ಕಾಂಗೊ: 30 ನಾಗರಿಕರ ನರಮೇಧ

Update: 2016-08-14 18:35 GMT

ಗೋಮಾ, ಆ.14: ಕಳೆದ ಎರಡು ವರ್ಷಗಳಿಂದ ತೀವ್ರ ಹಿಂಸಾಚಾರದಿಂದ ತತ್ತರಿಸಿರುವ ಪೂರ್ವ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದ ಪ್ರದೇಶವೊಂದರಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಕನಿಷ್ಠ 30 ಮಂದಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಶನಿವಾರ ರಾತ್ರಿ ಬೆನಿ ನಗರದಲ್ಲಿ ಶಂಕಿತ ಪ್ರಜಾತಾಂತ್ರಿಕ ಮೈತ್ರಿ ಪಡೆ (ಎಡಿಎಫ್)ಯ ಬಂಡುಕೋರರು, ಸುಮಾರು 30 ಮಂದಿಯನ್ನು ಹತ್ಯೆಗೈದಿರುವುದಾಗಿ ಸೇನಾಪಡೆ ಇಂದು ತಿಳಿಸಿದೆ. ಬೆನಿ ನಗರದ ಹೊರವಲಯದಲ್ಲಿರುವ ರ್ವಾನ್‌ಗೊಮಾ ವಸತಿ ಪ್ರದೇಶದಲ್ಲಿ ಶವಗಳು ರಾಶಿಯಾಗಿ ಬಿದ್ದಿರುವುದು ಪತ್ತೆಯಾಗಿದೆಯೆಂದು ಸೇನಾ ವಕ್ತಾರ ಮ್ಯಾಕ್ ಹ್ಯಾಝುಕೆ ತಿಳಿಸಿದ್ದಾರೆ. ಈ ಭೀಕರ ಹತ್ಯಾಕಾಂಡದಲ್ಲಿ ಇನ್ನೂ ಹಲವು ಮಂದಿ ಮೃತರಾಗಿರುವ ಸಾಧ್ಯತೆಯಿದ್ದು, ಅವರ ಶವಗಳಿಗಾಗಿ ಹುಡುಕಾಟ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ.

ಭೀಕರ ನರಮೇಧಕ್ಕೆ ಸಾಕ್ಷಿಯಾಗಿರುವ ಬೆನಿ ನಗರವು, ಎಡಿಎಫ್ ಬಂಡುಕೋರರು ಹಾಗೂ ಸರಕಾರಿ ಪಡೆಗಳ ನಡುವೆ ಭೀಕರ ಕದನ ನಡೆಯುತ್ತಿರುವ ಉತ್ತರ ಕೀವು ಪ್ರಾಂತದಲ್ಲಿದೆ. ಅಕ್ಟೋಬರ್ 2014ರಿಂದೀಚೆಗೆ ಬೆನಿ ಪ್ರದೇಶದಲ್ಲಿನಡೆದ ಸರಣಿ ಹತ್ಯಾಕಾಂಡಗಳಲ್ಲಿ 600ಕ್ಕೂ ಅಧಿಕ ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News