1987 ರ ಹಾಶಿಂಪುರ ಮುಸ್ಲಿಮರ ಹತ್ಯಾಕಾಂಡದ ಬೆಚ್ಚಿಬೀಳಿಸುವ ಕ್ಷಣಗಳನ್ನು ಬಿಚ್ಚಿಟ್ಟ ಮಾಜಿ ಎಸ್ಪಿಯ ಕೃತಿ

Update: 2016-08-01 06:45 GMT

ಹೊಸದಿಲ್ಲಿ,ಆಗಸ್ಟ್ 1: 42 ಮಂದಿ ಮುಸ್ಲಿಮರ ಹತ್ಯಾಕಾಂಡ ನಡೆದು 30ವರ್ಷಗಳ ನಂತರ ಆ ಭಯಭೀತ ಘಟನೆಗಳನ್ನು ಸ್ಮರಿಸಿ ಅಂದಿನ ಗಾಝಿಯಾಬಾದ್ ಜಿಲ್ಲಾ ಪೊಲೀಸಧಿಕಾರಿ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ. 1987 ಮೇ 22ರಂದು ರಾತ್ರಿಯಲ್ಲಿ ಪಿಎಸಿ ಜವಾನರು 42 ಮಂದಿ ಮುಸ್ಲಿಮರನ್ನು ಗುಂಡಿಟ್ಟು ಕೊಂದು ಹಾಕಿದ್ದರು. ಅಂದಿನ ಭಯಾನಕ ದೃಶ್ಯಗಳು ಈಗಲೂ ಬೇಟೆಯಾಡುತ್ತಿದೆ ಎಂದು ವಿಭೂತಿ ನಾರಾಯಣ್ ರಾಯ್ ಪುಸ್ತಕದಲ್ಲಿ ಹೇಳುತ್ತಿದ್ದಾರೆ. ‘ಹಾಶಿಂಪುರ್ 22 ಮೇ ದಿ ಪೊರ್ಗೊಟನ್ ಸ್ಟೋರಿ ಆಫ್ ಇಂಡಿಯಾಸ್ ಬಿಗ್ಗೆಸ್ಟ್ ಕಸ್ಟೋಡಿಯಲ್ ಕಿಲ್ಲಿಂಗ್’ ಎಂಬ ಹೆಸರಿನಲ್ಲಿ ಪುಸ್ತಕ ಪ್ರಕಟವಾಗಿದೆ ಎಂದು ವರದಿಯಾಗಿದೆ.

  ಅಂದಿನ ಘಟನೆಯನ್ನು ವಿಭೂತಿ ನಾರಾಯಣ್ ರಾಯ್ ಹೀಗೆ ಸ್ಮರಿಸಿಕೊಳ್ಳುತ್ತಾರೆ" ಆಗ ಸಮಯ ರಾತ್ರಿ 10:30. ಹಾಶಿಂಪುರ್‌ನಿಂದ ನಾನು ಮರಳಿದ್ದೆ ಅಷ್ಟೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ನಸೀಂ ಝೈದಿಯವರನ್ನು ಅವರ ವಸತಿಯಲ್ಲಿ ಇಳಿಸಿದ ಬಳಿಕ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ವಸತಿಗೆ ನಾನು ಬಂದೆ.ಗೇಟಿನ ಸಮೀಪ ಬಂದಾಗ ನನ್ನ ಕಾರಿನ ಹೆಡ್‌ಲೈಟ್, ಹೆದರಿಕೊಂಡು ನಿಂತಿದ್ದ ಸಬ್‌ಇನ್‌ಸ್ಪೆಕ್ಟರ್ ವಿ.ಬಿ. ಸಿಂಗ್‌ರ ಮೇಲೆ ಹರಿಯಿತು. ಅವರು ಲಿಂಕ್ ರೋಡ್ ಪೊಲೀಸ್‌ಠಾಣೆಯ ಹೊಣೆಯಿದ್ದ ಅಧಿಕಾರಿಯಾಗಿದ್ದರು. ಆಗ ನನಗೆಭಯಾನಕವಾದ ಏನೋ ನಡೆದಿರಬೇಕೆಂದು ಮನವರಿಕೆಯಾಯಿತು. ಕಾರು ನಿಲ್ಲಿಸಿ ಹೋಗಿ ಅವರಲ್ಲಿ ವಿಷಯ ಏನೆಂದು ವಿಚಾರಿಸಲು ಚಾಲಕನಿಗೆ ಹೇಳಿದೆ.ಏನು ನಡೆದಿದೆ ಎಂದು ಹೇಳಲು ಸಾಧ್ಯವಾಗದಷ್ಟು ಹೆದರಿಕೆಯಿಂದ ಅವರು ನಡುಗುತ್ತಿದ್ದರು. ಆದರೂ ಕಂಪಿಸುವ ಧ್ವನಿಯಲ್ಲಿ ಅವರು ಹೇಳಿದ್ದ ಕೆಲವೇ ಮಾತುಗಳೇ ಯಾರನ್ನೂ ಬೆಚ್ಚಿಬೀಳಿಸಲು ಸಾಕಿತ್ತು. ಮಕಾನ್‌ಪುರದಲ್ಲಿದ್ದ ಕಾಲುವೆಗೆ ಸಮೀಪ ಪಿಎಸಿ ಜವಾನರು ಕೆಲವು ಮಂದಿಯನ್ನು ಕೊಂದಿದ್ದಾರೆ ಹಾಗೂ ಅವರು ಮುಸ್ಲಿಮರಾಗಿರುವ ಸಾಧ್ಯತೆಯಿದೆ ಎಂದು ವಿ.ಬಿ ಸಿಂಗ್ ನನಗೆ ಹೇಳಿದ್ದರು.

