ಕಲಬುರ್ಗಿ ಹಂತಕರ ಬಂಧನಕ್ಕೆ ಕ್ರಮ: ಡಾ.ಜಿ.ಪರಮೇಶ್ವರ್

Update: 2016-08-30 12:34 GMT

ಬೆಂಗಳೂರು, ಆ. 30: ವೈಚಾರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿಯೇ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ನಡೆದಿರುವ ಅಂಶ ತನಿಖೆಯಿಂದ ಗೊತ್ತಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಲಬುರ್ಗಿ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸಿಐಡಿ ತನಿಖೆ ನಡೆಸುತ್ತಿದ್ದು, ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ ಎಂದರು.
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಬೇರೆ ಯಾವ ಪ್ರಕರಣದಲ್ಲಿಯೂ ಇಷ್ಟೊಂದು ಮಂದಿ ಅಧಿಕಾರಿಗಳನ್ನು ಬಳಸಿಕೊಂಡಿರಲಿಲ್ಲ ಎಂದ ಅವರು, ಶೀಘ್ರದಲ್ಲೆ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.
 ವಿಚಾರವಾದಿಗಳಾದ ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಗಳಿಗೂ ಹಾಗೂ ಕಲಬುರ್ಗಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆಯಿರುವುದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಪ್ರಕರಣವನ್ನು ಭೇದಿಸಲು ಸಿಬಿಐ ಜತೆ ಸಿಐಡಿ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದರು.
ಕಲಬುರ್ಗಿ ಅವರ ಕುಟುಂಬದ ಸದಸ್ಯರು ಹಾಗೂ ಪ್ರಗತಿಪರ ಸಂಘಟನೆಗಳು ಆರೋಪಿಗಳ ಪತ್ತೆ ಮಾಡುವಲ್ಲಿನ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ವರದಿಗೆ ಸೂಚನೆ: ನಿಯಮ ಉಲ್ಲಂಘಿಸಿ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆಯ ಕುರಿತು ‘ಟೀಕೆ’ ಸರಿಯಲ್ಲ ಎಂದು ಆಕ್ಷೇಪಿಸಿದ ಪರಮೇಶ್ವರ್, ಕಾನೂನಿನ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಮಹಿಳಾ ಸಿಬ್ಬಂದಿ ಮತ್ತು ಅಧಿಕಾರಿಗಳಗೆ ಮೇಲಾಧಿಕಾರಿಗಳ ಕಿರುಕುಳ ಸಂಬಂಧ ವರದಿ ನೀಡಲು ಸೂಚನೆ ನೀಡಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಭಟ್ಕಳ ಪಿಎಸ್ಸೈ ರೇವಣಿ ಅಮಾನತ್ತು ಆದೇಶದ ಬಳಿಕ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News