ಕಾವೇರಿ: ತನ್ನ ಮೂಗನ್ನು ತಾನೇ ಕತ್ತರಿಸಿಕೊಂಡ ರಾಜ್ಯ ಬಿಜೆಪಿ

Update: 2016-09-23 05:13 GMT

ಮಹಾಭಾರತದಲ್ಲಿ ಬರುವ ಕತೆ ಇದು. ಪಾಂಡವರು ಕಾಡು ಸೇರುತ್ತಾರೆ. ಪಾಂಡವರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದನ್ನು ನೋಡಿ ಸಂಭ್ರಮಿಸಲು ದುರ್ಯೋಧನ ತನ್ನ ಸಹೋದರರೊಂದಿಗೆ ಕಾಡಿಗೆ ಬರುತ್ತಾನೆ. ಅಲ್ಲಿ ಅವನನ್ನು ಕಾಡುಜನರು ಸೆರೆಹಿಡಿಯುತ್ತಾರೆ. ಇದು ವನವಾಸ ಅನುಭವಿಸುತ್ತಿರುವ ಧರ್ಮರಾಯನಿಗೆ ಗೊತ್ತಾಗಿ ‘ತಕ್ಷಣ ಅವರನ್ನು ಬಿಡಿಸಿಕೊಂಡು ಬನ್ನಿ’ ಎಂದು ತನ್ನ ಸಹೋದರರಿಗೆ ಆದೇಶ ನೀಡುತ್ತಾನೆ. ಆದರೆ ಭೀಮ ‘‘ನಮಗೆ ಇಷ್ಟು ಕಷ್ಟಕೊಟ್ಟಿರುವ ದುರ್ಯೋಧನನಿಗೆ ತಕ್ಕ ಶಾಸ್ತಿಯಾಗಿದೆ’’ ಎಂದು ಸಂಭ್ರಮ ಪಡುತ್ತಾನೆೆ. ಆಗ ಧರ್ಮರಾಯ ಅವನನ್ನು ತಡೆದು ವಿವೇಕ ಹೇಳುತ್ತಾನೆ ‘‘ನಾವು ನಾವು ಹೊಡೆದಾಡಿಕೊಳ್ಳುವಾಗ ಅವರು ನೂರು ಮಂದಿ. ನಾವು ಐದು ಮಂದಿ. ಆದರೆ ಹೊರಗಿನ ಜನರು ನಮ್ಮ ಮೇಲೆ ದಾಳಿ ಮಾಡಿದರೆ ನಾವು ನೂರಾಐದು ಮಂದಿ’’ ಬಹುಶಃ ಸಂಸ್ಕೃತಿಯ ಗುತ್ತಿಗೆ ವಹಿಸಿಕೊಂಡ ರಾಜ್ಯ ಬಿಜೆಪಿಯ ಅಧ್ಯಕ್ಷ ಯಡಿಯೂರಪ್ಪ ಅಥವಾ ಇತರ ಮುಖಂಡರು ಮಹಾಭಾರತದ ಈ ಕತೆಯನ್ನು ಓದಿದಂತಿಲ್ಲ. ಓದಿದ್ದರೆ ಅವರು ಖಂಡಿತಾ ನಿನ್ನೆ ಕಾವೇರಿ ನೀರಿಗೆ ಸಂಬಂಧಪಟ್ಟಂತೆ ನಡೆದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುತ್ತಿರಲಿಲ್ಲ. ತನ್ನ ವರಿಷ್ಠರ ಓಲೈಕೆಗಾಗಿ ರಾಜ್ಯ ಬಿಜೆಪಿ ಇಡೀ ನಾಡಿನ ವಿರೋಧವನ್ನು ಕಟ್ಟಿಕೊಂಡಿದೆ. ಸ್ವತಃ ಬಿಜೆಪಿ ಕಾರ್ಯಕರ್ತರೇ ಪಕ್ಷದ ನಾಯಕರ ವರ್ತನೆಗಾಗಿ ಮುಜುಗರಪಟ್ಟುಕೊಳ್ಳುವಂತಾಗಿದೆ.