 ವಿ.ಬಿ.ಸಿಂಗ್‌ರಿಂದಹೆಚ್ಚಿನ ವಿವರವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆದರೆ ಕೊನೆಗೂ ಇಷ್ಟೇ ಮಾಹಿತಿ ನನಗೆ ಸಿಕ್ಕಿತ್ತು.ಪೊಲೀಸ್ ಠಾಣೆಯಲ್ಲಿ ವಿ.ಬಿ.ಸಿಂಗ್ ಮತ್ತು ಸಹೋದ್ಯೋಗಿಗಳು ಕುಳಿತ್ತಿದ್ದರು. ಆಗ ರಾತ್ರಿ ಒಂಬತ್ತು ಗಂಟೆ ಸಮಯ. ಮಕಾನ್‌ಪುರ ಸಮೀಪದಲ್ಲಿ ಗುಂಡು ಹಾರಾಟದ ಸದ್ದು ಕೇಳಿಸಿತ್ತು. ದರೋಡೆಕೋರರು ಗ್ರಾಮಕ್ಕೆ ನುಗ್ಗಿರಬೇಕೆಂದು ಅವರೆಲ್ಲ ಭಾವಿಸಿದ್ದರು. ಆದ್ದರಿಂದ ವಿ.ಬಿ.ಸಿಂಗ್ ಸದ್ದು ಬಂದ ಕಡೆಗೆ ತನ್ನ ಬೈಕ್‌ನ್ನು ತಿರುಗಿಸಿದರು. ಇನ್ನೊಬ್ಬ ಸಬ್‌ಇನ್‌ಸ್ಪೆಕ್ಟರ್ ಹಾಗೂ ಕಾನ್ಸ್‌ಟೇಬಲ್ ಜೊತೆಯಲ್ಲಿದ್ದರು. ಕೆಲವೇ ಮೀಟರ್ ಹೋದಾಗ ಅವರ ನೇರಕ್ಕೆ ಒಂದು ಟ್ರಕ್ ವೇಗವಾಗಿ ಧಾವಿಸಿ ಬಂತು. ಬೈಕನ್ನು ಕೂಡಲೇ ಬದಿಗೆ ತೆಗೆಯದಿರುತ್ತಿದ್ದರೆ ಟ್ರಕ್ ಅವರನ್ನೇ ಆಹುತಿ ಪಡೆಯುತ್ತಿತ್ತು. ಬೈಕ್‌ನ್ನು ಹೇಗೋಹೇಗೋ ನಿಯಂತ್ರಿಸಿ ಹಿಂದಿರುಗಿ ನೋಡಿದಾಗ ಹಸಿರು ಬಣ್ಣದ ಒಂದು ಟ್ರಕ್ ಅದು ಆಗಿತ್ತು. ಅದರ ಹಿಂದೆ 41 ಎಂದು ಬರೆದಿತ್ತು. ಖಾಕಿ ಯೂನಿಫಾರಂ ಧರಿಸಿದ್ದ ಕೆಲವರು ಅದರೊಳಗೆ ಇದ್ದರು. ಪಿಎಸಿ 41ನೆ ಬಟಾಲಿಯನ್‌ನ ಟ್ರಕ್ ಅದೆಂದು ಅಷ್ಟರಲ್ಲಿ ಅವರಿಗೆ ಮನವರಿಕೆಯಾಗಿತ್ತು. ಪಿಎಸಿಯ ವಾಹನ ಈ ಸಮಯದಲ್ಲಿ ಇಲ್ಲಿಗೇಕೆ ಬಂತು ಎಂದು ಅವರಿಗೆ ಆಶ್ಚರ್ಯವೂ ಆಯಿತು. ಗುಂಡುಹಾರಾಟಕ್ಕೂ ಅವರಿಗೂ ಏನಾದರೂ ಸಂಬಂಧವಿದೆಯೇ ಎಂದು ತಿಳಿಯಲು ಅವರು ಮಕಾನ್‌ಪುರ್‌ನತ್ತ ಬೈಕ್ ಚಲಾಯಿಸುತ್ತಾ ಹೊರಟರು. ಒಂದು ಕಿಲೊಮೀಟರ್ ಮುಂದೆ ಹೋದಾಗ ಕಂಡದೃಶ್ಯಕ್ಕೆ ಅವರು ನಡುಗಿಹೋಗಿದ್ದರು.ರಕ್ತದಲ್ಲಿ ಮಿಂದಿದ್ದ ಚದುರಿಬಿದ್ದ ಮೃತದೇಹಗಳು. ಅವುಗಳಿಂದ ಆಗಲೂ ರಕ್ತ ಸುರಿಯುತ್ತಿತ್ತು. ಧಾವಿಸಿಹೋದ ಟ್ರಕ್ ಹಾಗೂ ಮೃತದೇಹಗಳಿಗೂ ಸಂಬಂಧವನ್ನು ಪತ್ತೆಹಚ್ಚಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ."

