ನಮ್ಮ ಕ್ರೀಡಾಪಟುಗಳನ್ನು ದೂಷಿಸದಿರಿ

Update: 2016-08-29 18:46 GMT

ದೇಶದಲ್ಲಿ ಕ್ರೀಡಾ ಅಭಿವೃದ್ದಿಗಾಗಿ ಇರುವ ಕ್ರೀಡಾ ಹಾಸ್ಟೆಲ್‌ಗಳು, ತರಬೇತಿ ಕೇಂದ್ರಗಳ ಕಾರ್ಯ ವೈಖರಿ ಬಗೆಗೆ, ಭ್ರಷ್ಟಾಚಾರದ ಬಗೆಗೂ ಟೀಕೆಗಳಿವೆ. ಇವುಗಳಲ್ಲಿ ವೃತ್ತಿ ನಿರತರು ಮತ್ತು ಅನುಭವಿಗಳಿಗಿಂತ ರಾಜಕಾರಣಿಗಳು ಮತ್ತು ಅವರ ಒಡ್ಡೋಲಗವೇ ಹೆಚ್ಚು ಎನ್ನುವ ಆರೋಪವೂ ಇದೆ. ಕ್ರೀಡಾ ಮ್ಯಾನೇಜ್‌ಮೆಂಟ್ ವೈಫಲ್ಯವೂ ಎದ್ದು ಕಾಣುತ್ತಿದೆ. ಕೂಟದಲ್ಲಿ ಪದಕಗಳನ್ನು ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಮುಖ್ಯ ಎನ್ನುವ ಮಾತು ನಮ್ಮ ದೇಶದ ದೃಷ್ಟಿಯಲ್ಲಿ ಸಾರ್ಥಕತೆ ಕಂಡಿದೆ. ಆದರೆ, ಇದಕ್ಕೆ ಕ್ರೀಡಾಪಟುಗಳು ಕಾರಣರಲ್ಲ ಎನ್ನುವುದೂ ಅಷ್ಟೇ ಸತ್ಯ.

ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ನಿರೀಕ್ಷಿಸಿದ ಸಾಧನೆ ಮಾಡದಿರುವುದಕ್ಕಾಗಿ, ನಮ್ಮ ಕೆಲವು ಬುದ್ಧಿ ಜೀವಿಗಳು, ಸೆಲೆಬ್ರಿಟಿಗಳು ನಮ್ಮ ಕ್ರೀಡಾ ಪಟುಗಳನ್ನು ಲಘುವಾಗಿ, ಹೀನಾಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಪಟುಗಳ ಮನೋಸ್ಥೈರ್ಯವನ್ನು ಕುಗ್ಗಿಸುವಂಥ ಜೋಕುಗಳು ಹರಿದಾಡುತ್ತಿವೆ. ಕ್ರೀಡಾಭಿಮಾನಿಗಳು ಮತ್ತು ಕೆಲವು ಮಾಧ್ಯಮದವರು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಸ್ಸಂದೇಹವಾಗಿ ಪ್ರತಿಯೊಬ್ಬ ಭಾರತೀಯನೂ ನೊಂದಿದ್ದಾನೆ. ಇದು ಸತ್ಯ. ನೂರಮೂವತ್ತು ಕೋಟಿ ಜನಸಂಖ್ಯೆಯ ದೇಶಕ್ಕೆ ಕೇವಲ ಎರಡು ಪದಕಗಳು ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟ ಸಾಧ್ಯ. ಆಕಸ್ಮಾತ್ ಹತ್ತಾರು ಪದಕಗಳು ದೊರಕಿದ್ದರೆ, ಭುಜ ತಟ್ಟಿಕೊಳ್ಳಲು ಉದ್ದ ಕ್ಯೂ ಇರುತ್ತಿತ್ತು. ಸೋಲಿಗೆ ಇಂದು ಕೇವಲ ಸ್ಪರ್ಧಿಗಳು ಮಾತ್ರ ಹೊಣೆ.

 ಅಪಾರ ಪದಕ ಗಳಿಸುವ ಇತರ ದೇಶಗಳಂತೆ ಭಾರತದಲ್ಲಿ ಕ್ರೀಡೆ ವೃತ್ತಿಯಲ್ಲ. ಇದು ಕೇವಲ ಹವ್ಯಾಸ. ಮೊದಲು ಪಾಠ, ಆಮೇಲೆ ವೇಳೆ ಇದ್ದರೆ ಆಟ ಎನ್ನುವುದು ನಮ್ಮ ಮಂತ್ರ. ಹೆಸರಿನ ಮುಂದೆ ಒಂದು ಡಿಗ್ರಿ ಇಲ್ಲದಿದ್ದರೆ ಬದುಕು ವ್ಯರ್ಥ. ಭವಿಷ್ಯಕ್ಕೊಂದು ಉದ್ಯೋಗ, ತಲೆ ಮೇಲೊಂದು ಸೂರು, ಇವು ಪ್ರತಿಯೊಬ್ಬ ಭಾರತೀಯನ ಜೀವನದ ಗುರಿ. ಇವುಗಳಿಗೆ ಭದ್ರತೆ ದೊರಕಿದ ಮೇಲೆಯೇ ಬೇರೆ ವಿಷಯಗಳತ್ತ ಲಕ್ಷ. ಶಾಲೆ ಕಾಲೇಜುಗಳಲ್ಲಿ ಕೂಡಾ ದಿನದ ಕೊನೆ ಪಿರಿಯಡ್‌ನಲ್ಲಿ ‘ಆಟ’ ಇರುತ್ತದೆ. ಬಹುತೇಕ ಶಾಲೆ ಕಾಲೇಜುಗಳಲ್ಲಿ ಆಟದ ಮೈದಾನ ಕೇವಲ ನೆಪಮಾತ್ರಕ್ಕೆ ಅಥವಾ ಲೈಸೆನ್ಸಿಂಗ್ ಅಥಾರಿಟಿಯ ನಿರ್ದೇಶನಗಳನ್ನು ಮತ್ತು ಕಟ್ಟು ಪಾಡುಗಳನ್ನು ಪೂರೈಸಲು ಮಾತ್ರ. ಆವಶ್ಯಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಗ್ರಾಮಾಂತರ ಶಾಲೆ ಕಾಲೇಜುಗಳಲ್ಲಿ ಪಾಠದ ನಂತರ ಮನೆ ತಲುಪುವುದೇ ಸಾಹಸವಾಗಿರುವುದರಿಂದ, ಅವರಿಗೆ ಕ್ರೀಡೆ ಬಹುದೂರವಾಗಿರುತ್ತದೆ.

