ಸತ್ಯಶೋಧಕ ಕಲಬುರ್ಗಿ ಇಲ್ಲದ ಕರ್ನಾಟಕ

Update: 2016-08-28 18:10 GMT

ಕರ್ನಾಟಕ ಕಂಡ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಒಂದು ವರ್ಷವಾಯಿತು. ಕಳೆದ ವರ್ಷ ಇದೇ ಆಗಸ್ಟ್ ತಿಂಗಳು 30ರ ಮುಂಜಾನೆ ಬೆಂಗಳೂರಿನ ಮನೆಯಲ್ಲಿದ್ದೆ. ಅದೇ ತಾನೇ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಒಮ್ಮೆಲೇ ರಾಹುಲ್ ಫೋನ್ ಮಾಡಿ, ಕಲಬುರ್ಗಿ ಸರ್‌ಗೆ ಯಾರೋ ಗುಂಡು ಹಾಕ್ಯಾರಂತೆ ಎಂದು ಹೇಳಿದಾಗ, ಗಾಬರಿಯಿಂದ ಟಿವಿ ಚಾಲು ಮಾಡಿದೆ. ಸಂಶೋಧಕ ಕಲಬುರ್ಗಿ ಮೇಲೆ ಗುಂಡಿನ ದಾಳಿ ಎಂಬ ಸುದ್ದಿ ಬರುತಿತ್ತು. ಧಾರವಾಡದ ಕಲ್ಯಾಣನಗರದ ಅವರ ಮನೆ ಮುಂದೆ ಜನ ಸೇರಿದ್ದರು. ದುಃಖತಪ್ತರಾದ ಅವರ ಪತ್ನಿಯನ್ನು ಸಂತೈಸುತ್ತಿದ್ದರು.

ಟಿವಿ ನೋಡುತ್ತಿದ್ದಂತೆ, ನನ್ನ ನೆನಪಿನ ಸುರಳಿ ಬಿಚ್ಚಿಕೊಳ್ಳತೊಡಗಿತು. ನಾನು ಕಲಬುರ್ಗಿಯವರ ವಿದ್ಯಾರ್ಥಿ ಅಲ್ಲ. ಅಂತಹ ಅವಕಾಶ ನನಗೆ ಸಿಗಲಿಲ್ಲ ಎಂಬ ಕೊರಗು ನನ್ನಲ್ಲಿತ್ತು. ಕೆಲ ಬಾರಿ ಅವರೆದುರಿಗೆ ಅದನ್ನು ವ್ಯಕ್ತಪಡಿಸಿದ್ದೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕದಲ್ಲಿ ಇದ್ದಾಗ, ಕೆಲ ಬಾರಿ ಕಲಬುರ್ಗಿಯವರು ಫೋನ್ ಮಾಡಿ ನನ್ನ ಲೇಖನಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಸಲಹೆ ನೀಡುತ್ತಿದ್ದರು.

ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಿಂದ ಬಂದ ಕಲಬುರ್ಗಿಯವರಿಗೆ ತಮ್ಮ ಜಿಲ್ಲೆಯ ಜನರನ್ನು ಕಂಡರೆ ವಿಶೇಷ ಅಭಿಮಾನ. ಆ ಜಿಲ್ಲೆಯಿಂದ ಧಾರವಾಡ ವಿಶ್ವವಿದ್ಯಾನಿಲಯಕ್ಕೆ ಓದಲು ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅವರಿಗೆ ವಿಶೇಷ ಅಕ್ಕರೆ. ನಾನು ಅದೇ ಜಿಲ್ಲೆಯಿಂದ ಬಂದವನೆಂದು ಗೊತ್ತಾದಾಗ, ತುಂಬಾ ಖುಷಿಪಟ್ಟಿದ್ದರು. ಸಂಯುಕ್ತ ಕರ್ನಾಟಕ ನಮ್ಮ ಜಿಲ್ಲೆಯವರು ಕಟ್ಟಿದ ಪತ್ರಿಕೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇಂತಹ ಕಲಬುರ್ಗಿ ಅವರು 80ರ ದಶಕದಲ್ಲಿ ‘ಮಾರ್ಗ’ ಎಂಬ ಸಂಶೋಧನಾ ಗ್ರಂಥ ರಚಿಸಿದಾಗ, ಮೂಲಭೂತವಾದಿ ಶಕ್ತಿಗಳಿಂದ ಪ್ರಾಣ ಬೆದರಿಕೆ ಎದುರಿಸಬೇಕಾಯಿತು. ಆಗ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿತ್ತು. ನಾವೆಲ್ಲ ಕಲಬುರ್ಗಿಯವರ ಬೆಂಬಲಕ್ಕೆ ನಿಂತಾಗ, ಅವರು ಕೊಂಚ ದಿಟ್ಟತನದಿಂದ ಮಾತನಾಡಿದರು. ಕೊನೆಯವರೆಗೂ ಅದನ್ನು ಉಳಿಸಿಕೊಳ್ಳಲು ಆಗಲಿಲ್ಲ.

