ಹಿಂದೂ ರಾಜ ಹರಿಸಿಂಗ್ ಭಾರತದ ಜೊತೆ ಕಾಶ್ಮೀರವನ್ನು ಸೇರ್ಪಡೆ ಮಾಡಲು ನಿರಾಕರಿಸಿದಾಗ, ಶೇಕ್ ಅಬ್ದುಲ್ಲಾ ನೇತೃತ್ವದಲ್ಲಿ ಕಾಶ್ಮೀರಿಗಳು ಭಾರತದ ಜೊತೆಗೆ ಸೇರಲು ಹೋರಾಡಿದ ಇತಿಹಾಸವಿದೆ.
ಈಗ ಹೊಸ ಪೀಳಿಗೆಯ ಕಾಶ್ಮೀರಿಗಳು ಬಯಸುತ್ತಿರುವುದು ಐಡೆಂಟಿಟಿಯನ್ನು. ತಮ್ಮ ಕಾಶ್ಮೀರಿ ಅಸ್ಮಿತೆಯನ್ನು ಕಳೆದುಕೊಳ್ಳಲು ಅವರು ತಯಾರಿಲ್ಲ. ಭಯೋತ್ಪಾದಕತೆ ದಮನದ ಹೆಸರಿನಲ್ಲಿ ಅಲ್ಲಿ ಸೇನಾ ಪಡೆಗಳು ನಡೆಸಿರುವ ದೌರ್ಜನ್ಯ, ಹತ್ಯಾಕಾಂಡಗಳ ಬಗ್ಗೆ ಅವರಲ್ಲಿ ಆಕ್ರೋಶವಿದೆ. ಈ ಆಕ್ರೋಶಕ್ಕೆ ಸಾಂತ್ವನದ ಪರಿಹಾರ ಬೇಕಾಗಿದೆ. ಬಂದೂಕಿನ ಭಾಷೆಗಿಂತ ಹೃದಯದ ಭಾಷೆಯಲ್ಲಿ ಮಾತಾಡಬೇಕಿದೆ.

ಹಿಮಾಲಯದ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಗುಂಡೇಟು ತಿಂದು ಸಾಯುವ ನಮ್ಮ ವೀರ ಯೋಧರ ತ್ಯಾಗಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಆದರೆ, ದೇಶದ ಒಳಗೆ ಹಸಿರು ಕಂಡಲ್ಲಿ ಬಾಯಾಡಿಸಿ ಬೆಚ್ಚಗಿದ್ದಲ್ಲಿ ಮಲಗಿ, ತಮ್ಮ ಮಕ್ಕಳನ್ನು ಅಪ್ಪಿತಪ್ಪಿಯೂ ಸೇನೆಗೆ ಕಳಿಸದೇ ರಿಯಲ್ ಎಸ್ಟೇಟ್, ಮೈನಿಂಗ್, ಮರಳು ಗಣಿಗಾರಿಕೆ ಮುಂತಾದ ದಂಧೆಯಲ್ಲಿ ತೊಡಗಿಸುವ ಈ ನಕಲಿ ಭಕ್ತರು ಪ್ರತೀ ಸೈನಿಕ ಸತ್ತಾಗ ಹುತಾತ್ಮರೆಂದು ಮೊಸಳೆ ಕಣ್ಣೀರು ಸುರಿಸುತ್ತಾರೆ. ಜಾಗೋ ಭಾರತ ಎಂದು ಇಲ್ಲಿ ವೀರಾವೇಶದ ಭಾಷಣ ಮಾಡುತ್ತ ಗಣಿ ಉದ್ಯಮಿಗಳ ಮನೆಯಲ್ಲಿ, ಸಾಹುಕಾರರ ಮನೆಯಲ್ಲಿ ಪುಕ್ಕಟೆ ಭೋಜನ ಮಾಡುತ್ತಾ ತಿರುಗಾಡುವ ‘ಮಹಾನ್ ರಾಷ್ಟ್ರಭಕ್ತರು’ ಕಾಶ್ಮೀರ ಹೆಸರಿನಲ್ಲಿ ದೇಶದೊಳಗಿನ ಮುಸ್ಲಿಮರ ವಿರುದ್ಧ ಅಮಾಯಕರನ್ನು ಎತ್ತಿ ಕಟ್ಟುವ ಹುನ್ನಾರ ನಡೆಸುತ್ತಾರೆ. ದೇಶದ ಗಡಿಯಲ್ಲಿ ಈ ಪರಿಸ್ಥಿತಿಯಾದರೆ ದೇಶದ ಒಳಗೆ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿವೆ. ಎಂಥ ವಿಚಿತ್ರವೆಂದರೆ ದನದ ಮಾಂಸ ಸೇವನೆಯ ಶಂಕೆಯಲ್ಲಿ ಹತ್ಯೆಯಾದ ದಾದ್ರಿಯ ಅಖ್ಲಾಕ್ ಕುಟುಂಬದ ವಿರುದ್ಧ ಗೋಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಕೊಲೆಗೀಡಾದ ವ್ಯಕ್ತಿಯ ಕುಟುಂಬದ ಮೇಲೆ ಎಫ್‌ಐಆರ್ ದಾಖಲಿಸುವುದು, ಕೊಲೆ ಮಾಡಿದವರನ್ನು ದೇಶಭಕ್ತರೆಂದು ಹಾರ-ತುರಾಯಿ ಹಾಕಿ ಮೆರವಣಿಗೆ ಮಾಡುವುದು ನಮ್ಮ ದೇಶ ತಲುಪಿದ ಸ್ಥಿತಿಗೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ಭಾರತ ಕ್ರಮೇಣ ಕುಸಿದು ಬೀಳುತ್ತಿದೆಯೆನೋ ಎಂಬ ಆತಂಕ ಉಂಟಾಗುತ್ತದೆ.

