2019ರ ಚುನಾವಣೆಯಲ್ಲಿ ನೀವು ಇದಕ್ಕೆ ಬೆಲೆ ತೆರುತ್ತೀರಿ: ಮೋದಿಗೆ ವಿಹಿಂಪ

Update: 2016-08-08 03:13 GMT

ಅಹ್ಮದಾಬಾದ್, ಆ.8: ಸ್ವಯಂಘೋಷಿತ ಗೋರಕ್ಷಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ವಿಶ್ವಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 2019ರ ಚುನಾವಣೆಯಲ್ಲಿ ನೀವು ಇದಕ್ಕೆ ಬೆಲೆ ತೆರುತ್ತೀರಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.

ವಿಶ್ವ ಹಿಂದೂ ಪರಿಷತ್‌ನ ಗುಜರಾತ್ ಘಟಕ ಬಿಡುಗಡೆ ಮಾಡಿದ ಸಹಿಮಾಡದ ಹೇಳಿಕೆಯಲ್ಲಿ, ರಾತ್ರಿ ವೇಳೆ ಸಮಾಜವಿರೋಧಿಗಳು; ಹಗಲಿನಲ್ಲಿ ಗೋರಕ್ಷಕರು ಎಂಬ ಅಭಿಪ್ರಾಯದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ, ಇದು ಗೋಸಂರಕ್ಷಕರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸಾವಿರಾರು ಕಟುಕರು ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ಹಸುಗಳನ್ನು ಹತ್ಯೆ ಮಾಡುತ್ತಿದ್ದಾರೆ. ಅವರನ್ನು ಗೂಂಡಾಗಳು ಎಂದು ಕರೆಯುವ ಬದಲು, ಕೆಲ ವರ್ಷ ಹಿಂದೆ ಅಹ್ಮದಾಬಾದ್‌ನಲ್ಲಿ ಹತ್ಯೆಯಾದ ಗೀತಾ ರಾಂಭಿಯಾ ಅವರಂಥ ಗೋರಕ್ಷಕರನ್ನು ಗೂಂಡಾ ಎಂದು ಕರೆಯುತ್ತಿದ್ದೀರಿ. ಇದು ನಿಮ್ಮ ಹೃದಯ ಬದಲಾದದ್ದನ್ನು ಸೂಚಿಸುತ್ತದೆ ಎಂದು ಹೇಳಿದೆ. ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೊಳಿಸುವಂತೆ ಸಂಘಟನೆ ಆಗ್ರಹಿಸಿದೆ.

 ಆಗ್ರಾದಲ್ಲಿ ಹಿಂದೂ ಸಂಘಟನೆಯ ಬ್ರಜ್ ಘಟಕದ ಉಪಾಧ್ಯಕ್ಷ ಸುನೀಲ್ ಪರಾಶರ್ ಹೇಳಿಕೆ ನೀಡಿ, ಮೋದಿ ಹೇಳಿಕೆಯಿಂದ ಗೋರಕ್ಷಕರಿಗೆ ನೋವಾಗಿದೆ. ಇದಕ್ಕೆ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗೋಸಂರಕ್ಷಣೆಗೆ ಹೋರಾಡುತ್ತಿರುವ ಏಕೈಕ ಸಂಘಟನೆ ವಿಶ್ವಹಿಂದೂ ಪರಿಷತ್. ಗೋರಕ್ಷಕರ ಹೆಸರಿನಲ್ಲಿ ಯಾರು ಗೋಮಾಂಸದ ಮಳಿಗೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸರಕಾರ ಪತ್ತೆ ಮಾಡಬೇಕು. ಮೋದಿ ಪಾಕಿಸ್ತಾನಕ್ಕೆ ಸ್ನೇಹಹಸ್ತ ಚಾಚುವುದು ನಿಲ್ಲಿಸದಿದ್ದರೆ, ಅವರ ಕೇಂದ್ರದ ಕುರ್ಚಿಗೆ ಅದು ಕುತ್ತು ತರಬಹುದು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಆಲಿಗಢದಲ್ಲಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News