ಭಾರತದಲ್ಲಿ ಪಾದಚಾರಿಗಳ ಸಾವಿನ ಪ್ರಮಾಣ ಅಧಿಕೃತ ಅಂಕಿ-ಅಂಶದ ಎರಡರಷ್ಟಿರಬಹುದು!

Update: 2016-07-29 14:38 GMT

ಹೊಸದಿಲ್ಲಿ, ಜು.29: ಭಾರತದ ರಸ್ತೆಗಳಲ್ಲಿ ಅಧಿಕೃತ ಅಂಕೆ-ಸಂಖ್ಯೆ ತಿಳಿಸುವುದಕ್ಕಿಂತ ದುಪ್ಪಟ್ಟು ಸಂಖ್ಯೆಯ ಪಾದಚಾರಿಗಳು ಪ್ರತಿ ದಿನ ಸಾಯುತ್ತಿದ್ದಾರೆಂದು ಹೊಸ ಅಧ್ಯಯನವೊಂದು ತಿಳಿಸಿದೆ.
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಕುರಿತು ಪೊಲೀಸರು ನೀಡುವ ವಾಸ್ತವಿಕ ಸಂಖ್ಯೆ ಅಧಿಕೃತ ಅಂಕಿ-ಅಂಶಗಳಿಂದ ಭಾರೀ ಬಿನ್ನವಿದೆಯೆಂದು ‘ಇಂಜುರಿ ಪ್ರಿವೆನ್ಶನ್’ ಜರ್ನಲ್‌ನ ಆನ್‌ಲೈನ್ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವಿಕೆಯ ಕುರಿತಾದ 2001ರಿಂದ 2014ರ ವರೆಗಿನ ವರದಿಯಲ್ಲಿ, ಮೃತರಾದವರು ಶೇ.10ಕ್ಕಿಂತ ಕಡಿಮೆಯೆಂದು ಭಾರತದ ಅಧಿಕೃತ ಅಂಕಿ-ಅಂಶ ಹೇಳಿದೆ. ಆದರೆ, ಕಾಲ್ನಡಿಗೆಯೇ ಅತಿ ಸಾಮಾನ್ಯ ಸಾರಿಗೆ ವಿಧಾನವಾಗಿರುವ ದೇಶವೊಂದರಲ್ಲಿ ಈ ಅಂಕಿ-ಅಂಶ ಅಸಹಜವಾಗಿ ಅತಿ ಕಡಿಮೆಯಾಗಿದೆಯೆಂದು ಸಂಶೋಧಕರು ತಿಳಿಸಿದ್ದಾರೆ.
ಸರಿಯಾದ ಸಂಖ್ಯೆ ಶೇ.20ಕ್ಕಿಂತ ಹೆಚ್ಚಿರಬಹುದು. ಅಂದರೆ, ರಸ್ತೆ ಅಪಘಾತಕ್ಕೆ ಗುರಿಯಾಗುವವರಲ್ಲಿ 5ನೆ ಒಂದರಷ್ಟು ಮಂದಿ ಪಾದಚಾರಿಗಳಾಗಿರುತ್ತಾರೆಂದು ಸಂಶೋಧನೆ ಹೇಳಿದೆ.
ಅದೇ ರೀತಿ, ಮೋಟರ್ ಸೈಕಲ್ ಅಪಘಾತಗಳಲ್ಲಿ ಬಲಿಯಾದವರ ಸಂಖ್ಯೆಯೂ ಅಧಿಕೃತ ಅಂಕಿ-ಅಂಶದಲ್ಲಿ ಕಡಿಮೆ ಕಾಣಿಸಲಾಗಿದೆ. ಭಾರತದಲ್ಲಿ ರಸ್ತೆ ಅಪಘಾತಗಳ ಸಾವುಗಳಲ್ಲಿ ಪಾದಚಾರಿಗಳು ಹಾಗೂ ಮೋಟಾರ್ ಸೈಕಲ್ ಸವಾರರದೇ ಬಹುಸಂಖ್ಯಾಕವಾಗಿವೆ ಎಂದು ತಮ್ಮ ಅಧ್ಯಯನ ಅಂದಾಜಿಸಿದೆಯೆಂದು ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಜಾನ್ಸನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಶಾಲೆಯ ಸಹಾಯಕ ಪ್ರೊಫೆಸರ್ ಹಾಗೂ ಖ್ಯಾತ ಲೇಖಕ ಕವಿ ಭಲ್ಲಾ ತಿಳಿಸಿದ್ದಾರೆ.
ಭಾರತದಲ್ಲಿ ರಸ್ತೆ ಅಪಘಾತಗಳ ತನಿಖೆ ಸಂಚಾರ ಪೊಲೀಸರ ಹೊಣೆಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ, ದೇಶಾದ್ಯಂತದ ಪೊಲೀಸ್ ವರದಿಗಳನ್ನು ಸಂಗ್ರಹಿಸಿ, ಅವುಗಳ ಆಧಾರದಲ್ಲಿ ರಸ್ತೆ ಅಪಘಾತ ಗಾಯಾಳುಗಳ ಅಂಕಿ-ಅಂಶಗಳನ್ನು ಸಿದ್ಧಪಡಿಸುತ್ತದೆ.
ಈ ಅಂಕಿ-ಅಂಶಗಳ ನಿಖರತೆಯನ್ನು ಪರೀಕ್ಷಿಸಲು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ 2013 ಹಾಗೂ 2014ರಲ್ಲಿ ಸಂಭವಿಸಿದ ರಸ್ತೆ ಅಪಘಾತ ಸಾವುಗಳ ಕುರಿತ ಪೊಲೀಸ್ ಎಫ್‌ಐಆರ್‌ಗಳನ್ನು ಸಂಶೋಧಕರು ಪರಿಶೀಲಿಸಿ, ಎನ್‌ಸಿಆರ್‌ಬಿಯ ಅಧಿಕೃತ ಅಂಕಿ-ಅಂಶಗಳೊಂದಿಗೆ ತಾಳೆ ನೋಡಿದರು. ಅವುಗಳಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿತ್ತು.
ಉದಾಹರಣೆಗೆ: ಬೆಳಗಾವಿ ಜಿಲ್ಲೆಯಲ್ಲಿ ಪಾದಚಾರಿಗಳ ಸಾವಿನ ಪ್ರಮಾಣ ಕೇವಲ ಶೇ.9 ಎಂದು ಅಧಿಕೃತ ಅಂಕಿ-ಅಂಶ ಹೇಳಿದ್ದರೆ, ಪೊಲೀಸ್ ಎಫ್‌ಐಆರ್‌ಗಳ ಪ್ರಕಾರ ವಾಸ್ತವ ಪ್ರಮಾಣ ಶೇ.21ರಷ್ಟಿತ್ತು. ಮೋಟಾರ್ ಸೈಕಲ್ ಸವಾರರ ಸಾವಿನ ಸಂಖ್ಯೆಗೂ ಅಧಿಕೃತ ದಾಖಲೆಯಲ್ಲಿ ಶೇ.37 ಇದ್ದರೆ, ಎಫ್‌ಐಆರ್‌ಗಳ ಪ್ರಕಾರ ಶೇ.49 ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News