ರೈಲ್ವೆಯ 92 ವರ್ಷಗಳ ಪರಂಪರೆಗೆ ಬ್ರೇಕ್

Update: 2016-08-13 06:59 GMT

ಹೊಸದಿಲ್ಲಿ, ಆ.13:ಕೇಂದ್ರದ ಮೋದಿ ಸರಕಾರ ರೈಲ್ವೆಯ 92 ವರ್ಷಗಳ ಪರಂಪರೆಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ಮುಂದಿನ ಆರ್ಥಿಕ ವರ್ಷದಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸದೇ ಇರುವ ಐತಿಹಾಸಿಕ ನಿರ್ಧಾರವೊಂದನ್ನು ಸರಕಾರ ಕೈಗೊಂಡಿದೆ. ಇನ್ನು ಮುಂದೆ ರೈಲ್ವೇ ಬಜೆಟ್ ಕೂಡ ಸಾಮಾನ್ಯ ಬಜೆಟ್ ನ ಭಾಗವಾಗಲಿದೆಯೆಂದು ಟೈಮ್ಸ್ ಆಫ್ ಇಂಡಿಯಾದ ವರದಿಯೊಂದು ತಿಳಿಸಿದೆ.

ಈ ಮಹತ್ವದ ಪ್ರಕ್ರಿಯೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವಿತ್ತ ಸಚಿವಾಲಯ ಐದು ಅಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ. ಹಿಂದಿನ ಸರಕಾರಗಳ ಅವಧಿಯಲ್ಲಿ ರೈಲ್ವೆ ಬಜೆಟ್ ನಲ್ಲಿ ವಿವಿಧ ವಿನಾಯಿತಿಗಳನ್ನು ನೀಡಿ ಜನಸಾಮಾನ್ಯರನ್ನು ಓಲೈಸಲು ಉಪಯೋಗಿಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವದ್ದೆನಿಸಿದೆ. ಮೇಲಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಕೂಡ ಈ ಮಹತ್ವದ ನಿರ್ಧಾರಕ್ಕೆ ಸಮ್ಮತ ಸೂಚಿಸಿದ್ದು ಇದರಿಂದ ಅವರು ಬಜೆಟ್ ಮಂಡಿಸುವ ವೇಳೆ ಪಡೆಯುತ್ತಿದ್ದ ಪ್ರಚಾರದಿಂದ ವಂಚಿತರಾಗುತ್ತಾರೆ. ಮೇಲಾಗಿ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಬಿಜೆಪಿ ಹೊಂದಿರುವುದರಿಂದ ಅದು ಈ ಸಚಿವಾಲಯವನ್ನು ಯಾವುದೇ ಮಿತ್ರ ಪಕ್ಷದ ಸಂಸದರನ್ನು ಒಪ್ಪಿಸುವ ಅನಿವಾರ್ಯತೆ ಕೂಡ ಸರಕಾರಕ್ಕಿಲ್ಲ.

ನೀತಿ ಆಯೋಗ ಸದಸ್ಯ ಬಿಬೇಕ್ ರಾಯ್ ಹಾಗೂ ಕಿಶೋರ್ ದೇಸಾಯಿಯವರನ್ನೊಳಗೊಂಡ ದ್ವಿಸದಸ್ಯ ಸಮಿತಿ ರೈಲ್ವೆ ಬಜೆಟನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಈ ಬ್ರಿಟಿಷ್ ಕಾಲದಿಂದ ಜಾರಿಯಲ್ಲಿದ್ದ ರೈಲ್ವೇ ಬಜೆಟ್ ಮಂಡನೆ ಪದ್ಧತಿಯನ್ನು ಅಂತ್ಯಗೊಳಿಸಲಾಗಿದೆ. ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಬಜೆಟನ್ನು ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸುವಂತೆ ತಾನು ವಿತ್ತ ಸಚಿವರಿಗೆ ಹೇಳಿರುವುದಾಗಿ ತಿಳಿಸಿದ್ದರು, ಈ ವಿಲೀನ ಪ್ರಕ್ರಿಯೆಗೆ ಎಷ್ಟು ಸಮಯ ತಗಲಬಹುದೆಂಬುದರ ಬಗ್ಗೆ ಅವರು ಏನೂ ಹೇಳಿರಲಿಲ್ಲ.

ಒಮ್ಮೆ ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಂಡಲ್ಲಿ ರೈಲ್ವೆಯು ಇತರ ಸಾಮಾನ್ಯ ಸರಕಾರಿ ಇಲಾಖೆಗಳಂತಾಗಿಬಿಡುತ್ತದೆ. ಅದರ ಆದಾಯ ಹಾಗೂ ಖರ್ಚುವೆಚ್ಚಗಳ ಮೇಲೆ ವಿತ್ತ ಸಚಿವಾಲಯ ನಿಗಾ ಇಡುವುದು. ಒಮ್ಮೆ ಹಣ ಬಿಡುಗಡೆಯಾದಾಗ ಅಂಚೆ ಇಲಾಖೆಯಂತೆಯೇ ರೈಲ್ವೆ ಅದನ್ನು ವಿವಿಧ ಉದ್ದೇಶಗಳಿಗೆ ವಿಂಗಡಿಸುವುದು,ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News