ಎಂಎಚ್370 ವಿಮಾನ ಶೋಧ ಅಮಾನತು

Update: 2016-07-22 18:47 GMT

ಕೌಲಾಲಂಪುರ, ಜು. 22: ಈಗ ಶೋಧ ನಡೆಸಲಾಗುತ್ತಿರುವ ಸಾಗರ ಪ್ರದೇಶದಲ್ಲಿ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಅವಶೇಷಗಳು ಪತ್ತೆಯಾಗದಿದ್ದಲ್ಲಿ ಶೋಧ ಕಾರ್ಯಾಚರಣೆಯನ್ನು ಅಮಾನತಿನಲ್ಲಿಡಲಾಗುವುದು ಎಂದು ಮಲೇಶ್ಯ, ಚೀನಾ ಮತ್ತು ಆಸ್ಟ್ರೇಲಿಯಗಳು ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿವೆ.

239 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊತ್ತೊಯ್ಯುತ್ತಿದ್ದ ಬೋಯಿಂಗ್ 777 ವಿಮಾನ 2014 ಮಾರ್ಚ್ 8ರ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿತ್ತು.

 ದಕ್ಷಿಣ ಹಿಂದೂ ಮಹಾ ಸಾಗರದ 1.2 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಗರ ತಳ ಶೋಧನೆಗಾಗಿ ಈವರೆಗೆ 180 ಮಿಲಿಯ ಆಸ್ಟ್ರೇಲಿಯನ್ ಡಾಲರ್ (ಸುಮಾರು 917 ಕೋಟಿ ರೂಪಾಯಿ) ಖರ್ಚು ಮಾಡಲಾಗಿದೆ.

‘‘ನೂತನ ವಿಶ್ವಾಸಾರ್ಹ ಪುರಾವೆಗಳ ಅಭಾವದ ಹಿನ್ನೆಲೆಯಲ್ಲಿ, 1.2 ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ಶೋಧ ಪೂರ್ಣಗೊಂಡ ಬಳಿಕ ಶೋಧ ಕಾರ್ಯಾಚರಣೆಯನ್ನು ಅಮಾನತಿನಲ್ಲಿಡಲು ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನಾಗಳು ಒಮ್ಮತದಿಂದ ನಿರ್ಧರಿಸಿವೆ’’ ಎಂದು ಮಲೇಶ್ಯದ ಸಾರಿಗೆ ಸಚಿವ ಲಿಯೊವ್ ಟಿಯಾಂಗ್ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮೂರು ದೇಶಗಳ ಸಾರಿಗೆ ಸಚಿವರುಗಳು ಹೊರಡಿಸಿದ ಜಂಟಿ ಹೇಳಿಕೆಯನ್ನು ಅವರು ಓದಿ ಹೇಳಿದರು.

 ‘‘ಶೋಧಕ್ಕಾಗಿ ಗುರುತಿಸಲಾದ ಪ್ರದೇಶದ ಪೈಕಿ ಈಗ 10,000 ಚದರ ಕಿಲೋಮೀಟರ್‌ಗಿಂತಲೂ ಕಡಿಮೆ ಸ್ಥಳ ಉಳಿದಿದೆ. ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಯಾವುದೇ ಫಲಿತಾಂಶ ಸಿಗದಿದ್ದರೂ, ವಿಮಾನದ ಶೋಧ ಕಾರ್ಯವನ್ನು ಕೈಬಿಡಲಾಗುವುದಿಲ್ಲ ಎಂದು ಲಿಯೋವ್ ತಿಳಿಸಿದರು. ‘‘ವಿಮಾನ ಅವಶೇಷಗಳ ನಿರ್ದಿಷ್ಟ ಸ್ಥಳವನ್ನು ಸೂಚಿಸುವ ಹೊಸ ವಿಶ್ವಾಸಾರ್ಹ ಮಾಹಿತಿ ಲಭಿಸಿದರೆ, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’’ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಿಗದಿತ ಪಥವನ್ನು ಬಿಟ್ಟು ಸಾವಿರಾರು ಮೈಲಿ ಉದ್ದೇಶಪೂರ್ವಕವಾಗಿ ವಿಮಾನವನ್ನು ಹಾರಿಸಿದ ಬಳಿಕ, ಆಸ್ಟ್ರೇಲಿಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ವಿಮಾನ ಪತನಗೊಂಡಿದೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News