ಕಂಡದ್ದನ್ನು ಆಡಿದರೆ ಕೆಂಡದಂತಹ ಕೋಪ

Update: 2016-08-31 18:59 GMT

ಬಿಜೆಪಿ ಒಂದು ಪ್ರಮುಖ ರಾಷ್ಟ್ರೀಯ ಪಕ್ಷ. ಕೇಂದ್ರದ ಅಧಿಕಾರ ಸೂತ್ರವನ್ನು ಹಿಡಿದಿರುವ ಈ ಪಕ್ಷದ ಮೇಲೆ ರಾಷ್ಟ್ರವನ್ನು ಮುನ್ನಡೆಸುವ ಹೊಣೆಗಾರಿಕೆ ಇದೆ. ಆದರೆ, ಹೊಣೆಗಾರಿಕೆಯನ್ನು ಮರೆತ ಈ ಪಕ್ಷ ಪ್ರತಿಪಕ್ಷಗಳಂತೆ ಬೀದಿ ಪ್ರಹಸನಗಳನ್ನು ನಡೆಸಲು ಆರಂಭಿಸಿದೆ. ಅದು ಎಷ್ಟು ಹತಾಶೆಯ ಪರಿಸ್ಥಿಗೆ ತಲುಪಿದೆಯೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದನ್ನು ಮರೆತು ನಿತ್ಯವೂ ನಾನಾ ಕುಂಟು ನೆಪಗಳನ್ನು ತೆಗೆದು ಬೀದಿಗಳಲ್ಲಿ ಪ್ರತಿಭಟನೆಯ ಪ್ರಹಸನಗಳನ್ನು ನಡೆಸುತ್ತಿದೆ. ಇದು ಅಧಿಕಾರದಲ್ಲಿರುವ ಪಕ್ಷಕ್ಕೆ ಶೋಭೆ ತರುವುದಿಲ್ಲ. ಇತ್ತೀಚೆಗೆ ಆಮ್ನೆಸ್ಟಿ ಸಂಸ್ಥೆಯಲ್ಲಿ ನಡೆದ ಸಭೆಯೊಂದರಲ್ಲಿ ಸೇನೆಯ ವಿರುದ್ಧ ಘೋಷಣೆ ಕೂಗಲಾಯಿತೆಂದು ನೆಪ ತೆಗೆದು ಒಂದು ವಾರ ಕಾಲ ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಿತು. ಅದಕ್ಕಿಂತ ಮುಂಚೆ ಡಿವೈಎಸ್ಪಿ ಗಣಪತಿ ಅವರ ಸಾವಿನ ನೆಪ ತೆಗೆದು ಕೋಲಾಹಲ ಉಂಟುಮಾಡಿತು. ಆದರೆ, ಆಮ್ನೆಸ್ಟಿ ಸಂಸ್ಥೆಯಲ್ಲಿ ಸೇನೆಯ ವಿರುದ್ಧ ಯಾವುದೇ ಘೋಷಣೆಗಳನ್ನು ಕೂಗಿದ್ದಕ್ಕೆ ಪುರಾವೆಗಳು ಇಲ್ಲ ಎಂದು ಪೊಲೀಸ್ ಇಲಾಖೆ ಸ್ಪಪ್ಟಪಡಿಸಿತು.

