ನಿಗೂಢವಾಗಿ ಮೃತಪಟ್ಟ ವ್ಯಕ್ತಿಯ ಶರೀರದಲ್ಲಿ 300 ಪೆಲೆಟ್‌ಗಳು!

Update: 2016-08-04 02:57 GMT

ಶ್ರೀನಗರ, ಆ.4: ಎಟಿಎಂ ಬೂತ್ ಭದ್ರತಾ ಸಿಬ್ಬಂದಿಯೊಬ್ಬ ನಿಗೂಢವಾಗಿ ಮೃತಪಟ್ಟಿದ್ದು, ಆತನ ದೇಹದಲ್ಲಿ ತೀರಾ ಹತ್ತಿರದಿಂದ ಪ್ರಯೋಗಿಸಿದ 300ಕ್ಕೂ ಹೆಚ್ಚು ಪೆಲೆಟ್‌ಗಳು ಪತ್ತೆಯಾಗಿವೆ. ಇದರಿಂದ ಹಳೆನಗರ ಪ್ರದೇಶ ಮತ್ತೆ ಉದ್ವಿಗ್ನಗೊಂಡಿದೆ.

ಬಯಾಪ್ಸಿ ವರದಿಯಿಂದ ರಿಯಾಜ್ ಅಹ್ಮದ್ ಶಾ ಸಾವಿಗೆ ಕಾರಣ ತಿಳಿದುಬಂದಿದ್ದು, ಆತನ ದೇಹದಲ್ಲಿ 300ಕ್ಕೂ ಹೆಚ್ಚು ಪೆಲೆಟ್‌ಗಳು ಪತ್ತೆಯಾಗಿವೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕರಣ್‌ನಗರ ಪ್ರದೇಶದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಬಳಿ ಶಾ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿತ್ತು. ಹರಿತವಾದ ಆಯುಧದಿಂದ ಆಗಿರುವ ಗಾಯದಿಂದ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಭದ್ರತಾ ಪಡೆಗಳು ಈ ಕೃತ್ಯ ಎಸಗಿವೆ ಎಂದು ಮೃತವ್ಯಕ್ತಿಯ ಕುಟುಂಬದ ಸದಸ್ಯರು ದೂರಿದ್ದಾರೆ.

ಹಂತಕರನ್ನು ಪತ್ತೆ ಮಾಡಿ ನ್ಯಾಯದ ಕಟೆಕಟೆಗೆ ತರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜುಲೈ 9ರ ಘಟನೆ ಬಳಿಕ ಕಾಶ್ಮೀರದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿದಂತಾಗಿದೆ. ಇವರಲ್ಲಿ ಇಬ್ಬರು ಪೊಲೀಸರೂ ಸೇರಿದ್ದಾರೆ. ಮಂಗಳವಾರ ಸಂಜೆಯ ಬಳಿಕ ಎರಡನೆ ಸಾವು ಇದಾಗಿದ್ದು, ಮಂಗಳವಾರ ಪ್ರತಿಭಟನಾಕಾರರೊಬ್ಬರು ಶ್ರೀನಗರ- ಜಮ್ಮು ಹೆದ್ದಾರಿಯಲ್ಲಿ ಗುಂಡಿಗೆ ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News