ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಕರೆ ಕೊಡುವ ಹಾಡಿಗೆ ಕೇಂದ್ರ ಸರಕಾರದ ಇಲಾಖೆಯಿಂದ ಪ್ರಶಂಸೆ !

Update: 2016-09-09 05:44 GMT

ಹೊಸದಿಲ್ಲಿ, ಸೆ.9: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಸೇನಾ ಪಡೆಗಳಿಂದ ಕಾಶ್ಮೀರಿಗಳ ಹತ್ಯೆಯನ್ನು ಉತ್ತೇಜಿಸುವ ಟ್ವೀಟೊಂದು ಗುರುವಾರ ಕಾಣಿಸಿಕೊಂಡಿತ್ತು. ಆ ಟ್ವೀಟ್ ಅನ್ನು ಕೂಡಲೇ ಡಿಲೀಟ್ ಮಾಡಲಾಯಿತಾದರೂ ಅದರಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲ್ಪಟ್ಟ ಪದ್ಯವೊಂದರ ಸ್ಕ್ರೀನ್ ಶಾಟ್ ಇತ್ತಲ್ಲದೆ ಅದನ್ನು ‘ಹೈಟ್ಸ್ ಆಫ್  ಪೇಟ್ರಿಯಾಟಿಸಂ...!!’’ ಎಂದು ವರ್ಣಿಸಲಾಗಿತ್ತು.

ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯದ ಯೋಜನೆಯಾಗಿರುವ ಡಿಜಿಟಲ್ ಇಂಡಿಯಾಗೆ ಟ್ಟಿಟ್ಟರ್ ನಲ್ಲಿ 5.34 ಲಕ್ಷ ಫಾಲೋವರ್ಸ್ ಇದ್ದಾರೆ. ಬಾಲಿವುಡ್ ಹಾಡಿನ ಮಾದರಿಯಲ್ಲಿ ಬರೆಯಲಾದ ಈ ಕವನದಲ್ಲಿ ಕಾಶ್ಮೀರಿಗಳು ರಾಷ್ಟ್ರಗೀತೆಯನ್ನು ಹಾಡಲು ಒಪ್ಪುವ ತನಕ ಅವರ ಮೇಲೆ ಸೇನೆ ಗುಂಡಿಕ್ಕುವುದನ್ನು ನಿಲ್ಲಿಸಬಾರದು ಎಂದು ಹೇಳಲಾಗಿದೆ.

ಈ ಪದ್ಯದ ಒಂದು ಅಧ್ಯಾಯದಲ್ಲಿ ‘‘ಗುಂಡುಗಳು ಈಗಷ್ಟೇ ಆರಂಭವಾಗಿವೆ. ಮತ್ತೆ ನಿಮಗೆ ಎಚ್ಚರಿಕೆ ನೀಡಿಲ್ಲವೆಂದು ಹೇಳಬೇಡಿ. ನೀವು ಪ್ರತಿ ದಿನ ಬೆಳಗ್ಗೆ ವಂದೇ ಮಾತರಂ ಹೇಳಬೇಕು. ಸೇನೆ, ಅವರಿಗೆಲ್ಲಾ ನಿಮಗೆ ಬೇಕಾದಂತೆ ಹೊಡೆಯಿರಿ, ಅವರ ಮೂಳೆಗಳನ್ನು ಮುರಿಯಿರಿ. ಮೆಹಬೂಬಾ ಪೊಲೀಸರನ್ನು ಕರೆದರೆ ಮೋದಿಗೆ ಅವರನ್ನು ಹೇಗೆ ನಿಭಾಯಿಸುವುದು ಎಂದು ಗೊತ್ತು,’’ ಎಂದು ಬರೆಯಲಾಗಿದೆ.

ಕೊನೆಗೆ ‘‘ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿರಿಸಿ ಪ್ರಕಟಿಸಲಾಗಿದೆ ; ತಮ್ಮ ಜೀವವನ್ನು ಪ್ರೀತಿಸುವ ಎಲ್ಲರೂ ಮೌನವಾಗಿ ಸಿಟಿ ಸ್ಕ್ವೇರ್ ಗೆ ಬಂದು ಅಲ್ಲಿ ಯಾವುದೇ ಗದ್ದಲ ಮಾಡದೆ ರಾಷ್ಟ್ರ ಗೀತೆ ಹಾಡಬೇಕು.’’ ಎಂದಿದೆ.

ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಅಂಕಿತ್ ಲಾಲ್ ಈ ಟ್ವೀಟ್ ಬಗ್ಗೆ ಎಲ್ಲರ ಗಮನ ಸೆಳೆದಿದ್ದಾರಲ್ಲದೆ ಈ ರೀತಿ ಟ್ವೀಟ್ ಮಾಡಿದ್ದಾರೆ. ‘‘ಸರಕಾರ ಪ್ರೇಷಿತ ಹ್ಯಾಂಡಲ್ @_ಡಿಜಿಟಲ್ ಇಂಡಿಯಾ ಕಾಶ್ಮೀರಿಗಳ ಸಾಮೂಹಿಕ ಹತ್ಯೆಗೆ ಕರೆ ನಿಡುವ ಪದ್ಯವೊಂದನ್ನು ‘ಹೈಟ್ಸ್ ಆಫ್ ಪೇಟ್ರಿಯಾಟಿಸಂ’’ ಎಂದು ತಿಳಿದಿದೆ.’’

ಈ ಬಗ್ಗೆ ಐಟಿ ಸಚಿವ ರವಿಶಂಕರ್ ಪ್ರಸಾದ್ ಆವರ ಗಮನ ಸೆಳೆದಾಗ ಅವರು ಕೂಡಲೇ ವರದಿ ನೀಡುವಂತೆ ಹೇಳಿದ್ದು ಈ ಕವನವನ್ನು ಟ್ವೀಟ್ ಮಾಡಿದ್ದ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದಿದ್ದಾರೆ. ಐಟಿ ಸಚಿವಾಲಯದ, ಡಿಜಿಟಲ್ ಇಂಡಿಯಾ ಯಾ ಭಾರತ ಸರಕಾರದ ಅಭಿಪ್ರಾಯಗಳನ್ನು ಈ ಟ್ವೀಟ್ ಸೂಚಿಸುವುದಿಲ್ಲ, ಎಂದು ಅವರು ಹೇಳಿ ಈ ಟ್ವೀಟ್ ಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News