×
Ad

ಶಾಶ್ವತ ಕೃಷಿ ವಲಯವೋ? ಅಥವಾ ಶಾಶ್ವತ ಬೃಹತ್ ಕೃಷಿ ಬಂಡವಾಳಶಾಹಿ ವಲಯವೋ?

ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ

Update: 2025-12-10 17:37 IST

ಮಾನ್ಯ ಮುಖ್ಯಮಂತ್ರಿಗಳೇ, ಇಂದು ತಮ್ಮ ಸರ್ಕಾರವು ದೇವನಹಳ್ಳಿ ಭೂ ಸ್ವಾಧೀನದ ವಿಷಯದ ಬಗ್ಗೆ ತಮ್ಮ ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಿಂದ "ದೇವನಹಳ್ಳಿ ಬಳಿಯ ಶಾಶ್ವತ ಕೃಷಿ ವಲಯದ ಬಗ್ಗೆ ಅಪಪ್ರಚಾರ ಮತ್ತು ತಪ್ಪು ಕಲ್ಪನೆ ಬೇಡವೆಂದೂ, ಜಮೀನು ಮಾರಾಟಕ್ಕೆ ಯಾವ ನಿರ್ಬಂಧವೂ ಇಲ್ಲವೆಂದು" ಹೇಳಿಕೆ ಕೊಡಿಸಿದ್ದೀರಿ. ಆದರೆ...

1. ಈಗಾಗಲೇ ಹಸಿರು ವಲಯದಲ್ಲಿರುವ ತಮ್ಮ ಜಮೀನನ್ನು 'ಶಾಶ್ವತ ಕೃಷಿ ವಲಯ' ಮಾಡಿರೆಂದು ದೇವನಹಳ್ಳಿ ರೈತರು ನಿಮ್ಮನ್ನು ಕೇಳಿದ್ದರೆ?

2. ರೈತರು ವರ್ಷಗಟ್ಟಲೆ ಹೋರಾಟ ಮಾಡಿದರೂ ರೈತರ ಯಾವ ಸಣ್ಣ ಬೇಡಿಕೆಯನ್ನು ಕಿಂಚಿತ್ತೂ ಈಡೇರಿಸದ ತಮ್ಮ ಸರ್ಕಾರ ರೈತರು ಬೇಡಿಕೆಯ ಮುಂದಿಡದೆ ನೀವಾಗಿಯೇ ದೇವನಹಳ್ಳಿ ಜಮೀನನ್ನು ʼಶಾಶ್ವತ ಕೃಷಿ ವಲಯ ಮಾಡಲುʼ ಹಠ ತೊಟ್ಟಿರುವುದೇಕೆ?

3. ದೇವನಹಳ್ಳಿ ಭೂಸ್ವಾಧೀನ ಕೈಬಿಡುವ ಬಗ್ಗೆ ಡಿ. 6 ರ ಸರ್ಕಾರೀ ಆದೇಶದಲ್ಲಿ ಇಡೀ ದೇವನಹಳ್ಳಿ ವಲಯವನ್ನು Aero Space ಮತ್ತು Defense ವಲಯದ ಬೃಹತ್ ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸಲು ಯೋಜಿಸಿರುವುದಾಗಿಯೂ, ಅದರ ವಿಸ್ತರಣೆಯ ಭಾಗವಾಗಿಯೇ ಈ 1777 ಎಕರೆಯನ್ನು ವಶಪಡಿಸಿಕೊಳ್ಳುವುದಾಗಿಯೂ ಉದ್ದೇಶಿಸಲಾಗಿತ್ತು ಎಂದು ಸ್ಪಷ್ಟಪಡಿಸಿದೀರಿ. ಅಂದರೆ ಈ ಭಾಗವನ್ನು ಹೊರತುಪಡಿಸಿ ಉಳಿದ ಯಾವ ನೆರೆಹೊರೆ ಕೃಷಿ ಭೂಮಿಯನ್ನೂ ʼವಿಶೇಷ ಮತ್ತು ಶಾಶ್ವತ ಕೃಷಿ ವಲಯವಾಗಿʼ ಅಭಿವೃದ್ಧಿ ಪಡಿಸುವ ಯೋಜನೆಯೇ ಸರ್ಕಾರಕ್ಕೆ ಇಲ್ಲ. ಹೀಗಿರುವಾಗ ಸರ್ಕಾರ ಈಗ ಹೇಳುತ್ತಿರುವ ಸಕಲ ಕೃಷಿ ವಲಯ ಯೋಜನೆಗಳೆಲ್ಲಾ ಕೇವಲ ಈ 1777 ಎಕರೆಯಲ್ಲಿ ಮಾತ್ರ ಸಾಧ್ಯವೇ?

