ಹೋರಾಟಗಾರರು ರೌಡಿಗಳಾದರೆ ರೌಡಿಗಳೆಲ್ಲ ಪೊಲೀಸರ ಗೆಳೆಯರೇ?

Update: 2016-09-17 07:49 GMT

ಕರಾವಳಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜನರಲ್ಲಿ ಭವಿಷ್ಯದ ಕುರಿತಂತೆ ಆತಂಕಗಳನ್ನು ಹೆಚ್ಚಿಸುತ್ತಿವೆ. ಇಂದು ಕರಾವಳಿಯ ಜನರು ಶಂಕೆ, ಆತಂಕಗಳನ್ನು ವ್ಯಕ್ತಪಡಿಸುತ್ತಿರುವುದು ಇಲ್ಲಿನ ರೌಡಿಗಳು, ದುಷ್ಕರ್ಮಿಗಳ ಕುರಿತು ಅಲ್ಲ. ಜನರು ಭಯಭೀತರಾಗಿರುವುದು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜನರೇ ಸರ್ವಾಧಿಕಾರಿಗಳಿಗೆ, ದುಷ್ಟರಿಗೆ ಪೂರಕವಾಗಿ ವರ್ತಿಸುತ್ತಿರುವ ಕುರಿತು. ಇಲ್ಲಿ ಕೊಲೆಯನ್ನು ಸಮರ್ಥಿಸಿ, ಕೊಲೆ ಬೆದರಿಕೆ ಹಾಕಿದ ಆರೋಪಿಗೆ 24 ಗಂಟೆಯೊಳಗೆ ಜಾಮೀನು ಸಿಗುತ್ತದೆ. ಇದೇ ಆರೋಪಿ ಒಂದು ತಿಂಗಳಲ್ಲಿ ನಿಜಕ್ಕೂ ಓರ್ವನ ಕೊಲೆಗೈದು ಜೈಲು ಸೇರುತ್ತಾನೆ. ಜೀವಮಾನದಲ್ಲಿ ದನವನ್ನೇ ಸಾಕದ, ದನದ ಹೆಸರಿನಲ್ಲಿ ಹಫ್ತಾ ವಸೂಲಿಗೈಯುವ ಗೋರರಕ್ಷಕರಿಗೆ ಪೊಲೀಸರೇ ಬೆಂಗಾವಲಾಗಿ ನಿಲ್ಲುತ್ತಾರೆ. ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರ ಶೌಚಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ ವಿಕೃತ ಕಾಮಿ ಯುವಕನನ್ನು ಉಳಿಸಲು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳೇ ಶ್ರಮಿಸುತ್ತಾರೆ. ಕೇಸು ದಾಖಲಿಸಲು ಸಮಯ ತೆಗೆದುಕೊಳ್ಳುತ್ತಾರೆ. ಪೊಲೀಸರು ಆತನ ಮೇಲೆ ದುರ್ಬಲ ಕೇಸು ದಾಖಲಿಸುತ್ತಾರೆ. ಬಂಧಿಸಿದ ಕೆಲವೇ ಗಂಟೆಗಳಲ್ಲಿ ಆತನಿಗೆ ಜಾಮೀನು ಸಿಗುತ್ತದೆ. ಇದೇ ಸಂದರ್ಭದಲ್ಲಿ ನ್ಯಾಯ ಕೇಳಲು ಬೀದಿಗಿಳಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಯಾವ ಕಾರಣವೂ ಇಲ್ಲದೆ ಲಾಠಿ ಬೀಸುತ್ತಾರೆ ಮತ್ತು ಅವರ ಮೇಲೆಯೇ ಮೊಕದ್ದಮೆ ದಾಖಲಿಸುತ್ತಾರೆ.

ದನದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆದರೆ ಯಾವುದೇ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ. ಬದಲಿಗೆ ಹಲ್ಲೆಗೀಡಾದವನ ಮೇಲೆಯೇ ಕೇಸು ದಾಖಲಿಸಲು ಪೊಲೀಸರು ತುದಿಗಾಲಲ್ಲಿ ನಿಲ್ಲುತ್ತಾರೆ. ಪರಿಣಾಮವಾಗಿ ಹಾಡುಹಗಲಲ್ಲೇ ಗೋರಕ್ಷಕವೇಷದ ರೌಡಿಗಳು ಓರ್ವ ಅಮಾಯಕ ದನದ ವ್ಯಾಪಾರಿಯನ್ನು ರಾಕ್ಷಸರಂತೆ ಥಳಿಸಿ ಕೊಲ್ಲುತ್ತಾರೆ. ಇದರಲ್ಲಿ ಭಾಗಿಯಾದವರಲ್ಲಿ ಎಷ್ಟು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದರ ವಿವರಗಳು ಇನ್ನೂ ಹೊರಬಿದ್ದಿಲ್ಲ. ಇಷ್ಟೇ ಇಲ್ಲ, ಪೊಲೀಸ್ ವ್ಯವಸ್ಥೆ ತನ್ನ ಲಕ್ಷಣರೇಖೆಯನ್ನು ದಾಟಿ ಇನ್ನೊಂದು ಹಂತವನ್ನು ತಲುಪಿದೆ. ಈವರೆಗೆ ಬೀದಿಯಲ್ಲಿ ವಿವಿಧ ವೇಷಗಳಲ್ಲಿರುವ ರೌಡಿಗಳನ್ನು ರಕ್ಷಿಸುವುದಕ್ಕಷ್ಟೇ ಸೀಮಿತವಾಗಿದ್ದವರು, ಇದೀಗ ಜನಪರ ಹೋರಾಟ ಮಾಡುವ ಜನರ ಮೇಲೆಯೇ ರೌಡಿಶೀಟ್ ದಾಖಲಿಸಿ ಅವರನ್ನು ಜೈಲಿಗೆ ತಳ್ಳುವ ಮಟ್ಟಕ್ಕೆ ತಲುಪಿದ್ದಾರೆ. ಅಂದರೆ ಸದ್ಯಕ್ಕೆ ಕರಾವಳಿಯಲ್ಲಿ ರೌಡಿಗಳೆಲ್ಲ ಧರ್ಮ, ಸಂಸ್ಕೃತಿ ರಕ್ಷಕರಾದರೆ ಪರಿಸರ, ಭೂಮಿಗಾಗಿ ಹೋರಾಟ ಮಾಡುತ್ತಿರುವ ಶ್ರೀಸಾಮಾನ್ಯರೆಲ್ಲ ಪೊಲೀಸರ ಪಟ್ಟಿಯಲ್ಲಿ ರೌಡಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಈ ಮೂಲಕ ನಮ್ಮ ಕಾನೂನು ವ್ಯವಸ್ಥೆ ಭವಿಷ್ಯದ ಕರಾವಳಿಯನ್ನು ರೌಡಿಗಳ ಊರನ್ನಾಗಿ ಪರಿವರ್ತಿಸಲು ಟೊಂಕ ಕಟ್ಟಿ ನಿಂತಂತಿದೆ.


ಎಂಆರ್‌ಪಿಎಲ್ ವಿರುದ್ಧ ಕರಾವಳಿಯ ಸ್ಥಳೀಯರ ಹೋರಾಟ ಇಂದು ನಿನ್ನೆಯದಲ್ಲ. ಎಂಆರ್‌ಪಿಎಲ್ ದಕ್ಷಿಣ ಕನ್ನಡದಲ್ಲಿ ಹೆಜ್ಜೆಯೂರುವ ಮೊದಲು ನೀಡಿರುವ ಭರವಸೆಯನ್ನು ಸಂಪೂರ್ಣ ಉಲ್ಲಂಘಿಸಿದೆ. ಇಂದು ಎಂಆರ್‌ಪಿಎಲ್ ಮೂರನೆ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಸುತ್ತಮುತ್ತ ಉಂಟಾದ ಮಾಲಿನ್ಯ ಸ್ಥಳೀಯರ ಬದುಕುವ ಹಕ್ಕನ್ನೇ ಕಿತ್ತುಕೊಂಡಿದೆ. ಇಂತಹ ಅನಿವಾರ್ಯ ಸ್ಥಿತಿಯಲ್ಲಿ ಹೆಂಗಸರು, ಮಕ್ಕಳು ಎನ್ನದೇ ಸಂಘಟಿತರಾಗಿ ಜನರು ಎಂಆರ್‌ಪಿಎಲ್ ಎನ್ನುವ ದೈತ್ಯ ವಿರುದ್ಧ ಮುಗಿಬಿದ್ದರು. ಸುಮಾರು ಒಂದೂವರೆ ವರ್ಷಗಳ ಕಾಲ ನಡೆದ ಈ ಪ್ರಜಾಸತ್ತಾತ್ಮಕ ಹೋರಾಟದ ಪರಿಣಾಮವಾಗಿ ಸಣ್ಣ ಗೆಲುವೂ ಜನರದಾಯಿತು. ಇದು ಕೇವಲ ಜನರ ಗೆಲುವಾಗಿರಲಿಲ್ಲ, ಪ್ರಜಾಸತ್ತೆಯ ಗೆಲುವಾಗಿತ್ತು. ಪ್ರಜಾಸತ್ತಾತ್ಮಕವಾಗಿ ಜನರು ಸಂಘಟಿತರಾದರೆ ಯಾವದೇ ದೈತ್ಯ ಕಂಪೆನಿಯನ್ನೂ ಒಂದು ಹಂತದಲ್ಲಿ ಅಲುಗಾಡಿಸಬಹುದು ಎನ್ನುವುದಕ್ಕೆ ಇದೊಂದು ಪುಟ್ಟ ಉದಾಹರಣೆ. ಆದರೆ ಇಲ್ಲಿನ ಕಾನೂನು ವ್ಯವಸ್ಥೆ ಅದೆಷ್ಟು ಅಸೂಕ್ಷ್ಮವಾಗಿದೆಯೆಂದರೆ ಪರಿಸರ ಮಾಲಿನ್ಯದ ವಿರುದ್ಧ ಹೋರಾಡಿದ ನಾಗರಿಕ ಹೋರಾಟ ಸಮಿತಿಯ ಮುಖಂಡರ ಮೇಲೆಯೇ ರೌಡಿ ಶೀಟ್ ತೆರೆದಿದ್ದಾರೆ. ಪೊಲೀಸರಿಗೆ ಈ ಹೋರಾಟಗಾರರು ಬೀದಿ ರೌಡಿಗಳಾಗಿ ಕಂಡಿದ್ದಾರೆ. ಸುಳ್ಳು ಮೊಕದ್ದಮೆಗಳನ್ನು ಮುಂದಿಟ್ಟುಕೊಂಡು ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ರೌಡಿ ಶೀಟ್ ತೆರೆದಿದ್ದು, 50 ಸಾವಿರ ರೂ. ಬಾಂಡ್, ಅಷ್ಟೇ ವೌಲ್ಯದ ಆಸ್ತಿ ಹೊಂದಿರುವ ಜಾಮೀನುದಾರರನ್ನು ಒದಗಿಸುವಂತೆ ಸಮನ್ಸ್ ನೀಡಿದ್ದಾರೆ. ಇಷ್ಟಕ್ಕೂ ಹೋರಾಟಗಾರರು ಮಾಡಿರುವುದು ಏನನ್ನು? ಗೋರಕ್ಷಣೆಯ ಹೆಸರಿನಲ್ಲಿ ಯಾರದೋ ವಾಹನಗಳನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಿ, ಇರುವುದನ್ನೆಲ್ಲ ದೋಚಿದವರಲ್ಲ. ಕೋಮುಗಲಭೆಗಳಿಗೆ ಪ್ರಚೋದನೆ ನೀಡಿದವರೂ ಅಲ್ಲ. ತಮ್ಮ ಬದುಕುವ ಹಕ್ಕಿಗಾಗಿ ಶ್ರೀಸಾಮಾನ್ಯರ ಜೊತೆಗೆ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಸ್ತೆ ತಡೆ ಇತ್ಯಾದಿಗಳು ನಡೆದಿರಬಹುದು. ಆದರೆ ಅಂತಿಮವಾಗಿ ಅವರು ಸರಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಪ್ರಜಾಸತ್ತಾತ್ಮಕವಾದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನುವುದು ಮುಖ್ಯವಾಗಿದೆ. ಬಂಧಿಸುವುದು, ಪ್ರಕರಣ ದಾಖಲಿಸುವುದು ಇವೆಲ್ಲವೂ ಪೊಲೀಸರ ಕರ್ತವ್ಯ ನಿಜ. ಆದರೆ ಸಮಾಜಕ್ಕೆ ಕೆಡುಕನ್ನು ಬಯಸುವ ರೌಡಿಗಳ ಸಾಲಿಗೆ ಇವರನ್ನು ಸೇರಿಸಿವುದರ ಹಿಂದೆ ಎಂಆರ್‌ಪಿಎಲ್ ಮತ್ತು ಸ್ಥಳೀಯ ರಾಜಕೀಯ ಹಿತಾಸಕ್ತಿಗಳ ಕೈವಾಡ ಇದೆ. ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿದು ಪ್ರಕರಣವನ್ನು ದಾಖಲಿಸಿದ್ದಾರೆ.


