ದಲಿತರ ಮೇಲಿನ ದಾಳಿಗಳನ್ನು ನಿಲ್ಲಿಸಿ: ಲೋಕಸಭಾ ಸದಸ್ಯರ ಆಗ್ರಹ

Update: 2016-07-25 18:30 GMT

ಹೊಸದಿಲ್ಲಿ,ಜು.25: ದೇಶದ ವಿವಿಧೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸೋಮವಾರ ಪಕ್ಷಭೇದ ಮರೆತು ಲೋಕಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ ಸದಸ್ಯರು,ಅವುಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.

ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯಲ್ಲಿ ಇಬ್ಬರು ದಲಿತ ಯುವಕರನ್ನು ಥಳಿಸಿ ಮೂತ್ರವನ್ನು ಕುಡಿಸಿದ ಘಟನೆಯ ಬಗ್ಗೆ ಸದನದ ಗಮನವನ್ನು ಸೆಳೆದ ಚಿರಾಗ್ ಪಾಸ್ವಾನ್(ಎಲ್‌ಜೆಪಿ) ಅವರು, ದರ್ಭಾಂಗಾ ಮತ್ತು ಕಿಷನ್‌ಗಂಜ್‌ನಲ್ಲಿ ದಲಿತರ ವಿರುದ್ಧ ದೌರ್ಜನ್ಯದ ಸರಣಿ ಘಟನೆಗಳು ನಡೆದಿದ್ದರೂ ರಾಜ್ಯ ಸರಕಾರವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಅವರು ಆಗ್ರಹಿಸಿದರು.

ಉತ್ತರ ಪ್ರದೇಶ ಸರಕಾರವು ವಿವಿಧ ಜಾತಿಗಳ ಜನರ ನಡುವೆ ಬಿರುಕನ್ನು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಆರ್‌ಜೆಡಿಯ ಪಪ್ಪು ಯಾದವ್ ಆರೋಪಿಸಿದರು.

ದಲಿತರ ಮೇಲಿನ ದೌರ್ಜನ್ಯ ಕುರಿತಂತೆ ಬಹಳಷ್ಟು ರಾಜಕೀಯ ನಡೆಯುತ್ತಿದೆ ಎಂದು ಹೇಳಿದ ಮೀನಾಕ್ಷಿ ಲೇಖಿ(ಬಿಜೆಪಿ) ಅವರು, ಜಾತಿ ನಿಂದನೆಯನ್ನು ಮಾಡಬಾರದು ಎಂದರು. ದಕ್ಷಿಣ ಭಾರತದಲ್ಲಿ ಇನ್ನೂ ಜಾತಿ ನಿಂದನೆಯ ಶಬ್ದಗಳನ್ನು ಬಳಸಲಾಗುತ್ತಿದೆ ಎಂದ ಅವರು, ಇದನ್ನು ನಿಲ್ಲಿಸಬೇಕು ಮತ್ತು ದಲಿತರ ಮೇಲಿನ ದಾಳಿಗಳನ್ನು ರಾಜಕೀಯಗೊಳಿಸಬಾರದು ಎಂದರು.

ಕೇರಳದಲ್ಲಿ ಸಿಪಿಎಂ ಕಾರ್ಯಕರ್ತನ ದೂರಿನ ಮೇರೆಗೆ ದಲಿತ ನಾಯಕರೋರ್ವರ ಪುತ್ರಿಯರಿಬ್ಬರ ಬಂಧನವನ್ನು ಪ್ರಸ್ತಾಪಿಸಿದ ಎಂ.ರಾಮಚಂದ್ರನ್(ಕಾಂಗ್ರೆಸ್) ಅವರು, ಎಡಪಕ್ಷದ ಕಾರ್ಯಕರ್ತರ ಸೂಚನೆಯಂತೆ ಪೊಲೀಸರು ಬಂಧಿತರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು. ಅವರ ಹೇಳಿಕೆಗೆ ಎಡರಂಗದ ಸದಸ್ಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು.

ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯಿಂದ ಮಣಿಪುರಿ ಮಹಿಳೆಯೋರ್ವಳಿಗೆ ಜನಾಂಗೀಯ ಕಿರುಕುಳ ಘಟನೆಯನ್ನು ಪ್ರಸ್ತಾಪಿಸಿದ ಥಾಕ್ಚಾಮ್ ಮೀನ್ಯ(ಕಾಂಗ್ರೆಸ್)ಅವರು, ಸ್ಯಾತಂತ್ರ ದೊರೆತು 69 ವರ್ಷಗಳಾದರೂ ಈಶಾನ್ಯ ಭಾರತದ ಜನರು ಇಂತಹ ಕಿರುಕುಳಕ್ಕೊಳಗಾಗುತ್ತಲೇ ಇದ್ದಾರೆ. ಇದು ರಾಷ್ಟ್ರ ನಿರ್ಮಾಣದ ವೈಫಲ್ಯವನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News