4. ಸರ್ಕಾರಕ್ಕೆ ಇಡೀ 1777 ಎಕರೆಯನ್ನು ಶಾಶ್ವತ ಕೃಷಿ ವಲಯವನ್ನಾಗಿ ಬೆಳೆಸುವ ಉದ್ದೇಶವಿದ್ದರೆ ಸ್ವಪ್ರೇರಿತವಾಗಿ KIADB ಗೆ ಜಮೀನು ಕೊಡುವರನ್ನು ಉತ್ತೇಜಿಸಲು 3 ತಿಂಗಳು ಗಡುವನ್ನು ವಿಧಿಸಿರುವುದೇಕೆ?

5. ಮತ್ತೊಂದು ವಿಪರ್ಯಾಸ ಮತ್ತು ಹಾಸ್ಯಾಸ್ಪದ ಸಂಗತಿ ಎಂದರೆ, ತಮ್ಮ ಸರ್ಕಾರ ಈ ಹಳ್ಳಿಗಳನ್ನು ಮೊದಲು ʼಶಾಶ್ವತ ಕೃಷಿ ವಲಯʼ ಎಂದು ಘೋಷಿಸುತ್ತಿದೆ. ಆ ನಂತರದಲ್ಲಿ ಅದರ ಸ್ವರೂಪ ಹಾಗೂ ರೂಪು ರೇಷೆಗಳನ್ನು ತೀರ್ಮಾನಿಸಲು ಪರಿಣಿತರ ಸಮಿತಿಯನ್ನು ರಚಿಸುತ್ತಿದೆ.

6. ಶಾಶ್ವತ ಕೃಷಿ ವಲಯದ ಉದ್ದೇಶ, ಅಗತ್ಯ ಹಾಗೂ ಸ್ವರೂಪದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯೇ ಇಲ್ಲದಿದ್ದರೂ ಶಾಶ್ವತ ಕೃಷಿ ವಲಯವನ್ನು ಕಡ್ಡಾಯ ಮಾಡುತ್ತಿರುವುದು ಯಾವ ಸೀಮೆ ರೈತಪರತೆ ?

7.ಭೂ ಸ್ವಾಧೀನ ವಿರೋಧಿ ಹೋರಾಟದ ತಾತ್ವಿಕ ನೆಲೆಯೇ ʼರೈತರ ಭೂಮಿಯ ಮೇಲೆ ರೈತರದೇ ಪರಮಾಧಿಕಾರʼ ಎಂಬ ಪ್ರತಾತಾಂತ್ರಿಕ ಭೂಮಿಕೆ. ತಮ್ಮ ಸರ್ಕಾರ KIADB ಮೂಲಕವೂ ರೈತರ ಸಮ್ಮತಿ ಇಲ್ಲದೆ ಭೂಮಿ ವಶಪಡಿಸಿಕೊಳ್ಳಲು ಹೊರಟಿದ್ದೀರಿ. ಈಗ ಭೂ ಸ್ವಾಧೀನ ಕೈಬಿಟ್ಟ ಜಮೀನುಗಳನ್ನು "ಶಾಶ್ವತ ಕೃಷಿ ವಲಯ"ವನ್ನೂ ರೈತರ ಸಮ್ಮತಿಯಿಲ್ಲದೆ ಘೋಷಿಸಿದ್ದೀರಿ.

"ಶಾಶ್ವತಾ ಮತ್ತು ವಿಶೇಷ ಕೃಷಿ ವಲಯ"ದ ರೂಪುರೇಷೆಗಳನ್ನು ರೈತರ ಮುಂದಿಟ್ಟು ಅವರ ಸಮ್ಮತಿಯನ್ನು ಪಡೆದುಕೊಳ್ಳದೇ ಸರ್ಕಾರ ಯಾವುದು ಅಭಿವೃದ್ಧಿ ಎಂದು ತೀರ್ಮಾನಿಸುತ್ತದೋ ಅದಕ್ಕೆ ರೈತರೂ ಬದ್ಧರಿರಬೇಕೆಂಬ ಸರ್ವಾಧಿಕಾರ ಮುಂದುವರೆಸುತ್ತಿದೀರಿ. ಅದಕ್ಕೆ ಕೃಷಿ ಹಸಿರು ಎಂಬ ಮುಖವಾಡ ತೊಡಿಸಿದ್ದೀರಿ. ಇದು ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ರೈತ ವಿರೋಧಿ.