 ಜನಪರಹೋರಾಟಗಾರರಿಗೆ ರೌಡಿಗಳ ಪಟ್ಟವನ್ನು ಕಟ್ಟುವ ಮೂಲಕ ಪೊಲೀಸ್ ಅಧಿಕಾರಿಗಳು ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯನ್ನೇ ಅವಮಾನಿಸಿದ್ದಾರೆ ಅಥವಾ ಇತ್ತೀಚಿನ ದಿನಗಳಲ್ಲಿ ಕರಾವಳಿಯ ಕಾನೂನು ಪುಸ್ತಕಗಳಲ್ಲಿ ರೌಡಿಗಳ ವ್ಯಾಖ್ಯಾನವೇ ಬದಲಾಗಿರಬೇಕು. ಕರಾವಳಿಯ ಬಹುತೇಕ ಪೊಲೀಸರು ರೌಡಿಗಳ ಜೊತೆಗೆ ಒಳಗೊಳಗೆ ನಂಟನ್ನು ಇಟ್ಟುಕೊಂಡಿರುವ ಪರಿಣಾಮವಾಗಿ ರೌಡಿಗಳು ಮತ್ತು ಹೋರಾಟಗಾರರ ನಡುವಿನ ವ್ಯತ್ಯಾಸ ಗೊತ್ತಾಗದಂತಹ ಮನಸ್ಥಿತಿಯನ್ನು ಅವರು ತಲುಪಿರಬೇಕು. ಬಹುಶಃ ಕರಾವಳಿಯಲ್ಲಿ ಬೀದಿ ಬೀದಿಗಳಲ್ಲಿ ತಲೆಯೆತ್ತಿರುವ ಸಮಾಜ ವಿದ್ರೋಹಿ ಕೃತ್ಯಗಳಿಗೆ ಇಳಿದಿರುವ ರೌಡಿಗಳನ್ನು ಗುರುತಿಸಿ ಅವರ ಮೇಲೆ ಈ ಪ್ರಕರಣವನ್ನು ದಾಖಲಿಸಿದ್ದ್ದರೆ ಇಲ್ಲಿನ ಸಾಮಾಜಿಕ ವಾತಾವರಣ ಒಂದಿಷ್ಟು ಸಹ್ಯವಾಗಿರುತ್ತಿತ್ತು. ಆದರೆ ಪೊಲೀಸರು ಅದಕ್ಕೆ ವ್ಯತಿರಿಕ್ತವಾದ ಕ್ರಮಕ್ಕೆ ಮುಂದಾಗಿದ್ದಾರೆ. ರೌಡಿಗಳನ್ನು ಮೇವು ಹಾಕಿ ಬೆಳೆಸುತ್ತಿರುವ ಇವರು ಸಾಮಾಜಿಕ ಹೋರಾಟಗಾರರಿಗೆ ರೌಡಿಗಳ ಪಟ್ಟ ಕಟ್ಟಿ ಅವರ ಬಾಯಿ ಮುಚ್ಚಿಸುವ ಕೆಲಸಕ್ಕೆ ಇಳಿದಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಾಗಲಿ, ಕರಾವಳಿಯ ಸಚಿವರಾಗಲಿ ಇನ್ನೂ ಬಾಯಿ ತೆರೆದಿಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರಾವಳಿಯ ಜನಪರ ಹೋರಾಟಗಾರರೆಲ್ಲ ರೌಡಿಗಳಾಗಿ ಜೈಲಲ್ಲಿರಬೇಕಾಗುತ್ತದೆ. ರೌಡಿಗಳೆಲ್ಲ ಬೀದಿಯಲ್ಲಿ ಧರ್ಮರಕ್ಷಣೆ, ಗೋರಕ್ಷಣೆಯ ಸೋಗಿನಲ್ಲಿ ಸಮಾಜವನ್ನು ಸರ್ವನಾಶ ಮಾಡಲಿದ್ದಾರೆ. ಈ ಬಗ್ಗೆ ಗೃಹಸಚಿವರು ಎಚ್ಚೆತ್ತುಕೊಂಡು ಕರಾವಳಿಯ ಕಡೆಗೊಮ್ಮೆ ಕಣ್ಣು ಹಾಯಿಸಬೇಕು. ತಕ್ಷಣ ಹೋರಾಟಗಾರರ ಮೇಲಿರುವ ರೌಡಿಶೀಟ್‌ನ್ನು ಹಿಂದೆಗೆಯಬೇಕಲ್ಲದೆ, ಇಂತಹದೊಂದು ಕೃತ್ಯವೆಸಗಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಜೊತೆಗೇ ಕರಾವಳಿಯಲ್ಲಿ ಹತ್ತಿರವಾಗುತ್ತಿರುವ ರೌಡಿ-ಪೊಲೀಸ್ ಸಂಬಂಧಗಳನ್ನು ಗುರುತಿಸುವ ಅಗತ್ಯವೂ ಇದೆ. ಪೊಲೀಸರಿಗೆ ರೌಡಿಗಳು ಯಾರು, ಹೋರಾಟಗಾರರು ಯಾರು, ಎನ್ನುವುದರ ಕುರಿತಂತೆ ಹೊಸದಾಗಿ ಪಾಠ ಬೋಧಿಸುವ ಹೊಣೆಗಾರಿಕೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News