 ಕಟ್ಟ ಕಡೆಯವರೆಗೂ ತನ್ನ ಸಹನೆಯನ್ನು ಕಾಪಾಡಿಕೊಂಡ ಬಂದ ಸರಕಾರ, ಸುಪ್ರೀಂಕೋರ್ಟ್ ತೀರ್ಪು ಹೊರ ಬಿದ್ದ ಬೆನ್ನಿಗೇ, ಸಮಸ್ಯೆಯ ಗಂಭೀರತೆ ಅರಿತು ಸರ್ವಪಕ್ಷ ಸಭೆಯನ್ನು ಕರೆಯಿತು. ಜೆಡಿಎಸ್‌ನ ಮುಖಂಡರಾದ ದೇವೇಗೌಡ, ಕುಮಾರಸ್ವಾಮಿಯಂತಹ ನಾಯಕರೂ ಈ ಸಂದರ್ಭದಲ್ಲಿ ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಸರಕಾರದ ಜೊತೆ ನಿಂತರು. ಬಿಜೆಪಿ ಯಾವ ತೀರ್ಮಾನವನ್ನೇ ತೆಗೆದುಕೊಳ್ಳಲಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ, ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುವುದು ಅದರ ಹೊಣೆಗಾರಿಕೆಯಾಗಿತ್ತು. ರಾಜ್ಯದ ರೈತರ ಅಳಿವು ಉಳಿವಿನ ಪ್ರಶ್ನೆ ಇದಾಗಿರುವುದರಿಂದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದೆಂದರೆ, ಜನರ ಸಮಸ್ಯೆಯನ್ನು ಕಾಲಲ್ಲಿ ಜಾಡಿಸಿದಂತೆ. ಇಲ್ಲಿ, ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದೇ ಇರುವುದರಿಂದ ಯಾರಾದರೂ ತೊಂದರೆ ಅನುಭವಿಸುವುದಿದ್ದರೆ ಅದು ಈ ನಾಡಿನ ರೈತರೇ ಆಗಿದ್ದಾರೆ.

ಆದುದರಿಂದ, ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದೇ ಇರುವ ಮೂಲಕ ಕೇಂದ್ರದ ಹಿತಾಸಕ್ತಿಯ ಜೊತೆಗೆ ಕೈಜೋಡಿಸಿ ರಾಜ್ಯದ ಜನರನ್ನು ಬಿಜೆಪಿ ಕೈ ಬಿಟ್ಟಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಮುಖಂಡರು ‘‘ತಮಿಳು ನಾಡು ಪರ ನಿಂತಿರುವುದಕ್ಕಾಗಿ’’ ಮೋದಿಯ ಪೋಟೊ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಂದರೆ ಅಲ್ಲಿನ ಮುಖಂಡರು ಪರೋಕ್ಷವಾಗಿ ಕಾವೇರಿ ನೀರು ತಮಿಳುನಾಡು ಪಾಲಾಗುವುದಕ್ಕೆ ಮೋದಿ ಸಹಕರಿಸಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಹೊಣೆಗಾರಿಕೆ ಬಹುದೊಡ್ಡದಿತ್ತು. ಕಾವೇರಿ ತೀರ್ಪಿನಲ್ಲಿ ಮೋದಿಯ ಪಾತ್ರ ಇಲ್ಲ ಎನ್ನುವುದನ್ನು ಜನರಿಗೆ ಸ್ಪಷ್ಟ ಪಡಿಸುವುದಕ್ಕಾದರೂ ಸರ್ವಪಕ್ಷ ಸಭೆಯನ್ನು ಬಳಸಿಕೊಳ್ಳಬಹುದಿತ್ತು. ಆದರೆ ಅವರು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಂಡರು. ಪರೋಕ್ಷವಾಗಿ ತೀರ್ಪಿನ ಪರವಾಗಿ ನಿಂತರು. ರಾಜ್ಯದ ಹಿತಾಸಕ್ತಿ ಬಂದಾಗ ಪಕ್ಷ, ಜಾತಿ, ಧರ್ಮಗಳು ಯಾವುದೂ ಅಡ್ಡಿಯಾಗುವುದಿಲ್ಲ ಎಂಬ ಮಾತು ರಾಜ್ಯ ಬಿಜೆಪಿ ನಾಯಕರಿಂದಾಗಿ ಹುಸಿಯಾಯಿತು.