ಭಾರತದಲ್ಲಿ ಇಂದು ಕ್ರಿಕೆಟ್ ಮತ್ತು ಟೆನಿಸ್ ಬಿಟ್ಟರೆ, ಯಾವುದೇ ಕ್ರೀಡೆಯಿಂದಲೂ ಹೊಟ್ಟೆ ತುಂಬುವುದಿಲ್ಲ. ‘ಏಕ್ ದಿನ್ ಕಾ ಸುಲ್ತಾನ’ ಎನ್ನುವಂತೆ, ಪ್ರಶಸ್ತಿ ಮತ್ತು ಪದಕ ಪಡೆದ ಒಂದೆರಡು ದಿನ ಮಾತ್ರ ನೆನಪಿನಲ್ಲಿ ಇರುತ್ತಾರೆ. ಮಾಧ್ಯಮ ಕೂಡಾ ಕ್ರಿಕೆಟ್ ಮತ್ತು ಟೆನಿಸ್‌ಗೆ ನೀಡಿದ ಶೇ. 10ರಷ್ಟು ಪ್ರಚಾರವನ್ನು ಉಳಿದ ಕ್ರೀಡೆಗೆ ನೀಡುವುದಿಲ್ಲ. ಕ್ರಿಕೆಟ್ ಕೋಚ್‌ನ ಸಂಬಳ ವಾರ್ಷಿಕ 6.25 ಕೋಟಿ. ಉಳಿದ ಎಲ್ಲಾ ಕ್ರೀಡೆಗಳ ಕೋಚ್‌ಗಳ ಸಂಬಳ ಒಟ್ಟುಗೂಡಿಸಿದರೆ ಈ ಮೊತ್ತ ಮೀರಲಾರದೇನೊ. ಪ್ರಶಸ್ತಿ ಮತ್ತು ಪದಕ ಪಡೆದ ಕ್ರೀಡಾಪಟುಗಳು ಎರಡು ಹೊತ್ತಿನ ಊಟಕ್ಕಾಗಿ ಬೀದಿ ಬದಿ ಹೊಟೇಲ್ ನಡೆಸುವ, ರಿಕ್ಷಾ ನಡೆಸುವ, ಸೈಕಲ್ ರಿಪೇರಿ ಅಂಗಡಿ ನಡೆಸುವ ಮತ್ತು ರದ್ದಿ ಮಾರುವ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿರುತ್ತವೆ. ಕೆಲವರು ತಮ್ಮ ಪದಕಗಳನ್ನು ಮಾರುಕಟ್ಟೆಯಲ್ಲಿ ಮಾರಲು ಮುಂದಾದ ಉದಾರಣೆಗಳಿವೆ. ಮೊದಲು ಗೇಣುದ್ದ ಹೊಟ್ಟೆಯ ಬಗೆಗೆ ಮತ್ತು ತನ್ನನ್ನು ಅವಲಂಬಿಸಿದವರ ಕನಿಷ್ಠ ಆವಶ್ಯಕತೆಗಳು ತೀರಿದ ಮೇಲೆಯೇ ಕ್ರೀಡಾಪಟು ಮೈದಾನಕ್ಕಿಳಿಯುವುದು. ವಿದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪದಕ ಗೆಲ್ಲುತ್ತಿರುವ ದೇಶಗಳಲ್ಲಿ ಕ್ರೀಡೆ ಒಂದು ವೃತ್ತಿಯಾಗಿದ್ದು, ಅವರಿಗೆ ಸರಕಾರದಿಂದ ಮತ್ತು ಸಂಘ ಸಂಸ್ಥೆಗಳಿಂದ ಕ್ರೀಡಾಪಟುಗಳಿಗೆ ಸಂಬಳ ಸೌಲಭ್ಯ ದೊರಕುತ್ತದೆ ಮತ್ತು ಮೈದಾನ ತೊರೆದ ಮೇಲೂ ಸಾಧನೆಯ ಮೇಲೆ ಸಹಾಯ ಮುಂದುವರಿಯುತ್ತದೆ.ಆದರೆ ನಮ್ಮಲ್ಲಿ ಕ್ರಿಕೆಟ್‌ನ ಬಗ್ಗೆ ಇರುವ ಅತಿ ವ್ಯಾಮೋಹ ನಮ್ಮ ಉಳಿದ ಕ್ರೀಡೆಗಳನ್ನೇ ನುಂಗಿಹಾಕಿದೆ.