ನಂತರ ಯಾವ ವಿಷಯವೂ ಸಿಕ್ಕಿಲ್ಲವೆಂದು ಹತಾಶೆಗೊಂಡ ಬಿಜೆಪಿ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ನೆಪ ಮಾಡಿಕೊಂಡು ಗಲಾಟೆಯ ವಾತಾವರಣ ನಿರ್ಮಿಸಿತು. ಮೊದಲು ಪಾಕಿಸ್ತಾನಕ್ಕೆ ಸಂಸದೀಯ ನಿಯೋಗದಲ್ಲಿ ಹೋಗಿ ಬಂದ ರಮ್ಯಾ ಅವರು ಆ ದೇಶದ ಜನ ಒಳ್ಳೆಯವರೆಂದು ಹೇಳಿದ್ದನ್ನು ನೆಪ ತೆಗೆದು ಬೀದಿಬೀದಿಗಳಲ್ಲಿ ಕೀಳುಮಟ್ಟದ ಪ್ರತಿಭಟನೆ ನಡೆಸಿತು. ಕೆಲವೆಡೆ ರಮ್ಯಾ ಅವರ ಪ್ರತಿಕೃತಿ ದಹನ ಮಾಡಿತು. ಇನ್ನು ಕೆಲವು ಕಡೆ ರಸ್ತೆಗಳಲ್ಲಿ ರಮ್ಯಾರ ಪುಣ್ಯತಿಥಿ ನಡೆಸಿ ಸಿಹಿಹಂಚಿತು. ಅವಾಚ್ಯ ಭಾಷೆಯಲ್ಲಿ ಆಕೆಯನ್ನು ನಿಂದಿಸಿತು. ಸಂಘಪರಿವಾರದ ಪಡ್ಡೆ ಹುಡುಗರು ಬೀದಿಯಲ್ಲಿ ನಿಂತು ಪಟಾಕಿ ಸಿಡಿಸಿದರೆ ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ. ಆದರೆ, ಪಕ್ಷದ ಉನ್ನತ ಸ್ಥಾನದಲ್ಲಿರುವ ನಾಯಕರು ಹಾಗೂ ಚುನಾಯಿತ ಪ್ರತಿನಿಧಿಗಳು ಅತ್ಯಂತ ಕೆಟ್ಟ ಭಾಷೆಯಲ್ಲಿ ರಮ್ಯಾರನ್ನು ನಿಂದಿಸಿ ತಮ್ಮ ಯೋಗ್ಯತೆಯನ್ನು ತೋರಿಸಿಕೊಂಡರು. ಒಂದು ರಾಷ್ಟ್ರೀಯ ಪಕ್ಷದ ಮಾಜಿ ಸಂಸದೆಯೊಬ್ಬರು ಎಲ್ಲೋ ಹೇಳಿಕೆ ನೀಡಿದರೆಂದು ಈ ರೀತಿ ಅತಿರೇಕದ ಪ್ರತಿಕ್ರಿಯೆ ನೀಡುವುದು ಆ ಪಕ್ಷಕ್ಕೆ ಶೋಭೆ ತರುವುದಿಲ್ಲ.

ಪಾಕಿಸ್ತಾನದ ಕುರಿತು ರಮ್ಯಾ ನೀಡಿದ ಹೇಳಿಕೆಯಲ್ಲಿ ಯಾವ ತಪ್ಪೂ ಇರಲಿಲ್ಲ. ಅವರಿಗಿಂತ ಮುಂಚೆ ಅನೇಕ ಬಿಜೆಪಿ ನಾಯಕರು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪಾಕಿಸ್ತಾನಕ್ಕೆ ಅನಧಿಕೃತ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಝ್ ಶರೀಫ್‌ರ ಆತಿಥ್ಯ ಸ್ವೀಕರಿಸಿ ಬಂದಿದ್ದರು. ಆರೆಸ್ಸೆಸ್ ನಾಯಕರೊಬ್ಬರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಉಗ್ರಗಾಮಿ ನಾಯಕನೊಬ್ಬನನ್ನು ಭೇಟಿಯಾಗಿ ಬಂದಿದ್ದರು. ವಾಸ್ತವಾಂಶ ಹೀಗಿರುವಾಗ ರಮ್ಯಾ ಕಾಂಗ್ರೆಸ್ ಸಂಸದೆ ಎಂಬ ಕಾರಣಕ್ಕಾಗಿ ಆಕೆ ನೀಡಿದ ಹೇಳಿಕೆಯ ಬಗ್ಗೆ ವಿವಾದ ಸೃಷ್ಟಿಸಿದರು. ಈ ವಿವಾದ ಮುಗಿದ ತಕ್ಷಣ ಈಗ ಇನ್ನೊಂದು ವಿವಾದವನ್ನು ಬಿಜೆಪಿ ನಾಯಕರು ಸೃಷ್ಟಿಸಿದ್ದಾರೆ. ರಮ್ಯಾ ಅವರು ಇತ್ತೀಚೆಗೆ ವಿದ್ಯಾರ್ಥಿ ಕಾಂಗ್ರೆಸ್ ಸಭೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯವರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು ಎಂಬ ಹೇಳಿಕೆ ನೀಡಿದ್ದರು. ಈಗ ಆ ಹೇಳಿಕೆಯ ಸುತ್ತ ಬಿಜೆಪಿ ನಾಯಕರು ವಿವಾದವನ್ನು ಸೃಷ್ಟಿಸಿದ್ದಾರೆ. ಈ ಹೇಳಿಕೆಯ ಬಗ್ಗೆ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಮ್ಯಾ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಸ್ವಾತಂತ್ರ ಹೋರಾಟಕ್ಕೆ ದ್ರೋಹ ಬಗೆದವರು ನಂತರ ಗಾಂಧಿ ಹತ್ಯೆಗೆ ಕ್ಷಮೆ ಯಾಚಿಸದವರು, ಬಾಬರಿ ಮಸೀದಿ ನೆಲಸಮಕ್ಕೆ ವಿಷಾದ ವ್ಯಕ್ತಪಡಿಸದವರು, ಗುಜರಾತ್ ಹತ್ಯಾಕಾಂಡದ ಬಗ್ಗೆ ಪಶ್ಚಾತ್ತಾಪ ಪಡದವರು, ರೋಹಿತ್ ವೇಮುಲಾ ಸಾವಿನ ಕಳಂಕ ಅಂಟಿಸಿಕೊಂಡವರು, ರಮ್ಯಾ ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದಾರೆ.

