ಪೊಲೀಸರ ಎದುರಲ್ಲೇ ಬಿಪಿಓ ಆಡಳಿತ ನಿರ್ದೇಶಕನ ಅಪಹರಣ!

Update: 2016-09-01 03:20 GMT

ಕೊಲ್ಕತ್ತಾ, ಸೆ.1: ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಇಲ್ಲಿನ ಬಿಓಪಿ ಕಂಪೆನಿಯೊಂದರ ಆಡಳಿತ ನಿರ್ದೇಶಕನನ್ನು ಪೊಲೀಸರ ಎದುರಲ್ಲೇ, ವಾರದ ಹಿಂದೆ ವಜಾಗೊಂಡ ಉದ್ಯೋಗಿ ಹಾಗೂ ಏಳು ಮಂದಿ ಸಹಚರರರು ಅಪಹರಿಸಿಕೊಂಡು ಹೋಗಿರುವ ಸಿನಿಮೀಯ ಘಟನೆ ನಡೆದಿದೆ.

ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿರುವ ಪೊಲೀಸ್ ಕಿಯಾಸ್ಕ್‌ನ ಎದುರೇ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ.

ಅನುರೂಪ್ ಸಿನ್ಹಾ (23) ಎಂಬವರನ್ನು ನಾಲ್ಕು ಗಂಟೆ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಪಾರು ಮಾಡಿ, ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೂ, ಈ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಅಪಹೃತ ಉದ್ಯಮಿಯ ತಾಯಿ ಆಪಾದಿಸಿದ್ದಾರೆ.

ಘಟನೆ ನಡೆದ ತಕ್ಷಣ ತಾಯಿ ಆ ಪ್ರದೇಶದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ಠಾಣೆಯ ಅಧಿಕಾರಿಗಳು, "ನೀವು ಕೆಸ್ತೂಪುರ್ ನಿವಾಸಿಯಾಗಿರುವುದರಿಂದ ಬಗೋತಿ ಠಾಣೆಯಲ್ಲಿ ದೂರು ನೀಡಬೇಕು" ಎಂದು ಹೇಳಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು ಎನ್ನುವುದು ಅವರ ಆರೋಪ.

ಬಳಿಕ ಮಹಿಳೆ ತಮ್ಮ ಸ್ನೇಹಿತರಾದ ಪೊಲೀಸ್ ಅಧಿಕಾರಿಯೊಬ್ಬರ ಜತೆಗೆ ಬಗೋತಿ ಠಾಣೆಗೆ ಹೋಗಿ ದೂರು ನೀಡಿದರು. ಬಳಿಕ ಅಪಹರಣಕಾರರ ಮೊಬೈಲ್ ಟವರ್ ಜಾಡು ಹಿಡಿದು, ಅವರಿಗೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಭರವಸೆ ನೀಡಿ ಕರೆಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News