    ವಿದೇಶಗಳಲ್ಲಿ ಪ್ರಚಲಿತವಿರುವ, ಬಾಲ್ಯದ ಆರಂಭದ ವರ್ಷಗಳಲ್ಲಿ ಪ್ರತಿಭೆಯನ್ನು ಗುರುತಿಸಿ ಅಯ್ಕೆ ಮಾಡುವ ಮತ್ತು ಅವರಲ್ಲಿ ಪದಕಗಳನ್ನು ಗೆಲ್ಲುವ ಬಗೆಗೆ ಸ್ಫೂರ್ತಿಯನ್ನು ತುಂಬುವ ಪದ್ಧ್ದತಿ ನಮ್ಮಲ್ಲಿಲ್ಲ. ಅಗತ್ಯ ಮೂಲಭೂತ ಸೌಕರ್ಯಗಳು ಮತ್ತು ದೇಹ ದಾರ್ಢ್ಯತೆ ಕೂಡಾ ಅಪರೂಪ. ಕೊನೆ ಗಳಿಗೆಯಲ್ಲಿ ಗುರಿ ಮುಟ್ಟುವ ಛಲ ಬಹುತೇಕ ಸಂದರ್ಭಗಳಲ್ಲಿ ಕಾಣುವುದಿಲ್ಲ. ಅತ್ಯಾಧುನಿಕ ತರಬೇತಿ ಸೌಲಭ್ಯ ಮತ್ತು ಆಹಾರದ ಸಮೀಕರಣದ ಕೊರತೆ ಇದೆ. ಸಂಸ್ಥೆಗಳ ಸಹಾಯ ಕಡಿಮೆ ಕಾಣುತ್ತಿದೆ. ಅಭಿನವ ಬಿಂದ್ರರ ಸಫಲತೆಯ ಹಿಂದೆ ಅವರ ಸ್ವಂತ ಖರ್ಚು ಮತ್ತು ಶ್ರಮವನ್ನು ಕಾಣಬಹುದು. ಅದು ಎಲ್ಲರಿಗೂ ಸಾಧ್ಯವೇ? ಬಹುತೇಕ ವಿದೇಶಿ ಕ್ರೀಡಾಪಟುಗಳು ಮಾಂಸಾಹಾರಿಗಳಾಗಿದ್ದು, ಪ್ರೊಟೀನ್ ರಹಿತ ನಮ್ಮ ಸಸ್ಯಾಹಾರ, ಸಾಧನೆಗೆ ತೊಡಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೂ ಮಿಗಿಲಾಗಿ ನಮ್ಮ ಕಳಪೆ ಸಾಧನೆಯ ಹಿಂದೆ ತರಬೇತಿಯ ಕೊರತೆ ಎದ್ದು ಕಾಣುತ್ತಿದೆ. ಸಂತೆಯ ದಿನ ಮೂರು ಮೊಳ ನೇಯ್ದಂತೆ, ಕ್ರೀಡಾ ಕೂಟ ನಾಲ್ಕಾರು ತಿಂಗಳು ಇರುವಾಗ ನಮ್ಮ ಅಯ್ಕೆ, ತರಬೇತಿ ಮತ್ತು ಸಿದ್ಧತೆಗಳು ಆರಂಭವಾಗುತ್ತವೆ. ವಿದೇಶಗಳಲ್ಲಿ ಕ್ರೀಡಾಕೂಟ ಮುಗಿದು ಒಂದೆರಡು ದಿನ ವಿಶ್ರಾಂತಿ ಕೊಡುತ್ತಿದ್ದು, ಕೂಡಲೇ ಮುಂದಿನ ಕೂಟಕ್ಕೆ ಸಿದ್ಧತೆ ಆರಂಭವಾಗುತ್ತವೆ. ಮುಂದಿನ ಟೋಕಿಯೋ ಕೂಟಕ್ಕೆ ಇನ್ನೊಂದು ವಾರದಲ್ಲಿ ತರಬೇತಿ ಆರಂಭವಾಗುತ್ತದೆ.

