ಎತ್ತಿನಹೊಳೆ ಯೋಜನೆ ತ್ವರಿತ ಅನುಷ್ಠಾನಕ್ಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

Update: 2016-09-01 13:48 GMT

ಬೆಂಗಳೂರು, ಸೆ. 1: ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನದ ವೇಗವನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಎತ್ತಿನಹೊಳೆ ಹಾಗೂ ಕೋರಮಂಗಲ-ಚಲ್ಲಘಟ್ಟ ಕಣಿವೆ ಸಂಸ್ಕರಿಸಿದ ನೀರು ಪೂರೈಕೆ ಯೋಜನೆಯ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಉದ್ದೇಶಿತ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ 12,912 ಕೋಟಿ ರೂ.ವೆಚ್ಚದ ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಯೋಜನಾ ಅನುಷ್ಠಾನದಲ್ಲಿ ಸಮಸ್ಯೆಗಳಿದ್ದಲ್ಲಿ, ಅವುಗಳನ್ನು ಕೂಡಲೆ ಸರಕಾರದ ಗಮನಕ್ಕೆ ತನ್ನಿ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಯೋಜನೆಗೆ ಸಂಬಂಧಪಟ್ಟ ಕೆಲ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲೆ ಬಗೆಹರಿಸಲು ಸಾಧ್ಯವಾಗದಿರಬಹುದು. ಯೋಜನೆಗೆ ಎದುರಾಗುತ್ತಿರುವ ತೊಡಕುಗಳನ್ನು ಸ್ಪಷ್ಟಪಡಿಸಿದಲ್ಲಿ, ಅವುಗಳ ನಿವಾರಣೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೂಡಲೇ ಸ್ಪಂದಿಸಿ ಸಭೆಗೆ ಹಾಜರಿದ್ದ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳನ್ನು ಆಮಂತ್ರಿಸಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾದರು. ಯೋಜನೆ ಅನುಷ್ಠಾನಕ್ಕೆ ಪರಿಸರ ಸಂಬಂಧಿ ಅನುಮತಿಗಳನ್ನು ದೊರಕಿಸಿಕೊಡುವಂತೆ ಅರಣ್ಯ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ಗೆ ಸಿಎಂ ನಿರ್ದೇಶಿಸಿದರು.

ಭೂ ಸ್ವಾಧೀನಕ್ಕೆ ಕ್ರಮ : ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೀರಾವರಿ ಸಚಿವ ಎಂ.ಬಿ.ಪಾಟೀಲ್, ಎತ್ತಿನಹೊಳೆ ಮತ್ತು ಕೆಸಿ ವ್ಯಾಲಿ ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನ ಮತ್ತು ಅರಣ್ಯ ಇಲಾಖೆ ಅನುಮತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸಮನ್ವಯತೆಯಿಂದ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

 12,912 ಕೋಟಿ ರೂ.ಮೊತ್ತದ ಎತ್ತಿನಹೊಳೆ ಯೋಜನೆ 5ಪ್ಯಾಕೇಜ್‌ಗಳಾಗಿ ವಿಂಗಡಿಸಿದ್ದು, 3ಪ್ಯಾಕೇಜ್‌ಗಳ ಪೈಕಿ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎರಡು ಯೋಜನೆಗಳ ಅನುಷ್ಠಾನದ ವೇಗ ಹೆಚ್ಚಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಉದ್ದೇಶಿತ ಯೋಜನೆಗಳ ಪೈಕಿ ಎತ್ತಿನಹೊಳೆ ಯೋಜನೆಗೆ ಮೊದಲ ಹಂತದಲ್ಲಿ ಒಟ್ಟು 6 ಸಾವಿರ ಹೆಕ್ಟೆರ್‌ನಷ್ಟು ಭೂ ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಆ ಪೈಕಿ ಬಗರ್‌ಹುಕುಂ ಸಾಗುವಳಿ ಭೂಮಿಯೂ ಇದೆ. ಈ ಸಂಬಂಧ ಸಾಮಾಜಿಕ ಸಮೀಕ್ಷೆ ಅಗತ್ಯವಿದೆ ಎಂದರು.

ನೂತನ ಭೂ ಸ್ವಾಧೀನ ಕಾಯ್ದೆಯನ್ವಯ ರೈತರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕಿದ್ದು, ಭೂ ಸ್ವಾಧೀನ ಕಾರ್ಯಕ್ಕೆ 2,300ಕೋಟಿ ರೂ.ಗಳನ್ನು ಹಣ ಬೇಕಾಗುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವರಾದ ಕೆ.ಆರ್.ರಮೇಶ್ ಕುಮಾರ್, ಕೃಷ್ಣ ಭೈರೇಗೌಡ, ರಾಮಲಿಂಗಾ ರೆಡ್ಡಿ, ಸಂಸದ ವೀರಪ್ಪ ಮೊಯ್ಲಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್, ಕಂದಾಯ ಇಲಾಖೆ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಎಂ.ಲಕ್ಷ್ಮಿ ನಾರಾಯಣ್, ಸಿಎಂ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್ ಹಾಗೂ ತುಷಾರ್ ಗಿರಿನಾಥ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ..

‘ಕೋರಮಂಗಲ-ಚಲ್ಲಘಟ್ಟ ಕಣಿವೆ ಪ್ರದೇಶದಿಂದ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಕೋಲಾರದ ಕೆರೆಗಳಿಗೆ ಹರಿಸುವ ಯೋಜನೆ ಪೈಪ್‌ಲೈನ್ ಮಾರ್ಗದಲ್ಲಿ ಬೆಳ್ಳಂದೂರು ಬಳಿ ಪ್ರಸ್ಟೀಜ್ ಸಂಸ್ಥೆ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, ಅದನ್ನು ತೆರವು ಗೊಳಿಸಲಾಗುವುದು. ತಾಜ್ಯ ನೀರು ಹರಿಯುವ ನೂರು ಅಡಿಗಳ ಕಾಲುವೆಯನ್ನು ಪ್ರಸ್ಟೀಜ್ ಸಂಸ್ಥೆ ಒತ್ತುವರಿ ಮಾಡಿದ್ದು, ಈ ಸಂಬಂಧ ಯಾರೊಬ್ಬರೂ ಸರಕಾರದ ಮೇಲೆ ಒತ್ತಡ ಹೇರಿಲ್ಲ. ತೆರವು ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’

-ಟಿ.ಬಿ.ಜಯಚಂದ್ರ ಸಣ್ಣ ನೀರಾವರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News