ಪ್ರತಿಷ್ಠಿತ ಆಸ್ಪತ್ರೆಯ ಸಿಇಒ, ವೈದ್ಯಕೀಯ ನಿರ್ದೇಶಕ ಸಹಿತ ಐದು ವೈದ್ಯರ ಬಂಧನ

Update: 2016-08-10 03:03 GMT

ಮುಂಬೈ, ಆ.10: ಕಿಡ್ನಿ ಮಾರಾಟ ಜಾಲದಲ್ಲಿ ಶಾಮೀಲಾದ ಆರೋಪದಲ್ಲಿ ನಗರದ ಪ್ರತಿಷ್ಠಿತ ಹೀರಾನಂದನಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಿತ್ ಚಟರ್ಜಿ, ವೈದ್ಯಕೀಯ ನಿರ್ದೇಶಕ ಅನುರಾಗ್ ನಾಯಕ್ ಸೇರಿದಂತೆ ಐದು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರಸ್ಟ್ ನಿರ್ವಹಿಸುವ ಈ ಆಸ್ಪತ್ರೆಯಲ್ಲಿ ಜುಲೈ 14ರಂದು ಕಿಡ್ನಿ ಮಾರಾಟ ದಂಧೆ ಬೆಳಕಿಗೆ ಬಂದಿತ್ತು. ಅನೈತಿಕ ವೈದ್ಯಕೀಯ ಪದ್ಧತಿ ಅನುಸರಿಸಿದ ಆರೋಪದಲ್ಲಿ ಹಿರಿಯ ವೈದ್ಯರನ್ನು ಬಂಧಿಸಿರುವುದು ಇದೇ ಮೊದಲು. ಈ ಪ್ರಕರಣದ ಸಂಬಂಧ ಪೊಲೀಸರು 14 ಮಂದಿಯನ್ನು ಬಂಧಿಸಿದ್ದು, ಕಿಡ್ನಿವೈಪಲ್ಯ ಎದುರಿಸುತ್ತಿರುವ ರೋಗಿ, ನಕಲಿ ಪತ್ನಿ ಕೂಡಾ ಬಂಧನದಲ್ಲಿದ್ದಾರೆ. ಆಸ್ಪತ್ರೆಯ ಜತೆ ಸಂಪರ್ಕ ಹೊಂದಿರುವ ಆರೋಗ್ಯ ಕಾರ್ಯಕರ್ತ ನೀಲೇಶ್ ಕಾಂಬ್ಳೆ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಈ ವೈದ್ಯರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಅಶೋಕ್ ಧೂದೆ ಹೇಳಿದ್ದಾರೆ. ಆದರೆ ವೈದ್ಯರ ಜತೆ ಸಂಪರ್ಕ ಹೊಂದಿದ್ದ ಬಗ್ಗೆ ನೀಲೇಶ್ ಕಾಂಬ್ಳೆ ನೀಡಿದ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಹಾಗೂ ಆಸ್ಪತ್ರೆ ಟ್ರಸ್ಟ್ ಸಂಸ್ಥಾಪಕ ನಿರಂಜನ್ ಹಿರಾನಂದನಿ ಇದೊಂದು ಬೇಸರದ ದಿನ ಎಂದು ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News