ಶಾಲೆಗಳಲ್ಲಿ ಪಾಸ್- ಫೇಲ್ ನಿಯಮದಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸಜ್ಜು

Update: 2016-08-31 04:17 GMT

ಹೊಸದಿಲ್ಲಿ, ಆ.31: ಭಾರತದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಸಿಂಗಾಪುರದ ಉಪಪ್ರಧಾನಿ ಥರ್ಮನ್ ಷಣ್ಮುಗನಾಥಂ ಇತ್ತೀಚೆಗೆ ವಿಚಾರ ಸಂಕಿರಣವೊಂದರಲ್ಲಿ ನೀಡಿರುವ ಹೇಳಿಕೆ ಮಾನವ ಸಂಪನ್ಮೂಲ ಸಚಿವಾಲಯವನ್ನು ಬಡಿದೆಬ್ಬಿಸಿದೆ. ಈ ಸಮಸ್ಯೆ ಪರಿಹಾರಕ್ಕೆ ಸಚಿವಾಲಯ ಮುಂದಾಗಿದ್ದು, ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮಕ್ಕೆ ಶೀಘ್ರ ತಿದ್ದುಪಡಿ ತರಲು ನಿರ್ಧರಿಸಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ ಯಾವ ವಿದ್ಯಾರ್ಥಿಯನ್ನೂ ಎಂಟನೇ ತರಗತಿವರೆಗೆ ಅನುತ್ತೀರ್ಣಗೊಳಿಸುವಂತಿಲ್ಲ ಎಂಬ ನಿಯಮದ ಬಗ್ಗೆ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಅಟಾರ್ನಿ ಜನರಲ್ ಅವರ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಶಾಸನಾತ್ಮಕ ಮಾರ್ಗದಲ್ಲಲ್ಲದೇ, ಆಡಳಿತಾತ್ಮಕ ಮಾರ್ಗದಲ್ಲಿ ಈ ನಿಯಮಾವಳಿಯನ್ನು ಹೇಗೆ ತಿದ್ದುಪಡಿ ಮಾಡಬಹುದು ಎಂದು ಸಚಿವರು ಕೇಳಿದ್ದಾರೆ ಎಂದು ಹೇಳಲಾಗಿದೆ.
ಶಿಕ್ಷಣ ಗುಣಮಟ್ಟದ ವಿಚಾರದಲ್ಲಿ ಈ ಷರತ್ತು ದೊಡ್ಡ ತಡೆಯಾಗಿ ಪರಿಣಮಿಸಿದೆ. ಹಲವು ರಾಜ್ಯಗಳು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಳೆದ ಕೆಲ ವರ್ಷಗಳಿಂದ ಈ ವಿಚಾರದಲ್ಲಿ ಒಮ್ಮತ ಮೂಡುತ್ತಿದೆ. ಈ ನಿಯಮಾವಳಿಯನ್ನು ಐದನೇ ತರಗತಿವರೆಗೆ ಮಾತ್ರ ಅನುಸರಿಸಬೇಕು. ಈ ಸಂಬಂಧ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಚಿಂತನೆ ನಡೆದಿದೆ. ಆದರೆ ಅದಕ್ಕೆ ಹೆಚ್ಚು ಸಮಯಾವಕಾಶ ಬೇಕಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.
ಕೇಂದ್ರಕ್ಕೆ ಇರುವ ದೊಡ್ಡ ಆತಂಕವೆಂದರೆ ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಬೆಂಬಲ ಸಿಗುವ ಸಾಧ್ಯತೆ ಕಡಿಮೆ ಎನ್ನುವುದು. ಆದರೆ ಈ ಬಗ್ಗೆ ಆಡಳಿತಾತ್ಮಕ ನಿರ್ಧಾರ ಕೈಗೊಂಡರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇರುವುದು ಕೇಂದ್ರಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದಾಗ್ಯೂ ಈ ಪದ್ಧತಿಯಿಂದ ಹೊರಬರುವ ಮಾರ್ಗದ ಬಗ್ಗೆ ಕೇಂದ್ರ ಗಂಭೀರ ಚಿಂತನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News