‘ಮಾರ್ಗ’ ಪ್ರಕರಣದಲ್ಲಿ ಚಂಪಾ, ಸಿದ್ದನಗೌಡ ಪಾಟೀಲ, ಸಿದ್ದಲಿಂಗ ಪಟ್ಟಣಶೆಟ್ಟಿ ಮುಂತಾದ ಗೆಳೆಯರು ಕಲಬುರ್ಗಿಯವರ ಬೆಂಬಲಕ್ಕೆ ನಿಂತರು. ಆದರೂ ಮೂಲಭೂತವಾದಿ ಮಠಾಧೀಶರಿಂದ ಕಲಬುರ್ಗಿಯವರು ಎಂತಹ ಒತ್ತಡ ಎದುರಿಸಿದರು ಎಂದರೆ ಅವರು ಕ್ಷಮೆಯಾಚಿಸುವ ಸನ್ನಿವೇಶ ನಿರ್ಮಾಣವಾಯಿತು. ಈ ಬಗ್ಗೆ ಚಂಪಾ ತಮ್ಮ ಲೇಖನದಲ್ಲಿ ವಿವರವಾಗಿ ಬರೆದಿದ್ದಾರೆ.

ಕಲಬುರ್ಗಿಯವರಿಗೆ ಸಮಾಜದ ಮೂಲಭೂತವಾದಿ ಶಕ್ತಿಗಳ ಬಗ್ಗೆ, ಅದರಲ್ಲೂ ಪುರೋಹಿತಶಾಹಿಗಳ ಬಗ್ಗೆ ತೀವ್ರ ಆಕ್ರೋಶವಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ, ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯ ಪ್ರಸ್ತಾಪವೊಂದು ಕೋಲಾಹಲ ಉಂಟು ಮಾಡಿತ್ತ್ತು. ಆಗ ಕಲಬುರ್ಗಿ ಅವರು ಬೆಂಗಳೂರಿನಲ್ಲಿದ್ದ ನನಗೆ ಫೋನ್ ಮಾಡಿ, ಪುರೋಹಿತರನ್ನು ಸೃಷ್ಟಿಸುವ ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಾಪನೆ ಹೇಗಾದರೂ ಮಾಡಿ ತಡೆಯಬೇಕು. ಅದಕ್ಕಾಗಿ ಸಹಿ ಸಂಗ್ರಹ ಮಾಡಬೇಕು ಎಂದು ಹೇಳಿದ್ದರು. ಆದರೆ ನಾವೇನೆ ವಿರೋಧ ಮಾಡಿದರೂ ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಾಪನೆ ತಡೆಯಲು ಸಾಧ್ಯವಾಗಲಿಲ್ಲ. ಆಗ ಮತ್ತೆ ಕಲಬುರ್ಗಿ ಫೋನ್ ಮಾಡಿದ್ದರು. ಆಗ ನಾನು, ಬಿಜೆಪಿ ಕೈಯಲ್ಲಿ ರಾಜ್ಯಾಧಿಕಾರ ಕೊಟ್ಟು ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಬಾರದೆಂದು ಹೇಳಿದರೆ, ಹೇಗೆ ಸಾಧ್ಯವಾಗುತ್ತದೆ ಸರ್ ಎಂದು ಪ್ರಶ್ನಿಸಿದ್ದೆ. ಕಲಬುರ್ಗಿ ಅವರು ತುಂಬಾ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ ಉತ್ತರ ಕರ್ನಾಟಕದ ಲಿಂಗಾಯತರು ಬಿಜೆಪಿಗೆ ಮತ ಹಾಕಿರದಿದ್ದರೆ, ಮನುವಾದಿ ಶಕ್ತಿಗಳು ಹೀಗೆ ವಿಜೃಂಭಿಸಲು ಸಾಧ್ಯವಾಗುತ್ತಿರಲಿಲ್ಲ. ಕಲಬುರ್ಗಿ ಅವರು ಸೇವೆಯಿಂದ ನಿವೃತ್ತರಾದರೂ ಅವರ ಸಂಶೋಧನಾ ಕಾರ್ಯಕ್ಕೆ ನಿವೃತ್ತಿ ಎಂಬುದು ಇರಲಿಲ್ಲ. ನಿವೃತ್ತಿ ನಂತರವೂ ಕನ್ನಡ-ಸಂಸ್ಕೃತಿ ಇಲಾಖೆಗೆ ವಚನ ಸಾಹಿತ್ಯ ಸಂಪುಟವನ್ನು ಅವರು ಸಿದ್ಧಪಡಿಸಿಕೊಟ್ಟರು. ಪ್ರಗತಿಪರ ಮಠವೆಂದು ಹೆಸರಾದ ಗದುಗಿನ ತೋಂಟದಾರ್ಯ ಮಠದ ಸಾರಥ್ಯವನ್ನು ಅವರು ವಹಿಸಿದ್ದರು. ಲಿಂಗಾಯಿತ ಧರ್ಮದ ಬಗ್ಗೆ ಅವರಿಗೆ ವಿಪರೀತ ಅಭಿಮಾನವಿತ್ತು. ಆದರೆ ಲಿಂಗಾಯಿತವೇ ಕರ್ನಾಟಕದ ಮೊದಲ ಧರ್ಮ. ಉಳಿದ ಧರ್ಮಗಳೆಲ್ಲ, ಹೊರಗಿನಿಂದ ವಲಸೆ ಬಂದವುಗಳು ಎಂಬ ಅವರ ವಾದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಕಲಬುರ್ಗಿ ಅವರು ಒಂದೆರಡು ಬಾರಿ ಆಗ ಫೋನ್ ಮಾಡಿದ್ದರು. ಬಸವರಾಜ ಕಟ್ಟೀಮನಿಯವರ ಎಲ್ಲಾ ಪುಸ್ತಕ ಮರುಮುದ್ರಿಸಬೇಕು ಎಂಬ ಯೋಜನೆ ರೂಪಿಸಿದ್ದ ಅವರು ಅದಕ್ಕಾಗಿ ಕಟ್ಟೀಮನಿ ಬರೆದ ಪುಸ್ತಕಗಳನ್ನು ಸಂಗ್ರಹಿಸತೊಡಗಿದ್ದರು. ಆದರೆ ಕಟ್ಟೀಮನಿಯವರು ಬರೆದ ರಷ್ಯಾದ ಕ್ರಾಂತಿ ನಾಯಕ ಲೆನಿನ್ ಪುಸ್ತಕ ಅವರಿಗೆ ಸಿಕ್ಕಿರಲಿಲ್ಲ. ಅದಕ್ಕಾಗಿ ಅವರು ಕೆಲ ಬಾರಿ ಫೋನ್ ಮಾಡಿದ್ದರು. ಆದರೆ ನನ್ನ ಬಳಿಯಿದ್ದ ಪುಸ್ತಕವನ್ನು ಯಾರೋ ತೆಗೆದುಕೊಂಡು ಹೋಗಿ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದೆ.

