ಗಡ್ಡ ಬಿಡಲು ಅನುಮತಿ ನೀಡದ ಡಿಜಿಪಿ: ಹೈಕೋರ್ಟ್ ಮೊರೆ ಹೋದ ಕೇರಳ ಮುಸ್ಲಿಂ ಪೊಲೀಸ್ ಸಿಬ್ಬಂದಿ

Update: 2016-08-31 04:19 GMT

ತಿರುವನಂತಪುರ: ಗಡ್ಡ ಬಿಡಲು ಅವಕಾಶ ನೀಡದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಕೊಚ್ಚಿಯ ಪೊಲೀಸ್ ಅಧಿಕಾರಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ನಿರ್ಬಂಧದಿಂದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗಿದೆ ಎಂದು ಅವರು ವಾದಿಸಿದ್ದಾರೆ.
ಎರ್ನಾಕುಲಂನಲ್ಲಿರುವ ಸಶಸ್ತ್ರ ಮೀಸಲು ಪಡೆಯಲ್ಲಿರುವ ಕೆ.ರಿಯಾಝ್ ಎಂಬ ನಾಗರಿಕ ಪೊಲೀಸ್ ಅಧಿಕಾರಿ ತಮ್ಮ ಅರ್ಜಿಯಲ್ಲಿ, "ಪವಿತ್ರ ರಮಝಾನ್ ಮಾಸದಲ್ಲಿ ಗಡ್ಡ ಬೆಳೆಸಲು ಅನುಮತಿ ಕೊಟ್ಟಿದ್ದರು. ಆದರೆ ಖಾಯಂ ಆಗಿ ಅದಕ್ಕೆ ಅನುಮತಿ ಕೋರಿದಾಗ ಪೊಲೀಸ್ ಮಹಾನಿರ್ದೇಶಕರನ್ನು ಕೋರುವಂತೆ ಮೇಲಧಿಕಾರಿಗಳು ಸಲಹೆ ಮಾಡಿದರು. ಆದರೆ ಡಿಜಿಪಿ ಇದಕ್ಕೆ ನಿರಾಕರಿಸಿದರು. ಪೊಲೀಸ್ ಮ್ಯಾನ್ಯುವಲ್‌ನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂಬ ಕಾರಣ ನೀಡಿದ್ದಾರೆ" ಎಂದು ವಿವರಿಸಿದ್ದಾರೆ.
ರಿಯಾಝ್ ಸೋಮವಾರ ನ್ಯಾಯಾಲಯದ ಮೊರೆ ಹೋಗಿದ್ದು, ಈ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ, ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಮೀಸಲು ಪೊಲೀಸ್ ಪಡೆಯ ಅಧೀಕ್ಷಕರಿಗೆ ನೋಟಿಸ್ ನೀಡಿದೆ.
ಪೊಲೀಸ್ ಮ್ಯಾನ್ಯುವಲ್‌ನಲ್ಲಿ, ಗಡ್ಡ ನಿಷೇಧಿಸುವ ಬಗ್ಗೆ ಕೂಡಾ ಯಾವುದೇ ಉಲ್ಲೇಖ ಇಲ್ಲ ಎಂದು ಅವರು ವಾದಿಸಿದ್ದಾರೆ. ಆದರೆ ಡಿಜಿಪಿ ಅವಕಾಶ ನಿರಾಕರಿಸುವ ಮೂಲಕ ಸಂವಿಧಾನದತ್ತವಾದ ಮೂಲಭೂತ ಹಕ್ಕನ್ನು ನಿರಾಕರಿಸಿದಂತಾಗಿದೆ ಎಂದು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News