ಕಾವೇರಿ ತೀರ್ಪು ಬಂದ ದಿನದಿಂದ ಬಿಜೆಪಿಯೊಳಗಿರುವ ಒಂದು ದೊಡ್ಡ ಗುಂಪು ವೌನಕ್ಕೆ ಶರಣಾಗಿದೆ. ಇದೇ ಸಂದರ್ಭದಲ್ಲಿ, ಯಡಿಯೂರಪ್ಪ ಬಾಯಿ ತೆರೆದರೆ ಸಮಯ ಸಾಧಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘‘ಮುಖ್ಯಮಂತ್ರಿ ಸ್ಥಾನದಲ್ಲಿ ನಾನಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದೆ’’ ಎನ್ನುತ್ತಾರೆ ಯಡಿಯೂರಪ್ಪ. ಸಂಸದರಾಗಿ ನೀವು ಕೇಂದ್ರದಲ್ಲಿ ಎಷ್ಟರ ಮಟ್ಟಿಗೆ ಒತ್ತಡವನ್ನು ಹೇರಿದಿರಿ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಸಂಸದರೊಬ್ಬರು ರಾಜೀನಾಮೆಯ ಪ್ರಸ್ತಾಪ ನೀಡಿದರು. ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಲು ಯಡಿಯೂರಪ್ಪ ಅವರಿಗೆ ಸದ್ಯಕ್ಕಂತೂ ಸಾಧ್ಯವಿಲ್ಲ.

ಮುಖ್ಯಮಂತ್ರಿಯನ್ನು ರಾಜೀನಾಮೆ ನೀಡಬೇಕು ಎಂದು ಹೇಳುವವರು ಕನಿಷ್ಠ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆಯಲ್ಲವೇ? ಕನಿಷ್ಠ ರಾಜೀನಾಮೆಯ ಪ್ರಸ್ತಾಪವನ್ನಾದರೂ ಮಾಡಬಹುದಿತ್ತು. ಆದರೆ ಯಡಿಯೂರಪ್ಪ ಬಿಡಿ, ಬಿಜೆಪಿಯ ಯಾವೊಬ್ಬ ಸಂಸದನೂ ಅಂತಹ ಯಾವ ಹೇಳಿಕೆಯನ್ನೂ ನೀಡಲಿಲ್ಲ. ಇಂತಹದೊಂದು ಸನ್ನಿವೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ನಿರ್ಮಿಸಿದವರು ಯಾರು? ಕೇಂದ್ರದಲ್ಲಿರುವ ವರಿಷ್ಠರು ರಾಜ್ಯ ಬಿಜೆಪಿಯ ಸಂಸದರ ಬಾಯಿ ಮುಚ್ಚಿಸಿರಬಹುದೇ? ತಮಗೆ ಮತ ಹಾಕಿದ ಜನರಿಗಿಂತ ಕೇಂದ್ರದ ವರಿಷ್ಠರೇ ಈ ಬಿಜೆಪಿ ನಾಯಕರಿಗೆ ಶ್ರೇಷ್ಠರಾದರೇ? ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ತನ್ನ ಮುಖ್ಯಮಂತ್ರಿ ಸ್ಥಾನ ಹೋಯಿತು ಎಂದಾಗ ಯಡಿಯೂರಪ್ಪ ಇಡೀ ಬಿಜೆಪಿಯ ವಿರುದ್ಧವೇ ತಿರುಗಿ ಬಿದ್ದರು. ತನಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಈಶ್ವರಪ್ಪ ಅವರು ಪಕ್ಷದ ವರಿಷ್ಠರ ಮಾತುಗಳಿಗೇ ಸೆಡ್ಡು ಹೊಡೆದು ಪ್ರತ್ಯೇಕ ಬ್ರಿಗೇಡನ್ನು ಕಟ್ಟಿಕೊಂಡಿದ್ದಾರೆ.