ಇತ್ತ ಕರ್ನಾಟಕಕ್ಕೆ ಬಂದರೆ ವಿಧಾನಮಂಡಲದ ಪ್ರತಿಪಕ್ಷ ನಾಯಕರು ಮಹಾ ಸಂಪನ್ನರೆಂಬಂತೆ ಸದನದಲ್ಲಿ ತೋರಿಸಿದ ಪರಾಕ್ರಮ ಅಹೋರಾತ್ರಿ ನಿರಶನ ನೋಡಿ ನಗು ಬರುತ್ತದೆ. ಕೇವಲ ಮೂರು ವರ್ಷದ ಹಿಂದೆ ಇವರು ಏನು ಮಾಡಿದರು ಎಂಬುದನ್ನು ಜನ ಮರೆತಿಲ್ಲ. ಇವರ ಒಬ್ಬೊಬ್ಬರ ಚರಿತ್ರೆ ಬಿಚ್ಚಿದರೆ ಮೂಗು ಮುಚ್ಚಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಮರ್ಯಾದಾ ಹತ್ಯೆಗಳ ಬಗ್ಗೆ ಇವರು ಮಾತಾಡಲಿಲ್ಲ. ದಲಿತರ ಮೇಲೆ ನಡೆದ ಕ್ರೌರ್ಯದ ಬಗ್ಗೆ ಬಾಯಿಬಿಡಲಿಲ್ಲ. ರೈತರು ಸಾಲುಸಾಲಾಗಿ ಆತ್ಮಹತ್ಯೆಗೆ ಮೊರೆಹೋದ ಬಗ್ಗೆ ಪ್ರಸ್ತಾಪಿಸಲಿಲ್ಲ. ಕ್ಯಾಪಿಟೇಶನ್, ಡೊನೇಷನ್ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆ ಮಾಡುತ್ತಿರುವಾಗ ಅದರ ಬಗ್ಗೆ ಇವರು ಸದನದಲ್ಲಿ ಪ್ರತಿಭಟಿಸಲಿಲ್ಲ. ರೈತರ ಆತ್ಮಹತ್ಯೆ, ಮರ್ಯಾದೆಗೇಡು ಹತ್ಯೆ, ದಲಿತರ ಮೇಲಿನ ದೌರ್ಜನ್ಯದಂಥ ಪ್ರಶ್ನೆಗಳನ್ನು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ನಲ್ಲೂ ಯಾರೂ ಪ್ರಸ್ತಾಪಿಸುವುದಿಲ್ಲ. ಎರಡೂ ಕಡೆ ರೈತರ ಕಬ್ಬಿನ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆ ಮಾಲಕರಿದ್ದಾರೆ. ಜಗದೀಶ್ ಶೆಟ್ಟರ್, ಶಾಮನೂರು ಶಿವಶಂಕರಪ್ಪ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿದ್ದರೂ ಇವರು ಸಂಬಂಧಿಕರು. ಇವರ ವರ್ಗ ಹಿತಾಸಕ್ತಿ ಒಂದೇ ಆಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ, ಕಲ್ಲಪ್ಪ ಹಂಡಿಬಾಗ್ ಸಾವು, ವಿಎಚ್‌ಪಿ ನಾಯಕರ ಕರಾಮತ್ತು ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಬೆಳಕು ಕಂಡಿವೆ. ಜನತೆಯನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಮಾತಾಡಲಾಗದವರು ಇಂಥ ಪ್ರಶ್ನೆಗಳನ್ನು ಎತ್ತಿಕೊಂಡು ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಿಸುತ್ತಿದ್ದಾರೆ.

ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಲ್ಲಿನ ಮೇಲ್ವರ್ಗ, ಮೇಲ್ಜಾತಿಗಳಿಗೆ ಸಮಾಜವಾದಿ ಹಿನ್ನೆಲೆಯಿಂದ ಬಂದ ಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಅಧಿಕಾರದಲ್ಲಿರುವುದು ಬೇಕಾಗಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಜನ ಸಮೂಹವನ್ನು ಆಕರ್ಷಿಸಬಲ್ಲ ನಾಯಕರೆಂದರೆ ಈಗ ಸಿದ್ದರಾಮಯ್ಯ ಒಬ್ಬರೆ. ಹೀಗಾಗಿ ಬಿಜೆಪಿಯವರು ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಒಟ್ಟಾರೆ ದೇಶದ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ. ಈ ದೇಶವನ್ನು ಫ್ಯಾಶಿಸ್ಟ್ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರಗಳು ತೀವ್ರವಾಗಿ ನಡೆದಿವೆ. ಮುಸ್ಲಿಮ್ ಮುಕ್ತ ಜಾತ್ಯತೀತ ವಿರೋಧಿ ಮನೋರೋಗ ಯುವಕರಲ್ಲಿ ಅದೂ ಹಿಂದೂ ಯುವಕರಲ್ಲಿ ಹೆಚ್ಚುತ್ತಿದೆ. ಈ ಅಪಾಯದಿಂದ ದೇಶವನ್ನು ಪಾರು ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News