ಕೇಂದ್ರಸರಕಾರವೂ ಎಸ್ಟಿಪಿ-ಟಿಎಸ್ಪಿಕಾಯ್ದೆಜಾರಿಗೆ ತರಲಿ: ಅಮೀನ್ ಮಟ್

Update: 2016-09-25 18:50 GMT

ಬೆಂಗಳೂರು, ಸೆ.25: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ರಾಜ್ಯ ಸರಕಾರದ ಮಾದರಿಯಲ್ಲೆ ಎಸ್ಟಿಪಿ-ಟಿಎಸ್ಪಿ ಕಾಯ್ದೆಯನ್ನು ಕೇಂದ್ರ ಸರಕಾರವೂ ಜಾರಿಗೆ ತರುವಂತೆ ಸಲಹೆ ನೀಡಬೇಕೆಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಅಮೀನ್ ಮಟ್ಟು , ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯರಿಗೆ ಮನವಿ ಮಾಡಿದ್ದಾರೆ. ರವಿವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೇಲ್ಕುಂಡಿ ಮಹದೇವಸ್ವಾಮಿ ರಚಿಸಿರುವ ಅಂಬೇಡ್ಕರ್ ಕಣ್ಣೀರಿಟ್ಟ ಕ್ಷಣಗಳು ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಟಿಪಿ ಮತ್ತು ಟಿಎಸ್ಪಿ ಕಾಯ್ದೆ ಜಾರಿಯಿಂದಾಗಿ ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಅದೇ ರೀತಿಯಾಗಿ ಕೇಂದ್ರ ಸರಕಾರ ಕೂಡ ಎಸ್ಟಿಪಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತರುವಂತೆ ಕೇಂದ್ರ ಸರಕಾರದ ಸಲಹಾ ಸಮಿತಿಯ ಸದಸ್ಯರಾಗಿರುವ ಸಾಹಿತಿ ಸಿದ್ದಲಿಂಗಯ್ಯ ಅವರು ಸಲಹೆ ನೀಡಬೇಕೆಂದು ಮನವಿ ಮಾಡಿದರು. ೋಚರ ಅಸ್ಪಶ್ಯತೆ ಕಡಿಮೆಯಾಗಿದ್ದರೂ ಅಗೋಚರ ಅಸ್ಪಶ್ಯತೆ ವಿಶ್ವ ವಿದ್ಯಾನಿಲಯಗಳಲ್ಲಿ ಇನ್ನೂ ಜೀವಂತವಾಗಿದೆ. ಈ ಅಗೋಚರ ಅಸ್ಪಶ್ಯತೆಗೆ ಕಡಿವಾಣ ಹಾಕಬೇಕಾದರೇ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮತ್ತಷ್ಟು ಅರಿಯಬೇಕು ಹಾಗೂ ಖಾಸಗೀಕರಣದಲ್ಲಿ ಮೀಸಲಾತಿ ಒದಗಿಸಬೇಕೆಂದು ಹೋರಾಟಗಳನ್ನು ನಡೆಸಬೇಕೆಂದು ಕರೆ ನೀಡಿದರು.
ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಮಾತನಾಡಿ, ಕೇಂದ್ರ ಸರಕಾರದ ಸಲಹಾ ಸಮಿತಿಯ ಸದಸ್ಯರಾಗಿ ಒಟ್ಟು ಐದು ಜನರು ಆಯ್ಕೆಯಾಗಿದ್ದು, ಅದರಲ್ಲಿ ದಕ್ಷಿಣ ಭಾರತದಿಂದ ನನ್ನನ್ನೂ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ, ಅಮೀನ್ ಮಟ್ಟು ಅವರ ಮನವಿಯಂತೆಯೇ ಕೇಂದ್ರ ಸರಕಾರ ಕೂಡ ಎಸ್ಟಿಪಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತರುವಂತೆ ಸಲಹೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಬಹುಜನ ಗುರುಪೀಠ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ತಮಗಾಗಿ ಏಕೆ ಕಣ್ಣೀರು ಸುರಿಸಿದರು ಎಂಬುದನ್ನು ಅರಿಯದೇ, ಅವರನ್ನೆ ನಾವು ಮಾರಾಟದ ವಸ್ತುವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾರತೀಯರ ಮನಸ್ಸುಗಳು ಕೊಳಕು ಮನಸ್ಸುಗಳಾಗಿದ್ದು, ಇವರಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರು ಅನಿವಾರ್ಯವಾಗದೇ ಹುಟ್ಟುವಾಗಲು ಜಾತಿ ಎನ್ನುತ್ತಾರೆ ಸತ್ತ ಮೇಲೂ ಜಾತಿ ಹೇಳಿಕೊಂಡು ಸ್ಮಶಾನಗಳಿಗೆ ಹೊತ್ತುಕೊಂಡು ಹೋಗಿ ಹೂಳುತ್ತಾರೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನುಸಿದ್ದಾರ್ಥ, ಸಾಹಿತಿ ಮೇಲ್ಕುಂಡಿ ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News