ಗುಜರಾತ್ ಹತ್ಯಾಕಾಂಡ ಪ್ರಕರಣ ಶಿಕ್ಷೆಗೊಳಗಾಗಿರುವ ಪಟೇಲ್ ಯುವಕರ ಬಿಡುಗಡೆಗೆ ಹಾರ್ದಿಕ್ ಪಟೇಲ್ ಆಗ್ರಹ

Update: 2016-08-27 14:18 GMT

ಅಹ್ಮದಾಬಾದ್, ಆ.27: ಕಳೆದ 2002ರಲ್ಲಿ ವಿವಿಧ ದಂಗೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಪಟೇಲ್ ಸಮುದಾಯದ ಯುವಕರನ್ನು ಬಿಡುಗಡೆ ಮಾಡಬೇಕೆಂದು ಪಟೇಲ್ ಮೀಸಲಾತಿ ಚಳವಳಿಯ ಸಂಚಾಲಕ ಹಾರ್ದಿಕ್ ಪಟೇಲ್ ಆಗ್ರಹಿಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರೀಗ ವಿಶ್ವದೆದುರು ತನ್ನನ್ನು ಜಾತ್ಯತೀತ ನಾಯಕನೆಂದು ಬಿಂಬಿಸಲು ಬಯಸುತ್ತಿರುವುದರಿಂದ ಅದಕ್ಕೆ ಅನುಕೂಲ ಮಾಡಿಕೊಡಲಾರರೆಂದು ಅವರು ಆರೋಪಿಸಿದ್ದಾರೆ.

2002ರ ದಂಗೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿರುವ ಪಟೇಲ್ ಸಮುದಾಯದ 102 ಸದಸ್ಯರ ಪಟ್ಟಿಯೊಂದಿಗೆ ಹಾರ್ದಿಕ್ ಪ್ರಧಾನಿ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.

2002ರ ದಂಗೆಯ ಲಾಭ ಪಡೆದು ಮೊದಲು ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾದರು ಹಾಗೂ ಬಳಿಕ ದೇಶದ ಪ್ರಧಾನಿಯಾದರೆಂಬುದು ಪ್ರತಿಯೊಬ್ಬನಿಗೂ ತಿಳಿದಿದೆಯೆಂದು ಪತ್ರದಲ್ಲಿ ಹೇಳಿರುವ ಅವರು, ಗುಜರಾತ್ ಹಿಂಸಾಚಾರಕ್ಕೆ ಮೋದಿ ಹೊಣೆಯೆಂದು ಆರೋಪಿಸಿದ್ದಾರೆ.

 ದಂಗೆ ಪ್ರಕರಣಗಳಲ್ಲಿ ಹಲವು ಮಂದಿ ಪಾಟಿದಾರ್ ಯುವಕರಿಗೆ ನ್ಯಾಯಾಲಯಗಳು ಶಿಕ್ಷೆ ವಿಧಿಸಿವೆ. ತಾನು ಅವುಗಳ ಪಟ್ಟಿಯನ್ನು ಕೆಳಗೆ ನೀಡಿದ್ದೇನೆಂದು ಹಾರ್ದಿಕ್ ಪತ್ರದಲ್ಲಿ ಹೇಳಿದ್ದಾರೆ.

ಜಾಮೀನು ಶರ್ತದ ಪ್ರಕಾರ ಹಾರ್ದಿಕ್ ಗುಜರಾತ್‌ನಿಂದ ಹೊರಗಿರಬೇಕೆಂದು ರಾಜ್ಯದ ಹೈಕೋರ್ಟ್ ಆದೇಶಿಸಿರುವುದರಿಂದ ಅವರೀಗ ರಾಜಸ್ಥಾನದ ಉದಯಪುರದಲ್ಲಿ ವಾಸಿಸುತ್ತಿದ್ದಾರೆ.

ಈ ಎಲ್ಲ ಯುವಕರು ಗುಜರಾತ್‌ನ ಬಂದಿಖಾನೆಗಳಲ್ಲಿ ಕೊಳೆಯುತ್ತಿದ್ದಾರೆ. ಮೋದಿಜಿ ಈಗ ಪ್ರಧಾನಿಯಾಗಿದ್ದಾರೆ. ದಂಗೆಗಳಲ್ಲಿ ಭಾಗವಹಿಸಿದ್ದ ಯುವಕರ ಬಿಡುಗಡೆಗಾಗಿ ರಾಷ್ಟ್ರಪತಿಗೆ ಶಿಫಾರಸು ಮಾಡಲು ಅವರಿಗೆ ಸಾಧ್ಯವಿದೆಯೆಂದು ಹಾರ್ದಿಕ್ ಪತ್ರದಲ್ಲಿ ಅಭಿಪ್ರಾಯಿಸಿದ್ದಾರೆ.

ಆದರೆ, ತಾನೊಬ್ಬ ಜಾತ್ಯತೀತನೆಂದು ದೇಶಕ್ಕೆ ಹಾಗೂ ಪ್ರಪಂಚಕ್ಕೆ ಮೋದಿ ತೋರಿಸಬಯಸುತ್ತಿರುವುದರಿಂದ ಅವರಿದನ್ನು ಮಾಡಲಾರರು. ಮೋದಿಜಿ ಗುಜರಾತಿಗಳನ್ನು ಮುಖ್ಯವಾಗಿ ಪಾಟಿದಾರರನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ಹಾರ್ದಿಕ್, ವಿವಿಧ ದಂಗೆ ಪ್ರಕರಣಗಳು ಹಾಗೂ ಈ ಸಂಬಂಧ ನ್ಯಾಯಾಲಯಗಳು ಶಿಕ್ಷೆ ವಿಧಿಸಿರುವ ಹಲವು ಯುವಕರ ಪಟ್ಟಿಯನ್ನು ಪತ್ರದೊಂದಿಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News