ಅಂದರೆ, ತಮ್ಮ ಬುಡಕ್ಕೆ ಬಂದಾಗ ಪಕ್ಷದ ವರಿಷ್ಠರಿಗೆ ತಿರುಗುಬಾಣವಾದ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಹೀಗಿರುವಾಗ, ಕಾವೇರಿಯ ವಿಷಯದಲ್ಲಿ ಮಾತ್ರ ಅವರು ಕೇಂದ್ರದ ವರಿಷ್ಠರನ್ನು ನೆಚ್ಚಿಕೊಂಡಿರುವುದು ಕನ್ನಡ ನಾಡಿಗೆ ಎಸಗಿದ ದ್ರೋಹವಾಗಿದೆ. ಕಾವೇರಿ ವಿಷಯದಲ್ಲಿ ಸರಕಾರ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿರುವುದು ಸಮಾಧಾನದ ವಿಷಯ. ಅವಸರವಸರವಾಗಿ ತೀರ್ಪನ್ನು ತಿರಸ್ಕರಿಸಿ ನೀರು ಬಿಡದೇ ಇದ್ದಿದ್ದರೆ, ಕರ್ನಾಟಕ ಬಲು ಬೇಗ ಟೀಕೆಗೆ ಗುರಿಯಾಗಿ ಬಿಡುತ್ತಿತ್ತು. ಕಟ್ಟ ಕಡೆಯವರೆಗೂ ನ್ಯಾಯಕ್ಕಾಗಿ ಕಾದು, ಆ ಬಳಿಕ ತನ್ನ ತೀರ್ಮಾನವನ್ನು ತೆಗೆದುಕೊಳ್ಳಲು ಹೊರಟಿದೆ. ಇದಕ್ಕಾಗಿ ವಿಶೇಷ ಅಧಿವೇಶನವನ್ನೂ ಕರೆದಿದೆ.

ಈ ಅಧಿವೇಶನದಲ್ಲಾದರೂ ಬಿಜೆಪಿ ನಾಡಿನ ಪರವಾಗಿ ಗಟ್ಟಿಯಾಗಿ ನಿಂತು ಮಾತನಾಡಬೇಕು. ಎಲ್ಲರೂ ಒಂದಾಗಿ ನಿಂತರೆ, ಖಂಡಿತವಾಗಿಯೂ ಅದಕ್ಕೆ ಸುಪ್ರೀಂಕೋರ್ಟ್ ತಲೆಬಾಗಲೇ ಬೇಕಾಗುತ್ತದೆ. ಯಾಕೆಂದರೆ ಪ್ರಜಾಸತ್ತೆಯ ಗಟ್ಟಿ ಧ್ವನಿಗೆ ತಲೆಬಾಗುವುದು ಸುಪ್ರೀಂಕೋರ್ಟ್‌ನ ಕರ್ತವ್ಯವೂ ಹೌದು. ಸುಪ್ರೀಂಕೋರ್ಟ್ ಸರ್ವಾಧಿಕಾರಿ ಅಲ್ಲ ಎನ್ನುವುದನ್ನು ತಿಳಿಸಿಕೊಡುವಲ್ಲಿ, ನಾಳಿನ ಅಧಿವೇಶನ ಪ್ರಮುಖ ಪಾತ್ರವಹಿಸಬೇಕಾಗಿದೆ. ಅಧಿವೇಶ ಯಶಸ್ವಿಯಾಗಬೇಕಾದರೆ, ಸರಕಾರಕ್ಕಿಂತಲೂ ವಿರೋಧ ಪಕ್ಷಗಳ ಪಾತ್ರ ದೊಡ್ಡದು. ಇನ್ನಾದರೂ ಇದನ್ನು ರಾಜ್ಯದ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News