ಮೂರನೆ ಜಾಗತಿಕ ಯುದ್ಧ ಗೋವಿನ ವಿಷಯದಲ್ಲಿ ನಡೆಯಲಿದೆ : ಮಧ್ಯ ಪ್ರದೇಶದ ಸರಕಾರಿ ಮಂಡಳಿಯ ಅಧ್ಯಕ್ಷ

Update: 2016-08-08 05:59 GMT

ಭೋಪಾಲ್, ಆ.8: ‘‘ಮೂರನೆ ಜಾಗತಿಕ ಯುದ್ಧ ಗೋವಿನ ವಿಷಯದಲ್ಲಿ ನಡೆಯಲಿದೆ.’’ ಹೀಗೆಂದು ಹೇಳಿದವರು ಮಧ್ಯ ಪ್ರದೇಶ ಗೋಪಾಲನ್ ಏವಂ ಪಶುಧನ್ ಸಂವರ್ಧನ್ ಮಂಡಳಿಯ ಅಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಅಖಿಲೇಶ್ವರಾನಂದ ಗಿರಿ. ಹಣೆಯಲ್ಲಿ ಕುಂಕುಮ ಹಾಗೂ ಅಶ್ವಗಂಧ ಮಿಶ್ರಿತ ನಾಮ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿರುವ ಖಾವಿಧಾರಿ ಸ್ವಾಮಿ ತನ್ನ ವಿಶಾಲವಾದ ಸರಕಾರಿ ಕಚೇರಿಯಲ್ಲಿ ತನ್ನ ಕಾಲಿಗೆ ಬಿದ್ದು ಆಶೀರ್ವಾದ ಯಾಚಿಸುತ್ತಿದ್ದ ಜನರಲ್ಲಿ ಹೀಗೆಂದು ಹೇಳುತ್ತಿದ್ದರು.

ಈ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಧಾರ್ಮಿಕ ನಾಯಕರಾಗಿರುವ ಅವರು ಮುಂದುವರಿದು ಮಾತನಾಡುತ್ತಾ ‘‘ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಗೋವಿನ ವಿಚಾರದಲ್ಲಿ ನಡೆಯಿತು.’’ ಎಂದು ಹೇಳಿದರಲ್ಲದೆ ‘‘ಸತ್ತ ಅಥವಾ ಗಾಯಗೊಂಡಿರುವ ದನಗಳನ್ನು ನೋಡಿದಾಗ ಗೋರಕ್ಷಕರಿಗೆ ಕೋಪ ಬರುವುದು ಸಹಜ. ಅದು ಅವರಿಗೆ ಭಾವನಾತ್ಮಕ ವಿಚಾರವಾಗಿದೆ.’’ ಎಂದು ಹೇಳಿದರು. ‘‘ಗೋರಕ್ಷಕರು ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರು ಬರುವ ತನಕ ಕಾಯಬೇಕು.’’ಎಂದು ಸೂಚಿಸಿದರು.

ಸನ್ಯಾಸ ದೀಕ್ಷೆ ಸ್ವೀಕರಿಸುವ ಮುನ್ನ ರಾಮ ಜನ್ಮಭೂಮಿ ಆಂದೋಲನದ ಭಾಗವಾಗಿದ್ದ 61 ವರ್ಷದ ಅಖಿಲೇಶ್ವರಾನಂದ ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕ್ರೈಸ್ತರನ್ನು ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸುವ ಪ್ರಕ್ರಿಯೆಯ ಭಾಗವಾಗಿದ್ದರು. ದೇಸೀ ದನದ ಪಾವಿತ್ರತೆಯ ಮೇಲೆ ಅಪಾರ ನಂಬಿಕೆಯುಳ್ಳವರಾಗಿರುವ ಅವರು, ದನದ ಹಾಲು, ಮೂತ್ರ ಹಾಗೂ ಸೆಗಣಿಯಲ್ಲಿ ಔಷಧೀಯ ಗುಣಗಳಿವೆ ಹಾಗೂ ಅವುಗಳಲ್ಲಿ ಕ್ಯಾನ್ಸರ್ ಹಾಗೂ ಅಪಸ್ಮಾರದಂತಹ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ ಎಂದು ಬಲವಾಗಿ ನಂಬಿದ್ದಾರೆ.

ಮಂಡಳಿಯ ಕಾರ್ಯನಿರ್ವಹಣೆಗೆ ಸರಕಾರದಿಂದ ಸಿಗುವ 18 ಕೋಟಿ ರೂ. ಏನೇನೂ ಸಾಲದು ಎಂದು ಹೇಳುವ ಅವರು ತಮ್ಮ ಮಂಡಳಿಗೆ ಕನಿಷ್ಠ 100 ಕೋಟಿ ಅಗತ್ಯವಿದೆ ಎಂದು ಹೇಳುತ್ತಾರೆ. ರಾಜ್ಯದಲ್ಲಿನ 575 ಅಧಿಕೃತ ಗೋಶಾಲೆಗಳಲ್ಲಿ ಹೆಚ್ಚಿನವು ಆರ್ಥಿಕವಾಗಿ ಸುದೃಢವಾಗಿದ್ದು ಗೋ ಉತ್ಪನ್ನಗಳ ಉಪಯೋಗಗಳ ಬಗ್ಗೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಸಶಕ್ತವಾಗಿವೆ ಎಂದೂ ಅಖಿಲೇಶ್ವರಾನಂದ ಮಾಹಿತಿ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News