ಆಂಧ್ರಪ್ರದೇಶ: ದಲಿತ ಸಹೋದರರನ್ನು ವಿವಸ್ತ್ರಗೊಳಿಸಿ ಥಳಿಸಿದ ‘ಗೋ ರಕ್ಷಕ’ರು

Update: 2016-08-10 06:31 GMT

ಹೈದರಾಬಾದ್, ಆ.10: ಗುಜರಾತ್‌ನ ಉನಾ ಜಿಲ್ಲೆಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯವನ್ನು ನೆನಪಿಸುವ ಇನ್ನೊಂದು ಘಟನೆಯಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ಇಬ್ಬರು ದಲಿತ ಸಹೋದರರನ್ನು ‘ಗೋ ರಕ್ಷಕರ’ ತಂಡವೊಂದು ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ಪಟ್ಟಣದ ಅನಕಿಪೇಟ ಎಂಬಲ್ಲಿ ಆಗಸ್ಟ್ 8 ರಂದು ನಡೆದಿದೆಯೆಂದು ಜನತಾ ಕಾ ರಿಪೋರ್ಟರ್ ವರದಿಯೊಂದು ಹೇಳಿದೆ. ಸಂತ್ರಸ್ತರಿಬ್ಬರನ್ನೂ ವಿವಸ್ತ್ರಗೊಳಿಸಿ ಮರವೊಂದಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆಯೆನ್ನಲಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ದನವೊಂದು ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ ನಂತರ ಅದರ ಚರ್ಮವನ್ನು ಸುಲಿಯಲು ಅದರ ಮಾಲಕ ಇಬ್ಬರು ಸಹೋದರರನ್ನು ಗೊತ್ತು ಪಡಿಸಿದ್ದ. ಆದರೆ ಯುವಕರು ದನದ ಚರ್ಮ ಸುಲಿಯುತ್ತಿರುವಾಗ, ಅವರೇ ದನವನ್ನು ಕೊಂದವರೆಂಬ ಶಂಕೆಯ ಆಧಾರದಲ್ಲಿ ಗೋ ರಕ್ಷಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಸಂತ್ರಸ್ತ ಸಹೋದರರನ್ನು ಮೊಕಾಟಿ ಎಲಿಸಾ ಹಾಗೂ ಮೊಕಾಟಿ ರಾಜಮ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆಯೆನ್ನಲಾಗಿದೆ.

ಪೊಲೀಸ್ ತನಿಖೆ ನಡೆಯುತ್ತಿದ್ದರೂ ಆರೋಪಿಗಳನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ‘‘ಪರಿಶಿಷ್ಟ ಜಾತಿ/ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋ ರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News