80ರ ದಶಕದಲ್ಲಿ ಮಾರ್ಗ ಬರೆದಾಗ ಮಠಾಧೀಶರ ಒತ್ತಡಕ್ಕೆ ಒಳಗಾಗಿ ರಾಜಿ ಮಾಡಿಕೊಂಡಿದ್ದ ಕಲಬುರ್ಗಿ ಅವರು ಬದುಕಿನ ಕೊನೆಯ ದಿನಗಳಲ್ಲಿ ಪ್ರಾಣ ಹೋದರೆ ಹೋಗಲಿ, ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ತೀರ್ಮಾನಿಸದಂತಿತ್ತು. ಅಂತಲೇ ಅವರು ಮನುವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ದಾಳಿ ಆರಂಭಿಸಿದ್ದರು. ದೇವರ ಮೂರ್ತಿ ಮೇಲೆ ಬಾಲಕನಾಗಿದ್ದಾಗ, ಮೂತ್ರ ಮಾಡಿದ್ದ ಬಗ್ಗೆ ಅನಂತಮೂರ್ತಿಯವರು ರೂಪಕಾತ್ಮವಾಗಿ ಆಡಿದ ಮಾತುಗಳನ್ನು ಉಲ್ಲೇಖಿಸಲು ಹೋಗಿ ಕಲಬುರ್ಗಿಯವರು ವಿವಾದವನ್ನು ಮೈಮೇಲೆ ಎಳೆದುಕೊಂಡರು. ಇದನ್ನೇ ಕಾಯುತ್ತಿದ್ದ ಮಾಧ್ಯಮಗಳಲ್ಲಿನ ಜುಟ್ಟು, ಜನಿವಾರಗಳು ವಿವಾದ ಸೃಷ್ಟಿಸಿದವು. ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಐದಾರು ಊರುಗಳಲ್ಲಿ ಖಟ್ಲೆ ಹಾಕಲಾಯಿತು. ಈ ಕೇಸುಗಳಿಗೆ ಓಡಾಡಿ, ಕಲಬುರ್ಗಿ ಸುಸ್ತಾದಂತೆ ಕಾಣುತ್ತಿದ್ದರು.

ಇದೇ ರೀತಿ ದೇಶದ ವಿವಿಧ ಊರುಗಳಲ್ಲಿ ಕೇಸು ಹಾಕಿ ಖ್ಯಾತ ಕಲಾವಿದ ಎಂ.ಎಫ್.ಹುಸೈನ್ ದೇಶ ಬಿಟ್ಟು ಹೋಗುವಂತೆ ಮಾಡಿದ ದುಷ್ಟಶಕ್ತಿಗಳು ಕಲಬುರ್ಗಿಯವರ ಮೇಲೆ ಕೆಂಡ ಕಾರಲು ಅವರಾಡಿದ ಮಾತೊಂದೇ ಕಾರಣವಾಗಿರಲಿಲ್ಲ. ತಮ್ಮ ಕೊನೆಯ ದಿನಗಳಲ್ಲಿ ಹಿಂದೂ ಎಂಬುದು ಧರ್ಮವೇ ಅಲ್ಲ. ಲಿಂಗಾಯತರು ಹಿಂದೂಗಳಲ್ಲ ಎಂದು ಪ್ರತಿಪಾದಿಸುತ್ತಿದ್ದ ಕಲಬುರ್ಗಿ ಅವರನ್ನು ಕಂಡರೆ, ಫ್ಯಾಶಿಸ್ಟರಿಗೆ ಆಗುತ್ತಿರಲಿಲ್ಲ. ಕಲಬುರ್ಗಿ ಅವರು ಇಷ್ಟಕ್ಕೆ ಸುಮ್ಮನಿರಲಿಲ್ಲ. ಜನಗಣತಿ ಕಾಲಂನಲ್ಲಿ ಹಿಂದೂ ಧರ್ಮ ಎಂಬ ಶಬ್ಧ ತೆಗೆದು ಹಾಕುವಂತೆ ಮುಖ್ಯಮಂತ್ರಿಯವರನ್ನು ಮತ್ತು ಮುಖ್ಯಮಂತ್ರಿ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಅವರಿಗೂ ಪತ್ರ ಬರೆದು ಒತ್ತಾಯಿಸಿದ್ದರು.