  ನಮ್ಮಲ್ಲಿ ಕ್ರೀಡೆಗಾಗಿ ಸಾಕಷ್ಟು ಹಣವನ್ನು ವೆಚ್ಚ ಮಾಡಲಾಗುತ್ತದೆ. ಆದರೆ, ಇದರಲ್ಲಿ ಬಹುಪಾಲು ಕ್ರೀಡಾ ಆಡಳಿತಕ್ಕೆ ಮತ್ತು ಆಧಿಕಾರಿಗಳಿಗೆ ಹೋಗುತ್ತದೆ ಎನ್ನುವ ಆರೋಪ ಇದೆ. ಅಧಿಕಾರಿಗಳು ಬಿಜಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ, ಕ್ರೀಡಾಪಟು ಗಳು ಇಕಾನಮಿ ಕ್ಲಾಸ್‌ನಲ್ಲಿ 36 ಗಂಟೆ ಪ್ರಯಾಣ ಮಾಡಿದರು ಎನ್ನುವ ಮಾಹಿತಿ ಮಾಧ್ಯಮದಲ್ಲಿ ಕೇಳಿಬಂದಿದೆ. ರಿಯೋದಲ್ಲಿ ನಮ್ಮ ಹಾಕಿ ಆಟಗಾರರಿಗೆ ಹೊಸ ‘ಶೂ’ ಕೊನೆಗಳಿಗೆಯಲ್ಲಿ ದೊರಕಿತಂತೆ. ಕುಸ್ತಿ ಪಟುಗಳಿಗೆ ಜರ್ಕಿನ್ಸ್ ದೊರಕದೆ ಭಾಗವಹಿಸುವುದೇ ಸಂದೇಹವಾಗಿತ್ತಂತೆ. ಮ್ಯಾರಥಾನ್ ಓಟಗಾರ್ತಿ ಕುಡಿಯಲು ನೀರು ಸಿಗದೆ ಕುಸಿದು ಬಿದ್ದ ಘಟನೆ ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಅವಳು ಕುಸಿದು ಬಿದ್ದಾಗ ಅವಳನ್ನು ಎತ್ತಲು ನಮ್ಮವರು ಯಾರೂ ಇರಲಿಲ್ಲವಂತೆ.

 ದೇಶದಲ್ಲಿ ಕ್ರೀಡಾ ಅಭಿವೃದ್ದಿಗಾಗಿ ಇರುವ ಕ್ರೀಡಾ ಹಾಸ್ಟೆಲ್‌ಗಳು, ತರಬೇತಿ ಕೇಂದ್ರಗಳ ಕಾರ್ಯ ವೈಖರಿ ಬಗೆಗೆ, ಭ್ರಷ್ಟಾಚಾರದ ಬಗೆಗೂ ಟೀಕೆಗಳಿವೆ. ಇವುಗಳಲ್ಲಿ ವೃತ್ತಿ ನಿರತರು ಮತ್ತು ಅನುಭವಿಗಳಿಗಿಂತ ರಾಜಕಾರಣಿಗಳು ಮತ್ತು ಅವರ ಒಡ್ಡೋಲಗವೇ ಹೆಚ್ಚು ಎನ್ನುವ ಆರೋಪವೂ ಇದೆ. ಕ್ರೀಡಾ ಮ್ಯಾನೇಜ್‌ಮೆಂಟ್ ವೈಫಲ್ಯವೂ ಎದ್ದು ಕಾಣುತ್ತಿದೆ. ಕೂಟದಲ್ಲಿ ಪದಕಗಳನ್ನು ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಮುಖ್ಯ ಎನ್ನುವ ಮಾತು ನಮ್ಮ ದೇಶದ ದೃಷ್ಟಿಯಲ್ಲಿ ಸಾರ್ಥಕತೆ ಕಂಡಿದೆ. ಆದರೆ, ಇದಕ್ಕೆ ಕ್ರೀಡಾಪಟುಗಳು ಕಾರಣರಲ್ಲ ಎನ್ನುವುದೂ ಅಷ್ಟೇ ಸತ್ಯ. ಅವರು ಭಾಗವಹಿಸಿದ ಪರಿ ಮತ್ತು ಅವರ ಹಿನ್ನೆಲೆಯನ್ನು ಉಳಿದವರಿಗೆ ಹೋಲಿಸಿದರೆ, ಅವರ ಸಾಧನೆ ನಿಜವಾಗಿಯೂ ಉತ್ಕೃಷ್ಟ ಎನ್ನಬೇಕು.

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News