ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಹಿಳೆಗೆ ಆಮ್ಲಜನಕ ಬದಲು ನೀಡಿದ್ದೇನು ಗೊತ್ತೇ?

Update: 2016-09-03 03:42 GMT

ಮಧುರೈ, ಸೆ.3: ನಗಿಸುವ ಅನಿಲ ನೈಟ್ರಸ್ ಆಕ್ಸೈಡ್ ನಾಗರಕೋಯಿಲ್ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾತ್ರ ಅಳು ತರಿಸುವ ಅನಿಲವಾಗಿ ಪರಿಣಮಿಸಿದೆ. ಹೇಗೆ ಗೊತ್ತೇ? ಆಮ್ಲಜನಕದ ಬದಲು, ಮಹಿಳೆಯೊಬ್ಬರಿಗೆ ನೈಟ್ರಸ್ ಆಕ್ಸೈಡ್ ನೀಡಿ, ಆಕೆಯ ಸಾವಿಗೆ ಕಾರಣವಾದ್ದರಿಂದ ಇದೀಗ ಸಂತ್ರಸ್ತೆ ಕುಟುಂಬಕ್ಕೆ ಭಾರಿ ಮೊತ್ತದ ಪರಿಹಾರ ನೀಡಬೇಕಾಗಿದೆ.
ವೈದ್ಯಕೀಯ ನಿರ್ಲಕ್ಷ್ಯದಿಂದ ಮೃತಪಟ್ಟ ರುಕ್ಮಿಣಿ(34) ಎಂಬ ಮಹಿಳೆಯ ಕುಟುಂಬಕ್ಕೆ 28.37 ಲಕ್ಷ ರೂ. ಪರಿಹಾರ ನೀಡುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಕನ್ಯಾಕುಮಾರಿ ಜಿಲ್ಲೆಯ ಅಸಾರಿಪಳ್ಳಂ ವೈದ್ಯಕೀಯ ಆಸ್ಪತ್ರೆಗೆ ಆದೇಶಿಸಿದೆ.
ವೈದ್ಯರ ನಿರ್ಲಕ್ಷದಿಂದಾಗಿ ಪತ್ನಿ ಮೃತಪಟ್ಟಿದ್ದು, ಈ ಸಂಬಂಧ 50 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಬೇಕು ಎಂದು ಕೋರಿ ರುಕ್ಮಿಣಿ ಪತಿ ಎಸ್.ಗಣೇಶನ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
"ವೈದ್ಯಕೀಯ ಸಿಬ್ಬಂದಿ ರೋಗಿಗೆ ಆಮ್ಲಜನಕದ ಬದಲು ನೈಟ್ರಸ್ ಆಕ್ಸೈಡ್ ನೀಡಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಈ ನಿರ್ಲಕ್ಷ್ಯದಲ್ಲಿ ಕಾಲೇಜಿನ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಪಾತ್ರ ಇದೆ. ಪರಿಣಾಮವಾಗಿ ಅರ್ಜಿದಾರರ ಪತ್ನಿ ಸಾವಿಗೀಡಾಗಿದ್ದಾರೆ. ಆದ್ದರಿಂದ ಸರ್ಕಾರ ಪರಿಹಾರ ನೀಡಲೇಬೇಕು" ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಎಂಟು ವಾರಗಳ ಒಳಗಾಗ ಶೇಕಡ 9ರಷ್ಟು ಬಡ್ಡಿದರದೊಂದಿಗೆ ಪರಿಹಾರಧನ ಪಾವತಿಸುವಂತೆ ರಾಜ್ಯದ ಆರೋಗ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.
2011ರ ಮಾರ್ಚ್ 18ರಂದು ರುಕ್ಮಿಣಿಯನ್ನು ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಆಮ್ಲಜನಕ ಬದಲಾಗಿ ನೈಟ್ರಸ್ ಆಕ್ಸೈಡ್ ನೀಡಿದ್ದರಿಂದ ಮಹಿಳೆಗೆ ಭಾರಿ ರಕ್ತಸ್ರಾವ ಆಗಿತ್ತು. ಬೇರೆ ಆಸ್ಪತ್ರೆಗಳಲ್ಲಿ ನೀಡಿದ ಚಿಕಿತ್ಸೆಯೂ ಫಲಕಾರಿಯಾಗದೇ ಆಕೆ 2012ರ ಮೇ 4ರಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News