ಇಂತಹ ಕಲಬುರ್ಗಿಯವರ ಹಣೆಗೆ ಗುಂಡು ಹಾಕಿದ ಆ ದಿನ ನನಗೆ ಚೆನ್ನಾಗಿ ನೆನಪಿದೆ. ಟಿವಿಯಲ್ಲಿ ಸುದ್ದಿ ನೋಡುತ್ತಲೇ, ಹುಬ್ಬಳ್ಳಿ-ಧಾರವಾಡದ ನನ್ನ ಗೆಳೆಯರಿಗೆ ಫೋನ್ ಮಾಡಿದೆ. ಅಷ್ಟರಲ್ಲಿ ಯಾವ ಪರಿ ವದಂತಿ ಹರಡಿಸಲಾಗಿತ್ತು ಎಂದರೆ, ಕಲಬುರ್ಗಿಯವರ ಕೊಲೆಗೆ ಅವರ ಕೌಟುಂಬಿಕ ಕಲಹವೇ ಕಾರಣ. ಅವರ ಮಗಳನ್ನು ಗಂಡನ ಮನೆಗೆ ಕಳುಹಿಸಲಿಲ್ಲ ಎಂದೆಲ್ಲ ಕತೆ ಕಟ್ಟಲಾಗಿತ್ತು. ಕೊನೆಗೆ ಅವರ ಮಗಳು ಹೇಳಿಕೆ ನೀಡಿ, ಇದನ್ನು ನಿರಾಕರಿಸಿದರು. ಆಸ್ಪತ್ರೆಯಲ್ಲಿ ಕಲಬುರ್ಗಿಯವರು ಕೊನೆಯುಸಿರು ಎಳೆಯುತ್ತಿರುವಾಗ, ಹಣೆಗೆ ಗುಂಡು ಬಡಿದ ಅರ್ಧ ಗಂಟೆಯಲ್ಲಿ ಈ ರೀತಿ ಪ್ರಚಾರ ಮಾಡಿದವರು ಯಾರು? ಸೈದ್ಧಾಂತಿಕ ಕಾರಣಕ್ಕಾಗಿ ಕೊಲೆ ಮಾಡಿದ ಹಂತಕರಿಗೂ, ವದಂತಿ ಹರಡಿದವರಿಗೂ ಸಂಬಂಧವಿತ್ತೇ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಏಕೆಂದರೆ, ಕೆಲ ಎಡಪಂಥೀಯರ ಬಾಯಲ್ಲೂ ಕೂಡ ಇಂತಹದ್ದೇ ಮಾತು ಕೇಳಿ ದಿಗಿಲುಗೊಂಡೆ. ಕೊಲ್ಲಾಪುರದ ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಹಿಂದೂ ಮತಾಂಧರ ಗುಂಡಿಗೆ ಬಲಿಯಾದಾಗಲೂ ನಿಜವಾದ ಹಂತಕರನ್ನು ರಕ್ಷಿಸಲು ಪನ್ಸಾರೆ ಕೊಲೆ ಹಿಂದೆ ಟೋಲ್ ಮಾಫಿಯಾ ಕೈವಾಡವಿದೆಯೆಂದು ವದಂತಿ ಹಬ್ಬಿಸಲಾಗಿತ್ತು. ದಾಭೋಲ್ಕರ್ ಹತ್ಯೆಯಾದಾಗಲೂ ಇದೇ ರೀತಿ ಕಟ್ಟು ಕತೆ ಕಟ್ಟಲಾಗಿತ್ತು. ಆದರೆ ಇವರಿಬ್ಬರನ್ನು ಕೊಂದವರು ಹಿಂದೂ ಮೂಲಭೂತವಾದಿ ಸಂಘಟನೆಯ ಹಂತಕರು ಎಂಬುದು ನಂತರ ಬಯಲಿಗೆ ಬಂತು.

