ಜರ್ಮನಿ: ಸ್ವಯಂ ಸ್ಫೋಟಿಸಿಕೊಂಡ ಸಿರಿಯನ್ ನಿರಾಶ್ರಿತ

Update: 2016-07-25 18:30 GMT

ಬರ್ಲಿನ್,ಜು.25: ದಕ್ಷಿಣ ಜರ್ಮನಿಯ ಬವೇರಿಯಾ ರಾಜ್ಯದ ಬಾರ್ ಒಂದರ ಬಳಿ ಸಿರಿಯನ್ ನಿರಾಶ್ರಿತನೊಬ್ಬ ರವಿವಾರ ತನ್ನನ್ನೇ ತಾನು ಸ್ಫೋಟಿಸಿ ಕೊಂಡು ಸಾವನ್ನಪ್ಪಿದ್ದಾನೆ. ಕಳೆದ ಒಂದು ವಾರದಲ್ಲಿ ಬವೇರಿಯಾ ರಾಜ್ಯದಲ್ಲಿ ನಡೆದ ಮೂರನೆ ಹಿಂಸಾತ್ಮಕ ಘಟನೆ ಇದಾಗಿದೆ.

ಆ್ಯನ್ಸ್‌ಬ್ಯಾಚ್ ನಗರದ ಬಾರ್ ಒಂದರ ಆವರಣದಲ್ಲಿ ರವಿವಾರ ರಾತ್ರಿ ಸಂಗೀತಗೋಷ್ಠಿ ನಡೆಯುತ್ತಿದ್ದ ಸ್ಥಳದ ಆವರಣದಲ್ಲಿ ದಾಳಿಕೋರನು ತನ್ನನ್ನು ಸ್ಫೋಟಿಸಿಕೊಂಡನೆಂದು ಪೊಲೀಸರು ಹೇಳಿದ್ದಾರೆ. ಆತನನ್ನು 27 ವರ್ಷ ವಯಸ್ಸಿನ ಸಿರಿಯ ಪ್ರಜೆಯೆಂದು ಗುರುತಿಸಲಾಗಿದೆ. ಜರ್ಮನಿಯಲ್ಲಿ ಆಶ್ರಯ ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವರ್ಷ ತಿರಸ್ಕರಿಸಲಾಗಿತ್ತು ಎಂದು ಬವೇರಿಯಾ ಪ್ರಾಂತದ ಗೃಹ ಸಚಿವ ಜೋಕಿಮ್ ಹರ್ಮಾನ್ ತಿಳಿಸಿದ್ದಾರೆ.

ಸ್ಫೋಟದ ಬೆನ್ನಲ್ಲೇ ಸಂಗೀತಗೋಷ್ಠಿ ನಡೆಯುವ ಸ್ಥಳದಲ್ಲಿದ್ದ ಸುಮಾರು 2,500 ಮಂದಿಯನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಪೊಲೀಸರು ಆ್ಯನ್ಸ್‌ಬ್ಯಾಚ್ ನಗರದ ಕೇಂದ್ರ ಭಾಗವನ್ನು ಸುತ್ತುವರಿದರು. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಬಾಂಬ್ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ದಾಳಿಕೋರನು ಬಾರ್ ಸಮೀಪವೇ ನಡೆಯುತ್ತಿದ್ದ ಪಾಪ್ ಸಂಗೀತಗೋಷ್ಠಿಯ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಿಂದಾಗಿ 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News