8. ಇಂದು ತಮ್ಮ ಕೈಗಾರಿಕಾ ಕಾರ್ಯದರ್ಶಿ ನೀಡಿರುವ ಹೇಳಿಕೆಯ ಪ್ರಕಾರ ಈ ʼಶಾಶ್ವತ ಕೃಷಿ ವಲಯದಲ್ಲಿʼ :

ಅ ) "ಕೃಷಿ ಕ್ಷೇತ್ರಕ್ಕೂ ಬಂಡವಾಳ ಹರಿದು ಬರುವುದು" ಸರ್ಕಾರದ ಉದ್ದೇಶ ಎಂದು ಸ್ಪಷ್ಟ ಪಡಿಸಿದ್ದೀರಿ. ಹಾಗಿದ್ದಲ್ಲಿ ಈ ಹಸಿರು ಬಟ್ಟೆ ಹೊದ್ದ ಬಂಡವಾಳಿಗರ ಕೃಷಿ ಹೂಡಿಕೆಗೆ ಜಮೀನು ಬೇಕಲ್ಲವೇ? ಆಗ ತಮಗಿಷ್ಟವಿಲ್ಲದಿದ್ದರೂ "ಶಾಶ್ವತ ಕೃಷಿ ವಲಯ"ಕ್ಕೆ ಒಳಪಟ್ಟ ರೈತರು ಈ ಹಸಿರು ಬಂಡವಾಳಿಗರಿಗೆ ತಮ್ಮ ಜಮೀನನ್ನು ಕಡ್ಡಾಯವಾಗಿ ಮಾರಿಕೊಳ್ಳಬೇಕೇ? ಹಾಗಿದ್ದಲ್ಲಿ ನೀವು ರಕ್ಷಿಸುತ್ತಿರುವುದು ಯಾರ ಹಿತಾಸಕ್ತಿಯನ್ನು?

ಆ) ಹಾಗೆಯೇ ಶಾಶ್ವತ ಕೃಷಿ ವಲಯದಲ್ಲಿ "ಶೀತಲ ಗೃಹಗಳು, ನೇರ ಸೌಲಭ್ಯ, e-trading , ಮಾರುಕಟ್ಟೆ , ಕೃಷಿ ವಾಣಿಜ್ಯ ಉದ್ಯಮಗಳಿಗೆ ಮತ್ತು ಕೃಷಿ ನವೋದ್ಯಮಗಳಿಗೆ ತ್ವರಿತ ಅನುಮೋದನೆ , ಕೃಷಿ ಉತ್ಪನ್ನಗಳ ರಫ್ತು ವಹಿವಾಟು ಮತ್ತು ಉಗ್ರಾಣ ಅಭಿವೃದ್ಧಿ"ಯನ್ನು ಮಾಡಲಾಗುವುದು ಎಂದು ಹೇಳಿದ್ದೀರಿ. ಮೋದಿ ಸರ್ಕಾರ ಜಾರಿಗೆ ತರಲು ಬಯಸಿದ್ದ ಹಾಗೂ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ರಾಜ್ಯದಲ್ಲಿ ಇನ್ನೂ ಹಿಂದಕ್ಕೆ ತೆಗೆದುಕೊಳ್ಳದ ಖಾಸಗಿ ಕೃಷಿ ಮಾರುಕಟ್ಟೆ ಅನುಮತಿ ಕಂಟ್ರಾಕ್ಟ್ ಫಾರ್ಮಿಂಗ್ ಮತ್ತು ಖಾಸಗಿ ಉಗ್ರಾಣ ನೀತಿಯ ಮೂರು ರೈತ ವಿರೋಧಿ ಮಸೂದೆಗಳ ಪ್ರಸ್ತಾಪಗಳೂ ಇದೆ ಆಗಿತ್ತಲ್ಲವೇ?

ಇದರಿಂದ ಆ ಪ್ರದೇಶದಲ್ಲಿ ಕೃಷಿಯಲ್ಲಿ ಹೂಡುವ ಕೃಷಿ ಬಂಡವಾಳಶಾಹಿಗಳು ಬೆಳೆಯಬಹುದೇ ವಿನಾ ಅಲ್ಲಿ ಉಳುಮೆ ಮಾಡುತ್ತಿರುವ ಸಣ್ಣ ಪುಟ್ಟ ರೈತರಿಗೆ ನಿಮ್ಮ ಈ ನೀತಿಯಿಂದ ಏನು ಉಪಯೋಗ?