ರಮ್ಯಾ ಅವರ ಹೇಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಜನಸಂಘದ ಸಂಸ್ಥಾಪಕ ಶ್ಯಾಂಪ್ರಸಾದ್ ಮುಖರ್ಜಿ ಅವರು ಹಾಗೂ ಆರೆಸ್ಸೆಸ್ ಸ್ಥಾಪಕ ಹೆಡ್ಗೇವಾರ್ ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದರು. ಹೋರಾಟದಲ್ಲಿ ಭಾಗವಹಿಸಿದ್ದರು ಎಂದೆಲ್ಲ ಸಬೂಬು ಹೇಳಿದ್ದಾರೆ. ಆದರೆ, 1925ರಲ್ಲಿ ಸ್ಥಾಪನೆಯಾಗಿದ್ದ ಆರೆಸ್ಸೆಸ್ ಸ್ವಾತಂತ್ರ ಹೋರಾಟಕ್ಕೆ ಯಾಕೆ ಬೆಂಬಲ ನೀಡಲಿಲ್ಲ? ಸ್ವಾತಂತ್ರ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುವ ದ್ರೋಹವನ್ನು ಯಾಕೆ ಮಾಡಿತು ಎಂಬ ಬಗ್ಗೆ ಅವರು ಉತ್ತರಿಸಿಲ್ಲ. ಸಂಘದ ಸ್ವಯಂ ಸೇವಕರು ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಬಾರದು. ಅದಕ್ಕಿಂತ ಮುಖ್ಯವಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರ ವಿರುದ್ಧ ಹೋರಾಡಲು ಶಕ್ತಿಸಂಚಯ ಮಾಡಿಕೊಳ್ಳಬೇಕೆಂದು ಆರೆಸ್ಸೆಸ್ ಸರಸಂಘಚಾಲಕ ಗೋಳ್ವಾಲ್ಕರ್ ತಮ್ಮ ಪುಸ್ತಕವೊಂದರಲ್ಲಿ ಬರೆದಿದ್ದಾರೆ. ಈ ಪುಸ್ತಕವನ್ನು ಸಂಘದ ಕಾರ್ಯಕರ್ತರು ಇಂದಿಗೂ ಓದುತ್ತಾರೆ. ಅದಕ್ಕಿಂತ ಮುಖ್ಯವಾಗಿ ಹಿಂದೂ ಮಹಾಸಭಾದ ನಾಯಕ ವಿ.ಡಿ. ಸಾವರ್ಕರ್ ಬ್ರಿಟಿಷ್ ಸರಕಾರಕ್ಕೆ ಕ್ಷಮೆ ಯಾಚಿಸಿ ಬರೆದ ಪತ್ರ ಎಲ್ಲರಿಗೂ ಗೊತ್ತಿದೆ. ಇಷ್ಟೆಲ್ಲ ಪರಂಪರೆ ಹೊಂದಿದ್ದರೂ ರಮ್ಯಾ ಅವರ ಹೇಳಿಕೆಯ ಬಗ್ಗೆ ಇವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದೇಕೆ? ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಕೈವಾಡ ಇದೆಯೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಆಗ ಸಂಘಪರಿವಾರ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಗಾಂಧಿ ಹತ್ಯೆಗೆ ಮುನ್ನ ನಾಥೂರಾಮ್ ಗೋಡ್ಸೆ ಆರೆಸ್ಸೆಸ್ ಸ್ವಯಂ ಸೇವಕನಾಗಿದ್ದ ಎಂಬ ಸಂಗತಿ ಎಲ್ಲರಿಗೂ ಗೊತ್ತಿದ್ದರೂ ಅದನ್ನು ಮುಚ್ಚಿಹಾಕಲು ಸಂಘಪರಿವಾರ ಪ್ರಯಾಸ ಪಡುತ್ತಲೇ ಬಂದಿದೆ. ಇಂಥವರು ಈಗ ದೇಶಭಕ್ತಿಯ ಪಾಠ ಮಾಡುತ್ತಿರುವುದು ಅದನ್ನೆಲ್ಲ ನಾವು ಕೇಳುತ್ತಿರುವುದು ಈ ದೇಶದ ದುರಂತ. ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ಎಲ್ಲೂ ಪಾಲ್ಗೊಳ್ಳದ ಸಂಘಪರಿವಾರ ಸ್ವಾತಂತ್ರಾನಂತರ ಯಾವ ಮಹತ್ಕಾರ್ಯ ಮಾಡಿತು ಎಂಬ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಅದು ಜಾತ್ಯತೀತ ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವಾಗಿ ಮಾಡಲು ಹುನ್ನಾರ ನಡೆಸಿದೆ. ತನ್ನ ಈ ಗುರಿ ಸಾಧನೆಗೆ ಅಡ್ಡಿಯಾಗಿರುವ ಎಲ್ಲರನ್ನೂ ದೇಶ ವಿರೋಧಿಗಳೆಂದು ಗೂಬೆ ಕೂರಿಸುತ್ತಿದೆ. ಕೆಲ ವಿಚಾರವಾದಿಗಳನ್ನು ಈ ಮತಾಂಧ ಶಕ್ತಿಗಳು ದೈಹಿಕವಾಗಿ ಹೊಸಕಿಹಾಕಿವೆ. ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್, ಸಿಪಿಐ ನಾಯಕ ಗೋವಿಂದ ಪನ್ಸಾರೆ ಹಾಗೂ ನಮ್ಮ ನಾಡಿನ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಹಿಂದಿರುವ ಪಾತಕಿಗಳು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಈ ಪಾತಕಿಗಳೇ ತಮ್ಮನ್ನು ವಿರೋಧಿಸುವ ಎಲ್ಲರನ್ನೂ ರಾಷ್ಟ್ರವಿರೋಧಿಗಳೆಂದು ಕರೆದು ತಾವು ಮಹಾನ್ ದೇಶಭಕ್ತರು ಎಂದು ಪೋಸು ಕೊಡುತ್ತಿದ್ದಾರೆ.

