ಪುಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ

Update: 2016-08-10 03:08 GMT

ಹೊಸದಿಲ್ಲಿ, ಆ.10: ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ದ್ವಿಚಕ್ರ ವಾಹನ ಪ್ರಯಾಣಕ್ಕೆ ಹೆಲ್ಮೆಟ್ ಕಡ್ಡಾಯಗೊಳಿಸುವುದೂ ಸೇರಿದಂತೆ ಹಲವು ತಿದ್ದುಪಡಿಗಳನ್ನೊಳಗೊಂಡ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದೆ.

ಆದರೆ ತಲೆಗೆ ಪೇಟಾ ಸುತ್ತುವ ಸಿಖ್ಖ್‌ರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಕಾರಿನಲ್ಲಿ ಪ್ರಯಾಣಿಸುವ 14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೂ ಸೀಟ್‌ಬೆಲ್ಟ್ ಕಡ್ಡಾಯ ಮಾಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ 1,000 ರೂ.ದಂಡ ಪಾವತಿಸಬೇಕಾಗುತ್ತದೆ.

ಬಹುತೇಕ ತಿದ್ದುಪಡಿಗಳು ರಸ್ತೆ ಸುರಕ್ಷೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿವೆ. ಇದರಲ್ಲಿ ಇರುವ ಮತ್ತೊಂದು ಮಹತ್ವದ ತಿದ್ದುಪಡಿ ಎಂದರೆ ವಾಣಿಜ್ಯ ವಾಹನಗಳ ಚಾಲಕರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿರುವುದು. ಆದರೆ ಚಾಲನಾ ತರಬೇತಿ ಸಂಸ್ಥೆಯ ದೃಢೀಕರಣ ಹೊಂದಿದ್ದರೆ ಇದರಿಂದ ವಿನಾಯಿತಿ ಇದೆ.

ಸಿಗ್ನಲ್ ದೀಪ ಜಂಪ್ ಮಾಡಿದರೆ, ಪಾನಮತ್ತರಾಗಿ ವಾಹನ ಚಲಾಯಿಸಿದರೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ, ತಪ್ಪು ಲೇನ್‌ನಲ್ಲಿ ವಾಹನ ಚಲಾಯಿಸಿದರೆ ವಾಹನ ಸವಾರರ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಿಕೊಳ್ಳಲು ಸಂಚಾರಿ ಪೊಲೀಸರಿಗೆ ಅಧಿಕಾರ ನೀಡುವುದೂ ತಿದ್ದುಪಡಿಯಲ್ಲಿ ಸೇರಿದೆ. ಮತ್ತೆ ಇದೇ ತಪ್ಪು ಮುಂದುವರಿಸಿದರೆ ಲೈಸನ್ಸ್ ರದ್ದು ಮಾಡಲೂ ಅಧಿಕಾರ ಇರುತ್ತದೆ. ಕುಡಿದು ವಾಹನ ಚಾಲನೆ ಮಾಡುವಾಗ ಎರಡನೆ ಬಾರಿ ಸಿಕ್ಕಿ ಹಾಕಿಕೊಂಡರೆ 15 ಸಾವಿರ ದಂಡ ಹಾಗೂ ಸರಣಿ ಅಪಾಯಕಾರಿ ಚಾಲನೆಗೆ 10 ಸಾವಿರ ರೂ. ದಂಡ ವಿಧಿಸುವ ಪ್ರಸ್ತಾವ ಇದೆ. ಇನ್ಶೂರೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವವರ ಪ್ರಕರಣ ಎರಡನೆ ಬಾರಿ ಪತ್ತೆಯಾದರೆ 4,000 ಸಾವಿರ ರೂ. ದಂಡ ವಿಧಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News