9. ಅದೇ ಹೇಳಿಕೆಯಲ್ಲಿ ತಮ್ಮ ಕಾರ್ಯದರ್ಶಿಗಳು "ಭಾರತದ ಹಲವಾರು ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಈ ರೀತಿಯ ಕೃಷಿ ವಲಯಗಳಿವೆ ಎಂದೂ, ಅಂತಹ ಕಡೆ ರೈತರಿಗೆ ಏನೇನು ಸೌಲಭ್ಯ ಒದಗಿಸಲಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ಒಂದು ಸಮಿತಿ ರಚಿಸಿ, ಆ ಅನುಕೂಲಗಳನ್ನು ಇಲ್ಲಿಯೂ ಒದಗಿಸಲಾಗುವುದು" ಎಂದು ಹೇಳಿದ್ದಾರೆ. ಅಂದರೆ ಈವರೆಗೂ ಸರ್ಕಾರಕ್ಕೆ ಏನೇನು ಸೌಲಭ್ಯ ಒದಗಿಸಬಹುದು ಮತ್ತು ಅದರಿಂದ ರೈತರಿಗೆ ಏನು ಅನುಕೂಲ ಎಂಬುದೇ ತಿಳಿದಿಲ್ಲ! ಹಾಗಿದ್ದರೂ ಅಧ್ಯಯನಕ್ಕೆ ಮುಂಚೆಯೇ ಅದರಿಂದ ಅನುಕೂಲ ಎಂಬ ತೀರ್ಮಾನ ಮಾಡಿ ಅಧ್ಯಯನ ಮಾಡಲು ಹೊರಡುವುದು ಯಾವ ಸೀಮೆ ಅಧ್ಯಯನ ಪದ್ಧತಿ ? ಮತ್ತು ಅದು ತಮಗೆ ಅನುಕೂಲವೂ ಇಲ್ಲವೋ ಎಂದು ತೀರ್ಮಾನ ಮಾಡಬೇಕಿರುವುದು ಸರ್ಕಾರವೋ ಅಥವಾ ಬಾಧಿತ ರೈತರೋ?

10. ಎಲ್ಲಕ್ಕಿಂತ ಮುಖ್ಯವಾಗಿ ಇತರ ಎಲ್ಲಾ De-Notification ಗಳಂತೆ ಈ ಭೂಮಿಯನ್ನು ಸರಳ De-Notification ಮಾಡದೆ ರೈತರ ಒಪ್ಪಿಗೆ ಇಲ್ಲದೆ, ರೈತರು ಕೇಳದ "ಶಾಶ್ವತ ಕೃಷಿ ವಲಯ" ಘೋಷಣೆ ಇತ್ಯಾದಿಗಳು ಅಪ್ಪಟ ರೈತ ವಿರೋಧಿ ಸರ್ವಾಧಿಕಾರಿ ನೀತಿಯೇ ಆಗಿದೆ.

ಮೂರು ತಿಂಗಳ ಗಡುವು, ಶಾಶ್ವತ ಕೃಷಿ ವಲಯದ ಪರಿಕಲ್ಪನೆಯೇ ಇಲ್ಲದಿದ್ದರೂ ಅದರ ರೂಪುರೇಷೆಯೇ ಗೊತ್ತಿಲ್ಲದಿದ್ದರೂ ರೈತರ ಸಮ್ಮತಿ ಇಲ್ಲದೆ ಅವರ ಮೇಲೆ ಹೇರುತ್ತಿರುವುದು ಮತ್ತು ಈಗ ನಿಮ್ಮ ಕೈಗಾರಿಕಾ ಕಾರ್ಯದರ್ಶಿ ಅದು ಕೃಷಿ ವಲಯವಲ್ಲ, ಕೃಷಿ ಬಂಡವಾಳಶಾಹಿ ವಲಯ ಎಂದು ಸ್ಪಷ್ಟಪಡಿಸಿರುವುದು, ಇವೆಲ್ಲವೂ ರೈತದ್ರೋಹದ ಮುಂದುವರಿಕೆಯೇ ಆಗಿದೆ.

ಆದ್ದರಿಂದ ಸರ್ಕಾರ ಆ ಯಾವುದೇ ಉಸಾಬರಿಗೆ ಹೋಗದೆ ಈ ಕೂಡಲೇ ದೇವನಹಳ್ಳಿಯ ಹೋರಾಟ ನಿರತ ರೈತರ 1777 ಎಕರೆ ಜಮೀನನ್ನು ಸರಳ De-Notification ಮಾಡಬೇಕು.

-ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News