 ವಿಭೂತಿ ನಾರಾಯಣ್ ರಾಯ್ ಹೀಗೆ ಅಂದಿನ ಕಥೆಯನ್ನು ತನ್ನ ಪುಸ್ತಕದಲ್ಲಿ ವಿವರಿಸುತ್ತಾ ಹೋಗುತ್ತಾರೆ ಎಂದು ವರದಿ ತಿಳಿಸಿದೆ. ಭಾರತದ ಆಡಳಿತಕೂಟ ಮತ್ತುಅಲ್ಪಸಂಖ್ಯಾತರ ನಡುವಿನ ಸಂಬಂಧದ ನಿಷ್ಠುರ ಉದಾಹರಣೆ ಇದೆಂದು ಅವರು ಹೇಳುತ್ತಾರೆ.ರಾಮಜನ್ಮಭೂಮಿ ಗಲಾಟೆ ದೇಶದಲ್ಲಿ ಒಡಕು ಹುಟ್ಟುಹಾಕಿ ಅಂದಿಗೆ ಹತ್ತುವರ್ಷ ಹೆಚ್ಚೇ ಆಗಿರಬಹುದು. ಹಿಂದೂ ಮಧ್ಯಮವರ್ಗವನ್ನು ಕೋಮುವಾದದೆಡೆಗೆ ಈ ಗಲಾಟೆ ಸೆಳೆದಿತ್ತು. ಇದರದ್ದೇ ಮುಂದುವರಿದ ಕಥೆ ಹಾಶಿಂಪುರ್‌ನಲ್ಲಿ ನಡೆದಿತ್ತು ಎಂದು ವಿಭೂತಿನಾರಾಯಣ್ ರಾಯ್ ಪುಸ್ತಕದಲ್ಲಿ ತಿಳಿಸುತ್ತಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News