ಬೀಫ್ ಬ್ಯಾನ್ ತೆರವುಗೊಳಿಸಿ, ಬೇಕಾದವರು ತಿನ್ನಲಿ: ಕೇಂದ್ರ ಸಚಿವ ಅಠವಳೆ

Update: 2016-08-31 04:15 GMT

ಹೊಸದಿಲ್ಲಿ, ಆ.31: ಎತ್ತಿನ ಮಾಂಸದಲ್ಲಿ ಅತ್ಯಧಿಕ ಪ್ರೊಟೀನ್ ಇದ್ದು, ಇದನ್ನು ಸೇವಿಸಲು ಜನರಿಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಆಗ್ರಹಿಸಿದ್ದಾರೆ.

ಗೋಮಾಂಸ ಭಕ್ಷಣೆ ಉಸೇನ್ ಬೋಲ್ಟ್ ಯಶಸ್ಸಿನ ರಹಸ್ಯ ಎಂದು ಬಿಜೆಪಿ ಸಂಸದ ಉದಿತ್‌ರಾಜ್ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವರ ಹೇಳಿಕೆ ಹೊರಬಿದ್ದಿದೆ.
ಹಿಂದೂಗಳು ಪವಿತ್ರ ಎಂದು ಭಾವಿಸುವ ಗೋವುಗಳ ಹತ್ಯೆಯನ್ನು ನಿಷೇಧಿಸುವ ಕಾಯ್ದೆಯನ್ನು ಹಲವು ರಾಜ್ಯಗಳು ಜಾರಿಗೆ ತಂದಿದ್ದು, ಸ್ವಯಂಘೋಷಿತ ಗೋರಕ್ಷಕರು ನಿಷೇಧವನ್ನು ಜಾರಿಗೊಳಿಸಲು ಸ್ವಯಂ ಕಾರ್ಯಾಚರಣೆಗೆ ಇಳಿದದ್ದು ಒಂದೆಡೆಯಾದರೆ, ಬಿಜೆಪಿಯ ಇಬ್ಬರು ದಲಿತ ಮುಖಂಡರು ಭಾವನಾತ್ಮಕ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಪಕ್ಷದ ಮುಖಂಡರಿಗೆ ಇರಿಸು-ಮುರಿಸು ಉಂಟುಮಾಡಿದ್ದಾರೆ.
ಉದಿತ್‌ರಾಜ್ ಹೇಳಿಕೆಯನ್ನು ಬೆಂಬಲಿಸಿದ ಸಾಮಾಜಿಕ ನ್ಯಾಯಖಾತೆಯ ರಾಜ್ಯಸಚಿವ ಅಠವಳೆ, "ಶೇಕಡ 50" ಭಾಗವನ್ನು ಒಪ್ಪಿಕೊಂಡಿದ್ದು, ಜನರಿಗೆ ಬೇಕಾದರೆ, ಅವರು ತಿನ್ನಲು ಅವಕಾಶ ಮಾಡಿಕೊಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಕಳೆದ ವರ್ಷ ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿದ್ದನ್ನೂ ಅಠವಳೆ ಕಟುವಾಗಿ ಟೀಕಿಸಿದ್ದರು. ಬಹುತೇಕ ಹಿಂದೂಗಳು ಗೋಮಾಂಸ ಭಕ್ಷಿಸುವುದಿಲ್ಲವಾದರೂ, ಬಹುತೇಕ ದಲಿತರಿಗೆ ಗೋಮಾಂಸ ಪ್ರೊಟೀನ್ ಮೂಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News