ಕುಡಿದು ಡ್ರೈವಿಂಗ್: ಇನ್ನು ಚಾಲಕನ ಜೊತೆ ಪ್ರಯಾಣಿಕರಿಗೂ ಬರೆ?

Update: 2016-09-26 03:17 GMT

ಚೆನ್ನೈ, ಸೆ.26: ಪಾನಮತ್ತನಾದ ಚಾಲಕ ಚಾಲನೆ ಮಾಡುತ್ತಿರುವ ಕಾರು ಮಾರಣಾಂತಿಕ ಅಪಘಾತಕ್ಕೀಡಾದಲ್ಲಿ, ಚಾಲಕನ ಜೊತೆಗೆ ಅದರಲ್ಲಿ ಪ್ರಯಾಣಿಸುತ್ತಿದ್ದವರ ಮೇಲೂ ಪ್ರಕರಣ ದಾಖಲಿಸಲು ಅವಕಾಶವಿದೆ. ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 109ರ ಅನ್ವಯ ಪ್ರಯಾಣಿಕರ ಮೇಲೂ ಪ್ರಕರಣ ದಾಖಲಿಸಬಹುದಾಗಿದೆ. ಪ್ರಯಾಣಿಕರು ಇದರಲ್ಲಿ ನೇರವಾಗಿ ಶಾಮೀಲಾಗದಿದ್ದರೂ, ಕುಮ್ಮಕ್ಕು ನೀಡಿದ ಪ್ರಕರಣ ದಾಖಲಿಸಬಹುದಾಗಿದೆ ಎಂದು ಚೆನ್ನೈ ಸಂಚಾರಿ ಪೊಲೀಸರು ಹೇಳುತ್ತಾರೆ.

ಆದರೆ ಈ ಕ್ರಮ ಸಾಧುವಲ್ಲ ಎನ್ನುವುದು ಅಪಘಾತ ಪ್ರಕರಣಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ವಕೀಲರ ಅಭಿಮತ. ಇತ್ತೀಚಿನ ಇಂಥ ಒಂದು ಪ್ರಕರಣದಲ್ಲಿ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ ವಿಕಾಸ್ ಆನಂದ್ ಹಾಗೂ ಆತನ ಸ್ನೇಹಿತ ಟಿ.ಚರಣ್‌ಕುಮಾರ್ ವಿರುದ್ಧ ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ. ಇದು ಕೊಲೆಯಲ್ಲ. ಕಾರು ಚರಣ್‌ಗೆ ಸೇರಿದ್ದರೂ ಅವರು ಕಾರು ಚಾಲನೆ ಮಾಡುತ್ತಿರಲಿಲ್ಲ. ಆದರೆ ಅವರ ಸ್ನೇಹಿತ ಪಾನಮತ್ತನಾಗಿ ಚಾಲನೆ ಮಾಡುತ್ತಿರುವುದು ಮತ್ತು ಇದು ಅಪಘಾತಕ್ಕೆ ಕಾರಣವಾಗಬಹುದು ಎನ್ನುವುದು ಅವರಿಗೆ ತಿಳಿದಿತ್ತು. ಆನಂದ್ ಚಾಲನೆ ಮಾಡುತ್ತಿದ್ದಾಗ ಚರಣ್ ಏಕೈಕ ಸಹಪ್ರಯಾಣಿಕರಾಗಿದ್ದರು.

ಕಳೆದ ಫೆಬ್ರವರಿಯಲ್ಲೂ ಇಂಥದ್ದೇ ಒಂದು ಪ್ರಕರಣ ಸಂಭವಿಸಿತ್ತು. ಆದರೆ ಬಾಡಿಗೆ ಕಾರಿನಲ್ಲಿ ನೀವು ಪ್ರಯಾಣಿಸುತ್ತಿರುವಾಗ ಚಾಲಕ ಮದ್ಯಪಾನ ಮಾಡಿ ಚಾಲನೆ ಮಾಡಿದರೆ ಯಾರು ಹೊಣೆ ಎನ್ನುವ ಪ್ರಶ್ನೆಯನ್ನು ವಕೀಲರು ಮುಂದಿಡುತ್ತಾರೆ. ಪೊಲೀಸರು ಆರೋಪಪಟ್ಟಿ ಸಲ್ಲಿಸುವ ಮುನ್ನ ಆಳವಾಗಿ ತನಿಖೆ ನಡೆಸಬೇಕು ಎನ್ನುವುದು ಅವರ ಸಲಹೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News