ಇಂತಹ ಕಲಬುರ್ಗಿ ಗುಂಡಿಗೆ ಬಲಿಯಾಗಿ ಒಂದು ವರ್ಷವಾಯಿತು. ಹಂತಕರನ್ನು ಪತ್ತೆ ಮಾಡುವಲ್ಲಿ ಸರಕಾರ ಯಶಸ್ವಿಯಾಗಿಲ್ಲ. ಈ ಹತ್ಯೆ ನಂತರವೂ ಕರ್ನಾಟಕದಲ್ಲಿ ಮತಾಂಧ ಮೂಲಭೂತವಾದಿ ಶಕ್ತಿಗಳ ಹಾವಳಿ ಕಡಿಮೆಯಾಗಿಲ್ಲ. ರಾಷ್ಟ್ರಪ್ರೇಮ ಗುತ್ತಿಗೆ ಹಿಡಿದಂತೆ ಮಾತನಾಡುವ ಈ ಶಕ್ತಿಗಳು ದನ ಸಾಗಾಟದ ಹೆಸರಿನಲ್ಲಿ ಕರಾವಳಿಯಲ್ಲಿ ಒಬ್ಬ ಯುವಕನನ್ನು ಕೊಲೆ ಮಾಡಿವೆ. ಇನ್ನೂ ಕಳವಳ ಪಡಬೇಕಾದ ವಿಷಯವೆಂದರೆ, ಕಲಬುರ್ಗಿಯವರ ಹತ್ಯೆ ಬಗ್ಗೆ ಹೊಸ ಪೀಳಿಗೆ ಯುವಕರನ್ನು ಮಾತನಾಡಿಸಿದರೆ, ಹಿಂದೂ ದೇವರ ಬಗ್ಗೆ ಕಲಬುರ್ಗಿಯವರು ಹಾಗೆ ಮಾತನಾಡಿದ್ದರಿಂದ ಹತ್ಯೆಯಾಯಿತು ಎಂದು ಸಮರ್ಥನೆಯ ಮಾತುಗಳು ಕೇಳಿ ಬರುತ್ತವೆ. ಕೋಮುವಾದಿ ಶಕ್ತಿಗಳು ಈ ಪರಿ ಯುವಕರ ಬ್ರೈನ್ ವಾಶ್ ಮಾಡಿದ್ದಾರೆ. ತಮ್ಮ ಸಮುದಾಯದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಉತ್ತರ ಕರ್ನಾಟಕದ ಲಿಂಗಾಯತರು ಮತ್ತೆ ಬಿಜೆಪಿಯನ್ನು ಗೆಲ್ಲಿಸಲು ಕಾತರರಾಗಿದ್ದಾರೆ. ದೇವರ ಬಗ್ಗೆ ಟೀಕಿಸದಿದ್ದರೆ ಕೊಲೆಯಾಗುತ್ತಿರಲಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆ ನಾಯಕರು ಯಾವ ಹೆದರಿಕೆಯೂ ಇಲ್ಲದೆ ಮತ್ತೆ ಪ್ರಚೋದನಾಕಾರಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ತಾನು ಮುಖ್ಯಮಂತ್ರಿಯಾಗುವುದು ಯಾವಾಗ ಎಂದು ಜ್ಯೋತಿಷಿಗಳ ಮುಂದೆ ಅಡ್ಡ ಬೀಳುವ ಇಂದಿನ ಗೃಹಮಂತ್ರಿಗಳ ಬಳಿಯೂ ಕಲಬುರ್ಗಿ ಹಂತಕರ ಬಂಧನ ಯಾವಾಗ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಧಾರವಾಡದ ಜನ ಸುಮ್ಮನೆ ಕೂತಿಲ್ಲ. ಉತ್ತರ ಕರ್ನಾಟಕದ ದಿಟ್ಟ ಜನಪರ ಹೋರಾಟಗಾರ ಬಸವರಾಜ ಸೂಳಿಬಾವಿ ಆಗಸ್ಟ್ 30ರಂದು ಧಾರವಾಡದಲ್ಲಿ ರಾಷ್ಟ್ರಮಟ್ಟದ ಬೃಹತ್ ರ್ಯಾಲಿ ಸಂಘಟಿಸಿದ್ದಾರೆ. ಹಿಂದೆ ಬಾಗಲಕೋಟೆಯಲ್ಲಿ ಪ್ರಮೋದ ಮುತಾಲಿಕ್ ತ್ರಿಶೂಲ್ ದೀಕ್ಷೆ ವಿರುದ್ಧ ಬಂದೂಕು ದೀಕ್ಷೆ ನೀಡಲು ಕಾರ್ಯಕ್ರಮ ರೂಪಿಸಿದ್ದ, ಅದಕ್ಕಾಗಿ ಜೈಲಿಗೆ ಹೋಗಿ ಬಂದಿದ್ದ ಸೂಳಿಬಾವಿ ಈ ಬಾರಿ ಮತಾಂಧ ಶಕ್ತಿಗಳನ್ನು ಎದುರು ಹಾಕಿಕೊಂಡಿದ್ದಾರೆ.

ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಈ ಮೂವರು ಮಹಾನ್ ಚೇತನಗಳ ಹತ್ಯೆ ನಂತರವೂ ದೇಶದಲ್ಲಿ ನೆಮ್ಮದಿ ವಾತಾವರಣ ನಿರ್ಮಾಣವಾಗಿಲ್ಲ. ಗೋರಕ್ಷಣೆ ಹೆಸರಿನಲ್ಲಿ ಕಗ್ಗೊಲೆಗಳು ನಡೆಯುತ್ತಿವೆ. ಪಾಕಿಸ್ತಾನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ನಟಿ ರಮ್ಯಾ ಮೊಟ್ಟೆ ಏಟು ತಿನ್ನಬೇಕಾಗಿ ಬಂದಿದೆ. ಆಕೆಯ ಪರವಾಗಿ ಧ್ವನಿಯೆತ್ತಬೇಕಾದ, ಆಕೆಯ ಪಕ್ಷದವರು ತೆಪ್ಪಗೆ ಕೂತಿದ್ದಾರೆ.

ನಮ್ಮ ದೇಶದಲ್ಲಿ ದೇಶಭಕ್ತ್ತಿ ಎಂಬುದು ಕೊಲೆಗಡುಕರ, ಪಟಿಂಗರ ಕೊನೆಯ ಆಶ್ರಯತಾಣ. ಧರ್ಮ ಮತ್ತು ರಾಷ್ಟ್ರೀಯತೆ ಹೆಸರಿನಲ್ಲಿ ಮಾಡಬಾರದ್ದನ್ನು ಮಾಡಿ ರೋಲ್‌ಕಾಲ್ ಮಾಡುವ ಇಂತಹ ಶಕ್ತಿಗಳ ಬಗ್ಗೆ ಕೇಂದ್ರ ಸರಕಾರ ಮೃದು ಧೋರಣೆ ಹೊಂದಿದೆ. ಯಾಕೆಂದರೆ, ತನ್ನ ಎರಡು ವರ್ಷಗಳ ಆಡಳಿತ ವೈಫಲ್ಯದಿಂದ ಯುವಕರು ಸಿಡಿದೇಳಬಾರದು. ಅದಕ್ಕಾಗಿ ಅವರನ್ನು ದಾರಿ ತಪ್ಪಿಸಲು ಇಂತಹ ದಂಗೆಕೋರ ಗುಂಪುಗಳು ಕೇಂದ್ರಕ್ಕೆ ಬೇಕಾಗಿವೆ. ಇದು ಇಂದಿನ ಸ್ಥಿತಿ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಈಗ ನಮ್ಮ ನಡುವೆ ಇಲ್ಲ. ಆದರೆ ಅವರ ಆಶಯಗಳು ಜೀವಂತವಾಗಿವೆ. ಮುಂದಿನ ಪೀಳಿಗೆ ಅವುಗಳನ್ನು ಜೋಪಾನವಾಗಿ ಸಾಗಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News