ರಮ್ಯಾ ಅವರು ಆರೆಸ್ಸೆಸ್ ಬಗ್ಗೆ ಹೇಳಿದರಲ್ಲಿ ಯಾವ ತಪ್ಪೂ ಇಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳು ರಮ್ಯಾ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಆದರೆ, ರಮ್ಯಾ ಅವರನ್ನು ಸಮರ್ಥಿಸಿಕೊಳ್ಳಬೇಕಾದ ಕಾಂಗ್ರೆಸ್ ಪಕ್ಷದ ನಾಯಕರು ಬಾಯಿಮುಚ್ಚಿಕೊಂಡು ಸುಮ್ಮನಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಸ್ವಾತಂತ್ರ ಹೋರಾಟದ ಹಿನ್ನೆಲೆ ಹೊಂದಿರುವ ಕಾಂಗ್ರೆಸ್ ಪಕ್ಷ ಇಂತಹ ನಕಲಿ ದೇಶಭಕ್ತರ ಬೀದಿ ಪ್ರಹಸನಗಳಿಗೆ ಸೊಪ್ಪು ಹಾಕಬಾರದು.

‘ಬಿಜೆಪಿ ಅಥವಾ ಜನಸಂಘ ಸ್ಥಾಪನೆಯಾಗಿದ್ದು 1952ರಲ್ಲಿ. ಅದು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ’ ಎಂಬ ಬಿಜೆಪಿ ನಾಯಕರ ಮಾತು ಕೇಳಿದರೆ ನಗು ಬರುತ್ತದೆ. ಜನಸಂಘ ಮತ್ತು ಬಿಜೆಪಿ ಸಂಘಪರಿವಾರದ ಅಂಗಸಂಘಟನೆಗಳು. ಆರೆಸ್ಸೆಸ್ ಸ್ಥಾಪನೆಯಾಗಿದ್ದು 1925ರಲ್ಲಿ.ಆಗ ದೇಶವ್ಯಾಪಿಯಾಗಿ ನಡೆದ ಸ್ವಾತಂತ್ರ ಹೋರಾಟದಲ್ಲಿ ಅವರು ಯಾಕೆ ಪಾಲ್ಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ತಾವು ನಡೆದು ಬಂದ ದ್ರೋಹದ ದಾರಿಯನ್ನು ಮುಚ್ಚಿಕೊಳ್ಳಲು ಬೀದಿ ಪ್ರಹಸನಗಳನ್ನು ನಡೆಸುವ ದುಸ್ಸಾಹಸಕ್ಕೆ ಕೋಮುವಾದಿ ಶಕ್ತಿಗಳು ಕೈಹಾಕಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News